ಕಾಂತಾರದ ವರಾಹರೂಪಂ ಹಾಡನ್ನು ಪೂರ್ತಿಯಾಗಿ ಕೇಳಿ. ಹಾಗೆಯೇ ತೈಕ್ಕುಡಂ ಬ್ರಿಡ್ಜ್ ತಂಡದ ನವರಸಂ ಹಾಡನ್ನೂ ಕೇಳಿ. ಎರಡಕ್ಕೂ ಸಾಮ್ಯತೆ ಇದೆ ಅನ್ನಿಸುತ್ತದೆ ಅಲ್ಲವಾ? ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನವರಸಂ ಹಾಡಿನಲ್ಲಿ ಬಳಸಿರುವ ಸಂಗೀತವನ್ನೇ ಕೇವಲ ಇನ್ಸ್‍ಟ್ರುಮೆಂಟ್ ಬದಲಿಸಿ ಮಕ್ಕಿಕಾಮಕ್ಕಿ ಭಟ್ಟಿ ಇಳಿಸಿದ್ದಾರೆ ಎನ್ನಿಸುತ್ತದೆ ಅಲ್ಲವಾ? ಅದನ್ನಿಟ್ಟುಕೊಂಡೇ ಕೊಳಿಕ್ಕೋಡ್ ನ್ಯಾಯಾಲಯದಿಂದ ಸ್ಟೇ ತಂದಿದೆ ತೈಕ್ಕುಡಂ ಬ್ರಿಡ್ಜ್ ತಂಡ.
ನಾವು ಕೇಸ್ ಹಾಕಿರೋದು ದುಡ್ಡಿಗಾಗಿ ಅಲ್ಲ. ಜಸ್ಟ್ ಫಾರ್ ಕ್ರೆಡಿಟ್. ನಮಗೆ ಸಿಗಬೇಕಾದ ಹೆಸರು ಕೊಟ್ಟರೆ ಸಾಕು, ಬೇರೇನೂ ಬೇಡ ಎನ್ನುವುದು ತೈಕ್ಕುಡಂ ವಾದ. ತೈಕ್ಕುಡಂ ಬ್ರಿಡ್ಜ್ ಟೀಂನವರು ಹೊಂಬಾಳೆಯವರನ್ನು ಸಂಪರ್ಕಿಸಲು ಇನ್ನಿಲ್ಲದ ಸರ್ಕಸ್ ಮಾಡಿದ್ದಾರೆ. ರಿಷಬ್ ಶೆಟ್ಟಿಯವರಾಗಲೀ, ಅಜನೀಶ್ ಲೋಕನಾಥ್ ಅವರಾಗಲೀ ಸಂಪರ್ಕಕ್ಕೇ ಸಿಕ್ಕಿಲ್ಲ. ಹೀಗಾಗಿ ನಾವು ವಿಧಿಯಿಲ್ಲದೆ ಕೇಸ್ ಹಾಕಬೇಕಾಯಿತು. ಬೇರೆ ದಾರಿಯಿರಲಿಲ್ಲ. ನಾವು ಆಫ್ಟರಾಲ್ ಪುಟ್ಟದೊಂದು ಮ್ಯೂಸಿಕ್ ಬಾಂಡ್‍ನವರು. ಹೊಂಬಾಳೆಯವರಷ್ಟು ಪ್ರಬಲರಲ್ಲ ಎನ್ನುವ ವಾದ ಮುಂದಿಡುತ್ತಾರೆ ವಿಯಾನ್. ತೀರ್ಪು ಏನೇ ಬಂದರೂ ಸ್ವಾಗತಿಸುತ್ತೇವೆ. ಹೋರಾಟ ಮಾಡಿದ ತೃಪ್ತಿಯೇ ಸಾಕು ನಮಗೆ ಎನ್ನುತ್ತಾರೆ ವಿಯಾನ್.
ತೀರ್ಪು ಏನೇ ಬಂದರೂ.. ಎಂದರೆ.. ಹಾಗಾದರೆ ತೈಕ್ಕುಡಂ ಬ್ರಿಡ್ಜ್ ತಂಡದವರ ವಾದವನ್ನು ಕೋರ್ಟಿನಲ್ಲಿ ಗೆಲ್ಲೋಕಾಗಲ್ವಾ? ಯಾವ ಕಾರಣಕ್ಕೆ ಹೀಗಾಗಲು ಸಾಧ್ಯ? ಇಲ್ಲಿಯೇ ಇರುವುದು ಸ್ಪೆಷಲ್ಲು. ಕೋರ್ಟಿನಲ್ಲಿ ಈ ವಾದವನ್ನು ಇಟ್ಟುಕೊಂಡು ವಾದ ಮಾಡಲು ಇವರಿಗೆ ಎಷ್ಟು ಅವಕಾಶಗಳಿವೆಯೋ.. ಕಾಂತಾರ ತಂಡದವರಿಗೂ ಅಷ್ಟೆ ಅವಕಾಶಗಳಿವೆ. ಅದನ್ನು ಅರ್ಥ ಮಾಡಿಕೊಳ್ಳೋ ಮೊದಲು ನಾವು ಹಿಂದೂಸ್ತಾನಿ ಸಂಗೀತ ಮತ್ತು ಕರ್ಣಾಟಿಕ್ ಸಂಗೀತದ ಬಗ್ಗೆ ಬೇಸಿಕ್ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಅಂದಹಾಗೆ ಕರ್ಣಾಟಿಕ್ ಸಂಗೀತವೆಂದರೆ ಕರ್ನಾಟಕದ ಸಂಗೀತ ಎಂದರ್ಥವಲ್ಲ. ಅದು ಒಂದು ಸಂಗೀತದ ಪ್ರಕಾರ.
