ಕಾಂತಾರದ ವರಾಹರೂಪಂ ಹಾಡು ಈಗ ಇಡೀ ಭಾರತದಾದ್ಯಂತ ಗುನುಗುನುಗುತ್ತಿದೆ. ಕಾಂತಾರದ ಕ್ರೇಜ್ ಹೇಗಿದೆಯೆಂದರೆ.. ಸತತ 5ನೇ ವಾರವೂ ಹೌಸ್‍ಫುಲ್. ಸಿಂಗಾರ ಸಿರಿಯೇ.. ಹಾಡು ಪ್ರೇಮಿಗಳಿಗೆ ರೋಮಾಂಚನ ನೀಡಿದ್ದರೆ ವರಾಹರೂಪಂ.. ದೈವೀಕ ಕಳೆ ಕೊಟ್ಟಿತ್ತು. ಅಜನೀಶ್ ಲೋಕನಾಥ್ ಸಂಗೀತಕ್ಕೆ ಜನ ವ್ಹಾವ್ ಎಂದಿದ್ದರು. ಈಗ ಆ ಹಾಡಿಗೆ ಕೇರಳದ ಕೊಳಿಕ್ಕೋಡ್ ನ್ಯಾಯಾಲಯ ತಡೆ ನೀಡಿದ. ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ಅನುಮತಿ ಇಲ್ಲದೆ ವರಾಹ ರೂಪಂ.. ಹಾಡನ್ನ ಬಳಕೆ ಮಾಡುವಂತಿಲ್ಲ ಎಂದು ಕೇರಳ ಕೋರ್ಟ್ ಆದೇಶ ನೀಡಿದೆ.
ಕಾಂತಾರದಲ್ಲಿ ಬಳಸಲಾದ ವರಾಹ ರೂಪಂ.. ತಮ್ಮ ಒರಿಜಿನಲ್ ಸಾಂಗ್ ನವರಸಂನಿಂದ ಯಥಾವತ್ ಕಾಪಿ ಮಾಡಿದ್ದಾರೆ ಎಂದು ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ಕೋರ್ಟ್ ಮೆಟ್ಟಿಲೇರಿತ್ತು. ಕಾನೂನು ಹೋರಾಟಕ್ಕೆ ನೆರವಾಗುವಂತೆ ಸಂಗೀತಗಾರರು, ಕಲಾವಿದರನ್ನು ಕೇಳಿಕೊಂಡಿತ್ತು. ಕೋರ್ಟ್ ತೈಕ್ಕುಡಂ ಬ್ರಿಡ್ಜ್ ಮನವಿಗೆ ಸ್ಪಂದಿಸಿ ಅವರ ಪರವಾಗಿಯೇ ತೀರ್ಪು ಕೊಟ್ಟಿದೆ.
ರಾಗಗಳು ಒಂದೇ ಹೊರತು ಕಾಪಿ ಮಾಡಿದ್ದಲ್ಲ. ಹಾಗಾಗಿ ಈ ರೀತಿ ಅನ್ನಿಸುವುದು ಸಹಜ ಎಂದು ಸ್ಪಷ್ಟನೆ ಕೊಟ್ಟಿದ್ದು ಅಜನೀಶ್ ಲೋಕನಾಥ್. ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಹಾಡು ಕಾಪಿ ಮಾಡಿದ್ದಲ್ಲ. ನ್ಯಾಯಾಂಗ ಹೋರಾಟ ನಡೆಸುತ್ತೇವೆ ಎಂದಿದ್ದರು. ಈಗ ಕೋರ್ಟ್ ತಡೆಯಾಜ್ಞೆ ನೀಡಿದೆ.
ಕೊಲಿಕ್ಕೋಡ್‍ನ ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಅಮೇಜಾನ್, ಯೂಟ್ಯೂಬ್, ಸ್ಫೂಫಿ, ವಿಂಕ್ ಮ್ಯೂಸಿಕ್, ಜಿಸೋವಾನ್ ಸೇರಿದಂತೆ ಎಲ್ಲರಿಗೂ ಅನ್ವಯವಾಗಲಿದೆ. ನವರಸಂ ಹಾಡಿನ ಮೂಲ ಸೃಷ್ಟಿಕರ್ತರಾದ ತೈಕ್ಕುಡಂ ಬ್ರಿಡ್ಜ್ ಅನುಮತಿಯಿಲ್ಲದೆ ಹಾಡನ್ನು ಬಳಸುವಂತಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ತೈಕ್ಕುಡಂ ಬ್ರಿಡ್ಜ್ ಪರವಾಗಿ ಸುಪ್ರೀಂಕೋರ್ಟ್ ವಕೀಲ ಸತೀಶ್ ಮೂರ್ತಿ ವಾದಿಸುತ್ತಿದ್ದಾರೆ.

ಆದರೆ ಈ ಬಗ್ಗೆ ಹೊಂಬಾಳೆಯವರು ಕಾನೂನು ಹೋರಾಟ ನಡೆಸಬೇಕು. ಕಾನೂನು ಹೋರಾಟಕ್ಕೆ ಸಿದ್ಧವಾಗಿತ್ತು ಎಂಬ ಸುದ್ದಿಯೂ ಇತ್ತು. ಖುದ್ದು ರಿಷಬ್ ಶೆಟ್ಟಿಯವರೇ ಈ ಬಗ್ಗೆ ಹೇಳಿಕೊಂಡಿದ್ದರು. ಹೊಂಬಾಳೆಯವರೇನಾದರೂ ಕೇವಿಯಟ್ ಹಾಕಿಕೊಂಡಿದ್ದರೆ ಈ ತಡೆಯಾಜ್ಞೆ ಆದೇಶವನ್ನು ಮೀರಿಯೂ ಹಾಡನ್ನು ಬಳುಸುವುದಕ್ಕೆ ಅವಕಾಶವಿದೆ. ಈ ಬಗ್ಗೆ ಹೊಂಬಾಳೆಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೋರ್ಟ್ ಆದೇಶ ನೀಡಿದ್ದರೂ ಅದನ್ನು ಜಾರಿಗೆ ತರಲು ಕಾಲಾವಕಾಶದ ಕೊರತೆಯೂ ಇದೆ. ಈ ಎಲ್ಲ ಗೊಂದಲಗಳಿಂದಾಗಿ ಈ ಕ್ಷಣಕ್ಕೆ ತಕ್ಷಣಕ್ಕೆ ತೀರ್ಪು ಜಾರಿ ಸಾಧ್ಯವಾಗದೇ ಹೋಗಬಹುದು. ಮೇಲ್ಮನವಿಯೂ ಹೋಗಬಹುದು. ಹಾಗೇನಾದರೂ ಆದರೆ ಕಾಪಿರೈಟ್ ಉಲ್ಲಂಘನೆ ಕಾಯಿದೆ ಅಡಿಯಲ್ಲಿ ಸುದೀರ್ಘ ವಿಚಾರಣೆ ನಡೆದು ತೀರ್ಪು ಬರಲಿದೆ.



