ಕಾಂತಾರ ಸೆ.24ರಂದು ಅಂದರೆ ಈ ದಿನ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ. ವಿಶ್ವದಾದ್ಯಂತ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ ಕಾಂತಾರ ಈಗ ಮನೆ ಮನೆಗೂ ಬಂದಿದೆ. 50 ದಿನ ಪೂರೈಸಿದ ಬೆನ್ನಲ್ಲೇ ಸಿನಿಮಾ ಒಟಿಟಿಗೆ ಬರುವುದನ್ನೇ ಜನ ಕಾಯುತ್ತಿದ್ದರು. ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದು ಕೊನೆಯ 20 ನಿಮಿಷಗಳ ದೈವದ ನರ್ತನ. ಗುಳಿಗನ ಆರ್ಭಟ. ಪಂಜುರ್ಲಿಯ ದೈವ ಸ್ವರೂಪ. ಅದೆಲ್ಲವನ್ನೂ ಕೇವಲ ರಿಷಬ್ ಶೆಟ್ಟಿಯ ನಟನೆಯ ಜೊತೆ ಜೊತೆಗೆ ಪ್ರೇಕ್ಷಕರನ್ನು ಆವರಿಸಿದ್ದು ವರಾಹರೂಪಂ.. ಹಾಡು. ಆದರೆ ಒಟಿಟಿಯಲ್ಲಿ ರಿಲೀಸ್ ಆಗಿರುವ ಕಾಂತಾರದಲ್ಲಿ ವರಾಹರೂಪಂ.. ಹಾಡನ್ನೇ ಬದಲಿಸಲಾಗಿದೆ.
ಅಂದರೆ ಸಿನಿಮಾದಲ್ಲಿದ್ದ ವರಾಹರೂಪಂ.. ಹಾಡು ಬೇರೆ. ಒಟಿಟಿಯಲ್ಲಿರುವ ಕಾಂತಾರದಲ್ಲಿ ಬರುತ್ತಿರುವ ಹಾಡು ಬೇರೆ. ಸಂಗೀತವೂ ಬೇರೆ. ತೈಕ್ಕುಡಂ ಬ್ರಿಡ್ಜ್ ತಂಡದವರು ಕಾಂತಾರದ ವರಾಹರೂಪಂ.. ಹಾಡಿನ ವಿರುದ್ಧ ಕಾಪಿರೈಟ್ ಉಲ್ಲಂಘನೆ ಕೇಸು ಹಾಕಿದ್ದರು. ಕೋರ್ಟಿನ ಮೊರೆ ಹೋಗಿದ್ದರು. ತೈಕ್ಕುಡಂ ಬ್ರಿಡ್ಜ್ ತಂಡದ ಮನವಿಗೆ ಕೋರ್ಟ್ ಕೂಡಾ ಸ್ಪಂದಿಸಿತ್ತು. ತೈಕ್ಕುಡಂ ಬ್ರಿಡ್ಜ್ ತಂಡದವರು ಸುಮಾರು 5 ವರ್ಷ ಹಳೆಯ ನವರಸಂ ಆಲ್ಬಂನಲ್ಲಿ ಬಳಸಿದ್ದ ಸಂಗೀತವನ್ನೇ ಅಜನೀಶ್ ಲೋಕನಾಥ್ ನಕಲು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಕೇರಳದ ಕೊಯಿಕ್ಕೋಡ್ ಕೋರ್ಟ್ ತಡೆ ನೀಡಿತ್ತು. ಅದರ ಎಫೆಕ್ಟ್ ಒಟಿಟಿಯಲ್ಲಿ ಕಾಣಿಸುತ್ತಿದೆ.
ಕೋರ್ಟ್ ಮೆಟ್ಟಿಲೇರಿದಾಗ ನಾವು ಕಾನೂನು ಸಮರ ಮಾಡುತ್ತೇವೆ. ನಾವು ಕಾಪಿ ಮಾಡಿಲ್ಲ ಎಂದಿದ್ದರು ರಿಷಬ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಆದರೆ ಕೋರ್ಟಿನ ಆದೇಶಕ್ಕೆ ತಡೆಯಾಜ್ಞೆ ತರುವ ನಿಟ್ಟಿನಲ್ಲಿಯೂ ವಿಫಲವಾಗಿರುವ ಹೊಂಬಾಳೆ ಸಂಸ್ಥೆ ಈಗ ಹೃದಯವೇ ಇಲ್ಲದ ಕಾಂತಾರವನ್ನು ಒಟಿಟಿಗೆ ಬಿಟ್ಟಿದೆ. ವರಾಹರೂಪಂ.. ಹಾಡೇನೋ ಇದೆ. ಆದರೆ ಅದು ಥಿಯೇಟರುಗಳಲ್ಲಿ ಕೇಳಿಸಿದ್ದ ವರಾಹರೂಪಂ.. ಹಾಡಲ್ಲ. ಅಲ್ಲಿಗೆ ಮೊದಲ ಹಂತದ ಹೋರಾಟದಲ್ಲಿ ಕಾಂತಾರ ಚಿತ್ರಕ್ಕೆ, ವರಾಹರೂಪಂ ಹಾಡಿಗೆ ಸೋಲಾಗಿದೆ.
ತೈಕ್ಕುಡಂ ಬ್ರಿಡ್ಜ್ ತಂಡದವರು ತಮ್ಮನ್ನು ಚಿತ್ರ ತಂಡದ ಯಾರೊಬ್ಬರೂ ಸಂಪರ್ಕಿಸಿಲ್ಲ. ನಾವು ಹಣಕ್ಕಾಗಿ ಕೇಸ್ ಹಾಕಿಲ್ಲ. ನಮಗೆ ನಮ್ಮ ಕ್ರೆಡಿಟ್ ಕೊಡಿ ಎಂದು ಕೇಳಿದ್ದೆವು ಎಂದಿದ್ದರು. ಆದರೆ ಚಿತ್ರತಂಡದವರು ಆ ಕೆಲಸವನ್ನೂ ಮಾಡದೆ ಹಠಕ್ಕೆ ಬಿದ್ದರಾ? ವಿಷಯವೇನೇ ಇರಲಿ, ಸದ್ಯಕ್ಕೆ ಕಾಂತಾರ ಒಟಿಟಿಯಲ್ಲಿದೆ. ಆದರೆ ಚಿತ್ರಮಂದಿರದಲ್ಲಿದ್ದ ವರಾಹರೂಪಂ.. ಹಾಡು ಇಲ್ಲಿಲ್ಲ. ಅಷ್ಟೆ.