ಎಲ್ಲ ಬಗೆಯ ಸಂಗೀತಗಳಲ್ಲು ಇರುವುದು ಬಹುತೇಕ ಒಂದೇ ಮಾದರಿಯ ರಾಗಗಳು. ಏಳೇ ಸ್ವರಗಳು. ಭಾರತದಲ್ಲಿ ಸೃಷ್ಟಿಯಾಗಿರುವ ವಿವಿಧ ಸಂಗೀತ ಪ್ರಕಾರಗಳು, ಶೈಲಿಗಳಿಗೆಲ್ಲ ಈ ಎರಡು ಬೇರುಗಳಿದ್ದಂತೆ. ಇವುಗಳಿಂದಲೇ ಟಿಸಿಲೊಡೆದವು ಉಳಿದ ಸಂಗೀತ ಪ್ರಕಾರಗಳು.
ಈಗ ವರಾಹ ರೂಪಂ ಹಾಡಿಗೆ ಬಂದರೆ ಇಲ್ಲಿ ಬಳಕೆಯಾಗಿರುವುದು ತೋಡಿ ರಾಗ. ಅಜನೀಶ್ ಲೋಕನಾಥ್ ಹೇಳಿದ್ದರಲ್ಲ, ಹಾಗೆಯೇ ನವರಸಂ ಹಾಡಿನಲ್ಲೂ ಬಳಸಿರುವುದು ತೋಡಿ ರಾಗ. ಮೇಲ್ನೋಟಕ್ಕೆ ಹಾಗೆ ಅನ್ನಿಸುವುದು ಸತ್ಯವಾದರೂ ಸಂಗೀತ ತಜ್ಞರು ಹೇಳುವುದೇ ಬೇರೆ. ತೋಡಿ ರಾಗ ಹಿಂದೂಸ್ತಾನಿ ಸಂಗೀತದ ಶೈಲಿಯೇ ಬೇರೆ. ಕರ್ಣಾಟಿಕ್ ಸಂಗೀತದ ಶೈಲಿಯೇ ಬೇರೆ. ಕರ್ಣಾಟಿಕ್ ಸಂಗೀತದ ತೋಡಿ ರಾಗ ಅತ್ಯಂತ ಹಳೆಯ ರಾಗಗಳಲ್ಲಿ ಒಂದು. ಇದನ್ನು ಹೆಚ್ಚಾಗಿ ಕಥಕ್ಕಳಿಯಲ್ಲಿ ಬಳಸುತ್ತಾರೆ. ತೋಡಿ ರಾಗ ಹೇಗೆಲ್ಲ ಬದಲಾಯ್ತು ಅನ್ನೋದನ್ನು ನೋಡುತ್ತಾ ಹೋದರೆ ವರಾಹರೂಪಂ ಹಾಗೂ ನವರಸಂನ ರಿಯಾಲಿಟಿ ಅರ್ಥವಾಗುತ್ತಾ ಹೋಗುತ್ತೆ.
ಮಾರ್ನಿಂಗ್ ರಾಗ ಚಿತ್ರದ ತಾಯಿ ಯಶೋಧೆ.. ಹಾಡು ಕೇಳಿದ್ದೀರಲ್ಲ. ಒಂದ್ಸಲ ಆ ಹಾಡನ್ನೂ ಕೇಳಿ. ಕಾಂತಾರದ ಹಾಡನ್ನೂ ಕೇಳಿ. ಸೇಮ್ ಅನ್ನಿಸದಿದ್ದರೆ ಹೇಳಿ ಅನ್ನೋದು ಕಾಂತಾರದ ಪರ ನಿಂತವರ ವಾದ. ಸಂಗೀತ ಜ್ಞಾನವಿಲ್ಲದವರು ಮಾತ್ರವೇ ಇದನ್ನೆಲ್ಲ ಆರೋಪಿಸೋಕೆ ಸಾಧ್ಯ. ಎರಡೂ ಹಾಡುಗಳನ್ನು ಕೇಳಿದವರು ಕಾಂತಾರದ ಹಾಡನ್ನು ಕಾಪಿ ಎಂದೇ ಹೇಳುತ್ತಾರೆ. ಎರಡೂ ಕಡೆ ಕರ್ಣಾಟಕ ಸಂಗೀತದ ತೋಡಿ ರಾಗ ಬಳಸಲಾಗಿದೆ. ಆದರೆ ತೋಡಿ ರಾಗವನ್ನು ವೀಣೆ ಮತ್ತು ಗಿಟಾರ್ ಮೂಲಕ ಪ್ರತ್ಯೇಕವಾಗಿ ಕೇಳಿದಾಗಲಷ್ಟೇ ಗೊತ್ತಾಗುತ್ತದೆ. ಇದು ಕಾಪಿ ಅಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿರುವ ಕೆಲವು ಸಂಗೀತ ತಜ್ಞರು ವಾದಿಸಿದ್ದಾರೆ.
ಆದರೆ ಕೋರ್ಟಿಗೆ ಹೋಗಿರುವ ತಜ್ಞರ ಪ್ರಕಾರ ಹೊಂಬಾಳೆ ಈ ವಿವಾದಕ್ಕೆ ಭಾರಿ ದಂಡ ತೆರಲಿದೆ ಎನ್ನುತ್ತಾರೆ. ವಿವಾದ ಇತ್ಯರ್ಥವಾಗುವುದು ಕೋರ್ಟಿನಲ್ಲಿ. ಕೋರ್ಟು ಏನು ಹೇಳುತ್ತೋ.. ಅದನ್ನು ಎಲ್ಲರೂ ಗೌರವಿಸಲೇಬೇಕಲ್ವಾ?



