ರಾಜ್ ಬಿ.ಶೆಟ್ಟಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಕಾನ್ಫಿಡೆನ್ಸ್ ಕೊಟ್ಟಿದ್ದು ಗರುಡ ಗಮನ ವೃಷಭ ವಾಹನ. ಗಗವೃವಾ ಚಿತ್ರದ ಗೆಲುವಿನ ಬೆನ್ನಲ್ಲೇ ಬರುತ್ತಿದೆ ಟೋಬಿ. ಆಗಸ್ಟ್ 25ಕ್ಕೆ ಟೋಬಿ ಬರಲಿದ್ದಾನೆ.
ಟೋಬಿ ಚಿತ್ರಕ್ಕೆ ‘ಮಾರಿ ಮಾರಿ.. ಮಾರಿಗೆ ದಾರಿ’ ಎಂಬ ಅಡಿಬರಹವಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಟೋಬಿ ಸಿನಿಮಾವನ್ನು ವಿತರಣೆ ಮಾಡುತ್ತಿದೆ. ರಿಲೀಸ್ ಡೇಟ್ ಘೋಷಣೆ ಜೊತೆಗೆ ಒಂದು ಮೋಷನ್ ಪೋಸ್ಟರ್ ಸಹ ಬಿಡುಗಡೆ ಮಾಡಿದೆ ಚಿತ್ರತಂಡ.
ರಾಜ್ ಚಿತ್ರಗಳ ಬಜೆಟ್ ಚಿಕ್ಕದಾಗಿರುತ್ತೆ ಎನ್ನುವವರಿಗೆ ಈ ಬಾರಿ ದೊಡ್ಡ ಬಜೆಟ್ಟಿನಲ್ಲೇ ಸಿನಿಮಾ ಮಾಡಿ ಉತ್ತರ ಕೊಟ್ಟಿದ್ದಾರೆ. ಒಂದು ಮೊಟ್ಟೆಯ ಕಥೆ, ಗಗವೃವಾ ಚಿತ್ರಗಳಿಗಿಂತಲೂ ಈ ಚಿತ್ರಕ್ಕೆ ಹಾಕಿರುವ ಬಜೆಟ್ ಸುಮಾರು 5 ಪಟ್ಟು ಹೆಚ್ಚು. ಹಾಗಂತ ಬಿಲ್ಡಪ್ ಇರಲ್ಲ. ಎಂದಿನಂತೆ ಈ ಚಿತ್ರಕ್ಕೂ ಕಥೆಯೇ ಹೀರೋ.
ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ನಿರ್ಮಾಪಕರು. ಶಾಮಿಲ್ ಬಂಗೇರ ಕಾರ್ಯಕಾರಿ ನಿರ್ಮಾಪಕರು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಟೋಬಿ ವಿತರಣೆ ಮಾಡುತ್ತಿದೆ. ಬೆಲ್ ಬಾಟಂ ಕಥೆಗಾರ ಟಿಕೆ ದಯಾನಂದ್ ಟೋಬಿ ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ. ಮೂಲಕಥೆ ಅವರದ್ದೇ. ಸ್ಕ್ರಿಪ್ಟ್ ಅನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ಬಾಸಿಲ್ ಟೋಬಿ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಹಿಂದಿನ ಸಿನಿಮಾಗಳಿಗೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರೇ ಇಲ್ಲಿಯೂ ಮುಂದುವರಿದಿದ್ದಾರೆ.
ರಾಜ್ ಬಿ ಶೆಟ್ಟಿ ಜೊತೆಗೆ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್, ಗೋಪಾಲ ಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ, ಅಶ್ವಿನ್ ಹಾಸನ್ ಮುಂತಾದವರು ಟೋಬಿ ತಾರಾಗಣದಲ್ಲಿದ್ದಾರೆ.



