ದಕ್ಷಿಣದ ಚಿತ್ರಗಳು ಪ್ರಾದೇಶಿಕ ಚಿತ್ರಗಳು ಸೃಷ್ಟಿಸಿರುವ ಸಂಚಲನ ಬಾಲಿವುಡ್ನವರಿಗೆ ನಡುಕ ತರಿಸಿರುವುದಂತೂ ಸತ್ಯ. ಅದರಲ್ಲೂ ಸೌಥ್ ಸಿನಿಮಾಗಳನ್ನು, ತಂತ್ರಜ್ಞರನ್ನು, ಕಲಾವಿದರನ್ನು ಬಾಲಿವುಡ್ ದೂರವಿಡುತ್ತಿದ್ದ ಕಾಲವೊಂದಿತ್ತು. ನಡು ನಡುವೆ ಕೆಲವರು ಹೆಜ್ಜೆ ಗುರುತು ಮೂಡಿಸಿದರೂ ದೀರ್ಘಕಾಲ ಆಗಲಿಲ್ಲ. ದಕ್ಷಿಣದ ಚಿತ್ರಗಳನ್ನೇ ರೀಮೇಕ್ ಮಾಡಿ ಗೆಲ್ಲುತ್ತಿದ್ದವರಿಗೆ ಒಟಿಟಿ ಬಂದ ನಂತರ ಅವೂ ಕೈಹಿಡಿಯುತ್ತಿಲ್ಲ. ಮಲಯಾಳಂ, ತೆಲುಗು, ತಮಿಳು ಹಾಗೂ ನಮ್ಮ ಕನ್ನಡದ ಚಿತ್ರಗಳು ಸೃಷ್ಟಿಸುತ್ತಿರು ಹೊಸ ಹೊಸ ಕಥೆಗಳು ಹಿಂದಿ ಚಿತ್ರರಂಗವನ್ನು ಸೋತು ಸುಣ್ಣವಾಗುವಂತೆ ಮಾಡಿವೆ.
ಈ ವರ್ಷದ ಲೆಕ್ಕವನ್ನೇ ತೆಗೆದುಕೊಂಡರೆ ಬಾಲಿವುಡ್ನಲ್ಲಿ ಅಮೀರ್ ಖಾನ್, ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ರಣ್ಬೀರ್ ಕಪೂರ್, ಅಜಯ್ ದೇವಗನ್, ಅಮಿತಾಭ್ ಬಚ್ಚನ್, ಕಂಗನಾ ರಣಾವತ್, ಕರೀನಾ ಕಪೂರ್, ದೀಪಿಕಾ ಪಡುಕೋನೆ, ಆಲಿಯಾ ಭಟ್.. ಹೀಗೆ ಯಾರ ಚಿತ್ರಗಳೂ ಗೆದ್ದಿಲ್ಲ. ಈ ವರ್ಷ ಗೆದ್ದ ಚಿತ್ರಗಳೆಂದರೆ ಬೂಲ್ ಬುಲಯ್ಯಾ 2 ಹಾಗೂ ಬ್ರಹ್ಮಾಸ್ತ್ರ. ಹಾಗೆ ನೋಡಿದರೆ ಬ್ರಹ್ಮಾಸ್ತ್ರ ಚಿತ್ರ ಕೂಡಾ ಬಜೆಟ್ಗೆ ತಕ್ಕಂತೆ ಕಲೆಕ್ಷನ್ ಮಾಡಲಿಲ್ಲ. ಈಗ ಇನ್ನೊಂದು ಏಟು.

ಮಣಿರತ್ನಂ ನಿರ್ದೇಶನದ ಐಶ್ವರ್ಯಾ ರೈ ಬಚ್ಚನ್, ತ್ರಿಶಾ, ವಿಕ್ರಂ, ಕಾರ್ತಿ, ಜಯಂ ರವಿ.. ಮೊದಲಾದವರು ನಟಿಸಿದ್ದ ಐತಿಹಾಸಿಕ ಕಥೆಯಾಧರಿಸಿದ ಪೊನ್ನಿಯನ್ ಸೆಲ್ವನ್ ಈಗ 450 ಕೋಟಿ ಬಾಚಿದೆ. ಇನ್ನೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಪೊನ್ನಿಯನ್ ಸೆಲ್ವನ್ 500 ಕೋಟಿ ದಾಟುವ ಎಲ್ಲ ಸೂಚನೆಗಳೂ ಇವೆ. ಇದು ಪ್ಯಾನ್ ಇಂಡಿಯಾ ಮೂವಿಯಾಗಿದ್ದರೂ ತಮಿಳಿನಲ್ಲಿ ತಯಾರಾಗಿದ್ದ ಸಿನಿಮಾ. ಈಗ ಪೊನ್ನಿಯನ್ ಸೆಲ್ವನ್ಗೆ 3ನೇ ಸ್ಥಾನ ಸಿಕ್ಕಿದೆ. 4ನೇ ಸ್ಥಾನಕ್ಕೆ ಜಾರಿರುವುದು ಬ್ರಹ್ಮಾಸ್ತ್ರ.
2ನೇ ಸ್ಥಾನದಲ್ಲಿ ರಾಜಮೌಳಿಯ ಆರ್.ಆರ್.ಅರ್. ಇದೆ. ಎನ್.ಟಿ.ಆರ್., ರಾಮ್ ಚರಣ್ ತೇಜ ನಟಿಸಿದ್ದ ಚಿತ್ರ 1112 ಕೋಟಿ ಗಳಿಸಿತ್ತು. ಈಗ ಜಪಾನ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.ಇದು ತೆಲುಗು ಸಿನಿಮಾ.
ನಂ.1 ಸ್ಥಾನದಲ್ಲಿ ನಮ್ಮ ಕನ್ನಡದ ಕೆಜಿಎಫ್ ಚಾಪ್ಟರ್ 2 ಇದೆ. ಪ್ರಶಾಂತ್ ನೀಲ್, ಯಶ್ ಹಾಗೂ ಹೊಂಬಾಳೆ ಕಾಂಬಿನೇಷನ್ನ ಸಿನಿಮಾ 1207 ಕೋಟಿ ಸಂಪಾದಿಸಿತ್ತು. ಅಲ್ಲಿಗೆ ಮೊದಲ ಸ್ಥಾನ ಕನ್ನಡ ಸಿನಿಮಾದ್ದು, 2ನೇ ಸ್ಥಾನ ತೆಲುಗು ಸಿನಿಮಾದ್ದು ಹಾಗೂ 3ನೇ ಸ್ಥಾನ ತಮಿಳು ಸಿನಿಮಾದ್ದು. ಅದಾದ ನಂತರವೂ ಅಷ್ಟೆ. 4ನೇ ಸ್ಥಾನದಲ್ಲಿ ಹಿಂದಿಯ ಬ್ರಹ್ಮಾಸ್ತ್ರ ಇದೆಯಾದರೂ, ಮತ್ತೆ ತಮಿಳಿನ ವಿಕ್ರಂ, ಬೀಸ್ಟ್, ವಲಿಮೈ ಕನ್ನಡದ ವಿಕ್ರಾಂತ್ ರೋಣ, 777 ಚಾರ್ಲಿ, ಕಾಂತಾರ ತೆಲುಗಿನ ಸರ್ಕಾರಿ ವಾರು ಪಾಟ, ಗಾಡ್ಫಾದರ್ ಚಿತ್ರಗಳಿವೆ.




