ವರಾಹರೂಪಂ ದೈವವರೀತಂ.. ಹಾಡನ್ನು ಇನ್ನು ಮೊದಲಿನಂತೆಯೇ ಕೇಳಬಹುದು. ತಡೆಯಾಜ್ಞೆ ತೆರವಾಗಿದೆ. ಇದು ಮೊದಲು ಬಂದ ಸುದ್ದಿ. ಆರ್ಡರ್ ಕಾಪಿ ಇರದೇ ಹೋಗಿದ್ದರೂ ಸುದ್ದಿ ಮೂಲಗಳನ್ನಾಧರಿಸಿ ವರದಿಯೂ ಆಯ್ತು. ಬ್ರೇಕಿಂಗ್ ನ್ಯೂಸ್ ಕೂಡಾ ಬಂತು. ಹೊಂಬಾಳೆ ತಂಡದವರೂ ಹೌದು, ತಡೆಯಾಜ್ಞೆ ತೆರವಾಗಿದೆ ಎಂದು ಕನ್‍ಫರ್ಮ್ ಮಾಡಿದರು. ಆದರೆ ಕೆಲವೇ ಗಂಟೆಗಳಲ್ಲಿ ತಡೆಯಾಜ್ಞೆ ತೆರವಾಗಿಲ್ಲ ಎಂಬ ವರದಿ ಬಂತು. ಮತ್ತೆ ತಡೆಯಾಜ್ಞೆ ಜಾರಿಯಲ್ಲಿದೆ ಎಂದು ವರದಿಯಲ್ಲಿದೆ ಎಂದು ಸುದ್ದಿಯಾಯ್ತು. ಈಗಲೂ ತಡೆಯಾಜ್ಞೆ ಜಾರಿಯಲ್ಲಿದೆ. ಇಷ್ಟಕ್ಕೂ ವಿವಾದವಾಗಿದ್ದು, ಗೊಂದಲವಾಗಿದ್ದು ಏಕೆ? ಇಲ್ಲಿದೆ ಒಂದು ಕಂಪ್ಲೀಟ್ ರಿಪೋರ್ಟ್.
ವರಾಹರೂಪಂ ದೈವವರೀತಂ.. ಒಂದರ್ಥದಲ್ಲಿ ಹೇಳಬೇಕೆಂದರೆ ಕಾಂತಾರದ ಸಿಗ್ನೇಚರ್ ಟ್ಯೂನ್. ರಿಷಬ್ ಶೆಟ್ಟಿ ನಟನೆ, ನಿರ್ದೇಶನ, ಸಪ್ತಮಿ ಗೌಡ ಸೇರಿದಂತೆ ಚಿತ್ರದ ಎಲ್ಲ ಕಲಾವಿದರ ಅಭಿನಯ ಮತ್ತು ತಂತ್ರಜ್ಞರ ಪರಿಶ್ರಮ ಎಲ್ಲವೂ ಸೇರಿ, ಕೊನೆಗೆ ದೈವಬಲವೂ ಸೇರಿ ಹಿಟ್ ಆದ ಸಿನಿಮಾ ಕಾಂತಾರ. ಇವುಗಳಲಿ ದೊಡ್ಡ ಮಟ್ಟಕ್ಕೆ ಕೆಲಸ ಮಾಡಿದ್ದು ಅಜನೀಶ್ ಲೋಕನಾಥ್ ಅವರ ಸಂಗೀತ.
ಹಾಡನ್ನು ಮೆಚ್ಚಿಕೊಂಡವರಿಗೆಲ್ಲ ಶಾಕ್ ಆಗಿತ್ತು. ಏಕೆಂದರೆ ಹಾಡು ತಮ್ಮದು ತೈಕ್ಕುಡಂ ಬ್ರಿಡ್ಜ್ ಎಂಬ ಕೇರಳದ ಮ್ಯೂಸಿಕ್ ತಂಡದವರು ಕೇಸು ಹಾಕಿದರು. ವರಾಹರೂಪಂ.. ರಾಗ..ತಾಳವನ್ನೇ ಹೋಲುವ ತೈಕ್ಕುಡಂ ಬ್ರಿಡ್ಜ್‍ನವರ ನವರಸನ್.. ಅಲ್ಬಂ, 2017ರಿಂದಲೇ ಯೂಟ್ಯೂಬ್‍ನಲ್ಲಿತ್ತು. ಅದೇ ಹಾಡಿನಿಂದ ಸ್ಫೂರ್ತಿ ಪಡೆದಿದ್ದೇವೆಯೇ ಹೊರತು ನಕಲು ಮಾಡಿಲ್ಲ ಎಂದರು ರಿಷಬ್ ಶೆಟ್ಟಿ ಮತ್ತು ಅಜನೀಶ್ ಲೋಕನಾಥ್. ವಿವಾದ ಕೋರ್ಟ್ ಮೆಟ್ಟಿಲೇರಿತು. ಕೇರಳದ ಕೋಝಿಕ್ಕೋಡ್ ಹಾಗೂ ಪಾಲಕ್ಕಾಡ್ ಕೋರ್ಟಿನಲ್ಲಿ ವರಾಹರೂಪಂ.. ಹಾಡು ಮತ್ತು ಸಂಗೀತದ ಬಳಕೆಗೆ ತಡೆಯಾಜ್ಞೆ ನೀಡಿತು. ತಡೆಯಾಜ್ಞೆ ತೆರವುಗೊಳಿಸುವ ಕುರಿತಂತೆ ಕೇರಳ ಹೈಕೋರ್ಟ್‍ನಲ್ಲಿ ಕೂಡಾ ಹೊಂಬಾಳೆ ಸಂಸ್ಥೆಗೆ ಹಿನ್ನಡೆಯಾಗಿತ್ತು. ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕಾರಣ, ತಡೆಯಾಜ್ಞೆ ತೆರವು ಸಾಧ್ಯವಿಲ್ಲ ಎಂದಿತ್ತು ಹೈಕೋರ್ಟ್.
