ಉಪೇಂದ್ರ. ಕನ್ನಡದ ಸೆನ್ಸೇಷನಲ್ ಡೈರೆಕ್ಟರ್.. ತಮ್ಮ ಚಿತ್ರಗಳಿಂದ ಹೊಸತು ಹೊಸತನ್ನೇ ಸೃಷ್ಟಿಸಿದವರು. ಒಂದಕ್ಷರದ ಟೈಟಲ್ (ಶ್), ಡಬಲ್ ಮೀನಿಂಗ್ ಡೈಲಾಗ್ (ತರ್ಲೆ ನನ್ಮಗ), ರೌಡಿಗಳಿಂದ ಆಕ್ಟಿಂಗ್ (ಓಂ), ಚಿತ್ರ ವಿಚಿತ್ರ ಪೋಸ್ಟರ್ (ಎ), ವಿಚಿತ್ರಗಳ ಸಮ್ಮಿಲನ..ಭಾವನೆಗಳೇ ಪಾತ್ರ (ಉಪೇಂದ್ರ), ರೋಬೋಟ್ ಪಾತ್ರ (ಹಾಲಿವುಡ್)..ಹೀಗೆ ಉಪ್ಪಿ ಸೃಷ್ಟಿಸಿದ ಹೊಸತನಗಳ ಲಿಸ್ಟು ದೊಡ್ಡದಾಗಿಯೇ ಇದೆ. ಅಂತಹ ಉಪ್ಪಿ ಈಗ ಹಾಡುಗಳಲ್ಲೂ ಹೊಸ ಜಗತ್ತು ತೋರಿಸೋಕೆ ಹೊರಟಿದ್ಧಾರೆ.
ಮೊದಲೆಲ್ಲ ಹಾಡುಗಳ ರೆಕಾರ್ಡಿಂಗ್ ಲೈವ್ ಸ್ಟುಡಿಯೋಗಳಲ್ಲಿ ಆಗುತ್ತಾ ಇತ್ತು. ತಬಲಾ, ವೀಣೆ, ಗಿಟಾರ್, ಪಿಟೀಲು.. ಹೀಗೆ ಪ್ರತಿಯೊಂದು ಮ್ಯೂಸಿಕ್ ಪರಿಕರಗಳನ್ನು ಹಾಗೂ ನುಡಿಸುವವರನ್ನೂ ಒಟ್ಟಿಗೇ ಕೂರಿಸಿ.. ಒಟ್ಟಿಗೇ ತಯಾರಿ ನಡೆಸಿ.. ಒಟ್ಟಿಗೇ ರೆಕಾರ್ಡಿಂಗ್ ಮಾಡುವ ಪದ್ಧತಿ ಇತ್ತು. ಅಷ್ಟೂ ಜನ ವಾದ್ಯವೃಂದದಲ್ಲಿ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ.. ಅಥವಾ.. ಒಂದೇ ಒಂದು ಮೈಕ್ ರೆಕಾರ್ಡಿಂಗ್ ವ್ಯತ್ಯಾಸವಾದರೆ.. ಉಳಿದೆಲ್ಲರೂ ಮತ್ತೆ ರಿಪೀಟ್ ಮಾಡಬೇಕಿತ್ತು. ಆಗಿನ ಕಾಲದ ಬಹುತೇಕ ಸಂಗೀತ ಹಾಡುಗಳ ರೆಕಾರ್ಡಿಂಗ್ ಆರಂಭದ ದಿನಗಳಲ್ಲಿ ಮದ್ರಾಸಿನಲ್ಲಿಯೇ ಆಗುತ್ತಿತ್ತು. ಕಾಲಕ್ರಮೇಣ ಬೆಂಗಳೂರಿಗೆ ಶಿಫ್ಟ್ ಆಯ್ತು. ಈಗ ಅದು ಪುಟ್ಟ ರೂಮಿಗೆ ಬಂದಿದೆ. ಡಿಜಿಟಲ್ ಆಗಿದೆ. ಆದರೆ.. ಉಪೇಂದ್ರರ ಯುಐ ಆ ಸಂಗೀತದ ಮರುಸೃಷ್ಟಿಗಾಗಿಯೇ ಹಂಗರಿಗೆ ಹೋಗಿದೆ.
ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ‘ಯುಐ’ ಚಿತ್ರದ ಸಂಗೀತ ರೆಕಾರ್ಡಿಂಗ್ ಹಂಗರಿಯಲ್ಲಿ ರೆಕಾರ್ಡ್ ಮಾಡಲಾಗುತ್ತಿದೆ. ಈ ಹಿಂದೆ ಅದ್ದೂರಿ ಸೆಟ್ ನಿರ್ಮಿಸಿ ಈ ಹಾಡುಗಳ ಚಿತ್ರೀಕರಣ ಮಾಡಲಾಗಿತ್ತು. ಈಗ ಸಂಗೀತವನ್ನು ಹೊರದೇಶದ ಆರ್ಕೆಸ್ಟ್ರಾದಲ್ಲಿ ರೆಕಾರ್ಡ್ ಮಾಡಲಾಗುತ್ತಿದೆ.
ನಮ್ಮ ಸಂಗೀತಕ್ಕೆ ಹೊಸ ಶೈಲಿಯ ಸ್ಪರ್ಶ ನೀಡುವ ಉದ್ದೇಶದಿಂದ ಬುಡಾಪೆಸ್ಟ್ ಆರ್ಕೆಸ್ಟ್ರಾದಲ್ಲಿ ರೆಕಾರ್ಡ್ ಮಾಡುತ್ತಿದ್ದೇವೆ. ಸಂಗೀತದ ಮೂಲಕವೂ ಹೊಸ ಪ್ರಪಂಚ ಸೃಷ್ಟಿಸುವ ಯೋಚನೆ ನಮ್ಮದು ಎನ್ನುತ್ತಾರೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಈ ಹಿಂದೆ ‘ವಿಕ್ರಾಂತ್ ರೋಣ’ ಹಾಗೂ ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳಿಗೂ ಇದೇ ರೀತಿ ವಿದೇಶದಲ್ಲಿ ರೆಕಾರ್ಡಿಂಗ್ ಮಾಡಿದ ಅನುಭವ ಅಜನೀಶ್ ಲೋಕನಾಥ್ ಅವರಿಗೆ ಇದೆ.
ಬುಡಾಪೆಸ್ಟ್ ಆರ್ಕೆಸ್ಟ್ರಾವನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದು ಎಂಬ ಪ್ರಶ್ನೆಗೂ ಅಜನೀಶ್ ಅವರಲ್ಲಿ ಉತ್ತರ ಇದೆ. ಅಜನೀಶ್ ಅವರಿಗೆ ಪೂರ್ವ ಯೂರೋಪ್ನ ಬುಡಾಪೆಸ್ಟ್ನಲ್ಲಿರುವ ಜನಪದ ಮಿಶ್ರಿತ ಸಂಗೀತ ಬೇಕಾಗಿತ್ತಂತೆ. ಒಂದೇ ಹಾಡನ್ನು ಬೇರೆ ಬೇರೆ ಪ್ರಾಂತ್ಯದವರು ಹಾಡುವಾಗ ಹೇಗೆ ಬೇರೆ ರೀತಿ ಕೇಳಿಸುತ್ತದೆಯೋ, ಅದೇ ರೀತಿ ಅಲ್ಲಿನ ರೀತಿ ವಿಭಿನ್ನವಾಗಿದೆ. ಅದು ನಮ್ಮ ಚಿತ್ರದ ಪ್ರಪಂಚಕ್ಕೆ ಸರಿಯಾಗಿ ಹೊಂದುತ್ತದೆ. ಸಂಗೀತ ನಿರ್ದೇಶನ ನನ್ನದೇ ಆದರೆ.. ಅದನ್ನು ಅಲ್ಲಿನ ಶೈಲಿಯಲ್ಲಿ ನುಡಿಸುತ್ತಾರೆ ಎನ್ನುತ್ತಾರೆ ಅಜನೀಶ್ ಲೋಕನಾಥ್.
‘ಯುಐ’ ಸಿನಿಮಾವನ್ನು ಲಹರಿ ಸಂಸ್ಥೆ ಮತ್ತು ಕೆ ಪಿ ಶ್ರೀಕಾಂತ್ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಹಲವು ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರುವುದಕ್ಕೆ ಉಪೇಂದ್ರ ಪ್ಲ್ಯಾನ್ ಮಾಡಿಕೊಂಡಿದ್ದಾರೆ.