ಹುಬ್ಬಳ್ಳಿ, ಧಾರವಾಡ. ಡಾ.ರಾಜಕುಮಾರ್ ಮತ್ತವರ ಕುಟುಂಬ ಎಂದೆಂದೂ ಮರೆಯದ ಊರು. ಉತ್ತರ ಕರ್ನಾಟಕ ಮಂದಿ ನಮ್ಮನ್ನ ಬಾಳ ಪ್ರೀತಿಸ್ತಾರ..ಎಂದು ಗಂಧದ ಗುಡಿಯಲ್ಲಿ ಅಪ್ಪು ಹೇಳಿದ್ದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಡಾ.ರಾಜ್ ಅವರ ಫ್ಯಾಮಿಲಿ ನಿರ್ಮಾಪಕರಾಗಿದ್ದು ಇಲ್ಲಿಂದಲೇ.

ಡಾ.ರಾಜ್ ಹಾಗೂ ಪಾರ್ವತಮ್ಮ ನಿರ್ಮಾಪಕರಾಗುವುದಕ್ಕೆ ಓಂಕಾರ ಬಿದ್ದಿದ್ದು ಇಲ್ಲಿಯ ಸಿದ್ಧಾರೂಢ ಮಠದಿಂದಲೇ. ಸಿನಿಮಾಗಳಿಲ್ಲದೇ ಇದ್ದ ಕಾಲದಲ್ಲಿ ಡಾ.ರಾಜ್ ಮತ್ತವರ ತಂಡ ಬಸವೇಶ್ವರರ ನಾಟಕ ಮಾಡಿ, ಆ ನಾಟಕದಿಂದ ಬಂದ ಹಣದಲ್ಲಿ ಬಂಡವಾಳ ಹೂಡಿ ಮೊದಲ ಬಾರಿಗೆ ನಿರ್ಮಾಪಕರಾಗಿದ್ದರು. ಅದೇ ರಣಧೀರ ಕಂಠೀರವ. ದೊಡ್ಡ ಪಾಲು ಡಾ.ರಾಜ್ ಮತ್ತು ಪಾರ್ವತಮ್ಮ ಅವರದ್ದು. ಆ ಚಿತ್ರಕ್ಕೆ ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ಬಾಲಕೃಷ್ಣ, ನರಸಿಂಹರಾಜು ಹಾಗೂ ಲೀಲಾವತಿ ಕೂಡಾ ತಮ್ಮ ತಮ್ಮ ಕೈಲಾದಷ್ಟು ಬಂಡವಾಳ ಹಾಕಿದ್ದರು. ಚೆನ್ನೈನಲ್ಲಿದ್ದ ಕನ್ನಡ ಚಿತ್ರರಂಗವನ್ನು ಆ ರೀತಿ, ರಣಧೀರ ಕಂಠೀರವ ಚಿತ್ರದ ಮೂಲಕ ಕರ್ನಾಟಕಕ್ಕೆ ಕರೆದುತಂದಿದ್ದರು ಡಾ.ರಾಜ್. ಆ ಚಿತ್ರಕ್ಕೆ ಥಿಯೇಟರುಗಳನ್ನೇ ಕೊಡದೆ, ಪ್ರಿಂಟುಗಳನ್ನೂ ಕೊಡದೆ ಆಟವಾಡಿಸಿದ್ದು, ಆ ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಂತು ಡಾ.ರಾಜ್ ಗೆದ್ದಿದ್ದು ಬೇರೆಯದೇ ಕಥೆ. ಆಗ ರಣಧೀರ ಕಂಠೀರವ ಬಿಡುಗಡೆಯಾಗಿತ್ತಲ್ಲ, ಹಾಗೆ ಬಿಡುಗಡೆಯಾದ ಚಿತ್ರಕ್ಕೆ ಕೊಟ್ಟಿದ್ದು ಒಂದೇ ಒಂದು ಪ್ರಿಂಟ್. ರಿಲೀಸ್ ಆಗಿದ್ದು ಮೈಸೂರಿನ ಭಾರತ್ ಟಾಕೀಸಿನಲ್ಲಿ. ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ಹೋರಾಟದಿಂದಾಗಿ 4 ವಾರಗಳ ನಂತರ ಥಿಯೇಟರ್ ಸಿಕ್ಕಿತ್ತು. ಡಾ.ರಾಜ್ ಚಿತ್ರವಾದರೂ ಅಷ್ಟೆ, ಆಗ ಇದ್ದ ಸವಾಲು ಅಂತಹದ್ದು. ಅಂತಹದ್ದೆಲ್ಲವನ್ನೂ ಮೀರಿ, ಮೆಟ್ಟಿನಿಂತು ಅವಮಾನ ಅನುಭವಿಸಿಯೇ ಬೆಳೆದವರು ಡಾ.ರಾಜ್. ತಾವೊಬ್ಬರೇ ಅಲ್ಲ, ಚಿತ್ರರಂಗವನ್ನೂ ಬೆಳೆಸಿದರು.


ಈಗಾಗಲೇ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಹಾಸನಗಳನ್ನೆಲ್ಲ ಒಂದು ಸುತ್ತು ಮುಗಿಸಿ ಉತ್ತರ ಕನಾಟಕಕ್ಕೆ ಹೊರಟಿರುವ ಚಿತ್ರತಂಡ ಈಗಾಗಲೇ ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ಹೊಸಪೇಟೆ, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿಗಳಲ್ಲಿ ಚಿತ್ರಮಂದಿರಕ್ಕೆ ಭೇಟಿ ಕೊಟ್ಟಿದೆ.



ಡಾ.ರಾಜ್ ಅವರನ್ನು ಅಮರರನ್ನಾಗಿಸಿದಿ ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು.. ಹಾಡು ಚಿತ್ರೀಕರಣವಾಗಿದ್ದು ಇದೇ ಹುಬ್ಬಳ್ಳಿಯಲ್ಲಿ. ಡಾ.ರಾಜ್ ನಿರ್ಮಾಪಕರಾಗಿದ್ದು ಇದೇ ಹುಬ್ಬಳ್ಳಿಯಿಂದ. ಪಾರ್ವತಮ್ಮ ವಿತರಕರಾಗಿದ್ದು ಇದೇ ಹುಬ್ಬಳ್ಳಿಯಿಂದ. ಪುನೀತ್ ಅವರು ಪಿ.ಆರ್.ಕೆ.ಪ್ರೊಡಕ್ಷನ್ಸ್ ಶುರು ಮಾಡಿದ, ಗೀತಾ ಶಿವ ರಾಜ್ ಕುಮಾರ್ ಆರಂಭಿಸಿರುವ ಸಂಸ್ಥೆ ಗೀತಾ ಪಿಕ್ಚರ್ಸ್. ಉತ್ತರ ಕರ್ನಾಟಕ, ಹುಬ್ಬಳ್ಳಿ, ಧಾರವಾಡ ಡಾ.ರಾಜ್ ಕುಟುಂಬಕ್ಕೆ ಕೇವಲ ಒಂದು ಊರಲ್ಲ. ಡಾ.ರಾಜ್, ಪಾರ್ವತಮ್ಮ ಅವರೇ ಹೇಳಿಕೊಂಡಂತೆ ಅದು ಅನ್ನ, ಆಶ್ರಯ ನೀಡಿದ ಊರು.