ಇದರ ಮಧ್ಯೆ ಕೇರಳದ ಕೋಝಿಕ್ಕೋಡ್ ನ್ಯಾಯಾಲಯದಲ್ಲಿ ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವಾಯ್ತು. ಅದೇ ಕೋರ್ಟಿನಲ್ಲಿ ತೈಕ್ಕುಡಂ ಬ್ರಿಡ್ಜ್ ತಂಡದವರು ಅರ್ಜಿ ಸಲ್ಲಿಸಿದ್ದರು. ತೈಕ್ಕುಡಂ ತಂಡದ ಅರ್ಜಿಯನ್ನೇ ವಜಾ ಮಾಡಿತು ಕೋಝಿಕ್ಕೋಡ್ ನ್ಯಾಯಾಲಯ. ತಡೆಯಾಜ್ಞೆ ತೆರವು ಎಂದೇ ಎಲ್ಲ ಭಾವಿಸಿದರು. ಆದರೆ ಎಲ್ಲರೂ ಮರೆತಿದ್ದುದು ಏಕೆಂದರೆ ತೈಕ್ಕುಡಂ ತಂಡದವರು ಪಾಲಕ್ಕಾಡ್ ಕೋರ್ಟಿನಲ್ಲಿಯೂ ಅರ್ಜಿ ಸಲ್ಲಿಸಿದ್ದ ವಿಷಯ. ಪಾಲಕ್ಕಾಡ್ ಕೋರ್ಟ್ ತಡೆಯಾಜ್ಞೆ ಇನ್ನೂ ತೆರವಾಗಿಲ್ಲ. ಸ್ಸೋ.. ಹಾಗಾಗಿ ಕಾಂತಾರಂ ಚಿತ್ರದಲ್ಲಿ ವರಾಹರೂಪಂ ದೈವವರೀತಂ.. ಹಾಡಿನ ಅದೇ ಮ್ಯೂಸಿಕ್ ಬಳಕೆಗೆ ಇದ್ದ ನಿರ್ಬಂಧ ಈಗಲೂ ಜಾರಿಯಲ್ಲಿದೆ.
ಮುಂದೇನು?
ಕೋಝೀಕ್ಕೋಡ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವಾಗಿದೆ. ಪಾಲಕ್ಕಾಡ್ ಕೋರ್ಟಿನ ಆದೇಶ ಎದುರು ನೋಡುತ್ತಿದ್ದೇವೆ. ಅಲ್ಲಿಯೂ ನಿರ್ಬಂಧ ತೆರವಾಗುವ ಭರವಸೆ ಇದೆ. ತೆರವಾದರೆ ಚಿತ್ರದಲ್ಲಿ ಹಳೆಯ ಹಾಡನ್ನೇ ಬಳಸಲಾಗುವುದು. ಕೇವಿಯಟ್ ಹಾಕಿರುವ ಕಾರಣ ಇನ್ನು ಮುಂದೆ ಸಮಸ್ಯೆ ಭಾದಿಸದು ಎಂದಿದ್ದಾರೆ ವರಾಹರೂಪಂ ಹಾಡಿಗೆ ಸಾಹಿತ್ಯವನ್ನೂ ಬರೆದಿರುವ ಕೋರ್ಟಿನಲ್ಲಿ ವಾದವನ್ನೂ ಮಾಡಿರುವ ವಕೀಲ ಶಶಿರಾಜ್ ಕಾವೂರು.
ಕೇವಿಯಟ್ ಎಂದರೇನು?
ಯಾರಾದರೂ ಯಾವುದಾದರೂ ವಿಷಯದಲ್ಲಿ ಅರ್ಜಿ ಹಾಕಿದರೆ, ಕೇಸು ದಾಖಲು ಮಾಡಿದರೆ ತಡೆ ನೀಡುವ ಆದೇಶ ನೀಡಿ ಎಂದು ಕೋರ್ಟ್ ಮೊರೆ ಹೋದರೆ ಅಥವಾ ಹೋಗುತ್ತಾರೆ ಎಂಬ ನಿರೀಕ್ಷೆ ಇದ್ದರೆ ಕೋರ್ಟಿನಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಇಂತಹದ್ದೊಂದು ಪ್ರಕರಣ ನ್ಯಾಯಾಲಯದ ಎದುರು ಬರುವ ಸಾಧ್ಯತೆ ಇದೆ. ಆ ರೀತಿ ದೂರು ದಾಖಲಾದರೆ ನಮ್ಮ ವಾದವನ್ನು ಆಲಿಸಬೇಕು, ಅನಂತರವೇ ತೀರ್ಪು ನೀಡಬೇಕು ಎಂದು ಮನವಿ ಮಾಡಿ ಸಲ್ಲಿಸುವ ಅರ್ಜಿ.



