ಒಂದು ಸಿನಿಮಾವನ್ನು ಪ್ರೇಕ್ಷಕ ಗೆಲ್ಲಿಸುವುದು ಸಾಮಾನ್ಯವಾಗಿ ನಡೆಯುವಂತದ್ದು. ಕಾಂತಾರದ್ದು ಹಾಗೆಯೇ. ಆದರೆ ಹೊಸಬರ ಚಿತ್ರವೊಂದು ಚೆನ್ನಾಗಿದ್ದಾಗ ಪ್ರೇಕ್ಷಕರಿಗೆ ಇಷ್ಟವಾದಾಗ.. ಅದನ್ನು ಗೆಲ್ಲಿಸಲು ಪ್ರೇಕ್ಷಕರ ಜೊತೆ ಇಡೀ ಚಿತ್ರರಂಗ ಹೊರಡುವುದಿದೆಯಲ್ಲ.. ಅದು ಹೊಸದು. ಕಂಬ್ಳಿಹುಳ ಚಿತ್ರ ಗೆದ್ದಿರುವುದು ಇಲ್ಲಿಯೇ.
ಚಿತ್ರದಲ್ಲಿ ನಟಿಸಿರೋ ಅಂಜನ್ ನಾಗೇಂದ್ರ, ಅಶ್ವಿತಾ ಆರ್.ಹೆಗ್ಡೆ ಇಬ್ಬರೂ ಹೊಸಬರು. ನಿರ್ದೇಶಕ ನವೀನ್ ಶ್ರೀನಿವಾಸ್ ಕೂಡಾ ಹೊಸಬ. ನವೀನ್, ಪುನೀತ್, ಗುರು ಹಾಗೂ ವಿಜಯ್ ಎಂಬ ಗೆಳೆಯರೇ ಕೂಡಿಕೊಂಡು ಗ್ರೇ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರ ಕಂಬ್ಳಿಹುಳ. ನಿರ್ಮಾಪಕರೂ ಹೊಸಬರೇ. ಆದರೆ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಎಲ್ಲರೂ ಕೈಜೋಡಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಚಿತ್ರದ ಬಗ್ಗೆ ಚಿತ್ರರಂಗವೇ ಪ್ರಮೋಟ್ ಮಾಡುತ್ತಿದೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಸಿಂಪಲ್ ಸ್ಟಾರ್ ಡೈರೆಕ್ಟರ್ ಸುನಿ, ಯೋಗರಾಜ್ ಭಟ್, ನೀನಾಸಂ ಸತೀಶ್, ರಾಕ್‍ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ಡೈರೆಕ್ಟರ್ ಅಯೋಗ್ಯ ಮಹೇಶ್ ಕುಮಾರ್, ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್, ಆರೋಹಿ… ಹೀಗೆ ಅರ್ಧಕ್ಕರ್ಧ ಚಿತ್ರರಂಗವೇ ಗೆಲ್ಲಿಸಲು ಹೊರಟಿದೆ. ಒಂದೊಳ್ಳೆ ಸಿನಿಮಾ ಗೆಲ್ಲಬೇಕು ಎನ್ನುವ ಪ್ರಾಮಾಣಿಕ ಪ್ರಯತ್ನ ಶುರುವಾಗಿದೆ.
ಅಂದಹಾಗೆ ಇದು ಮಲೆನಾಡಿನಲ್ಲಿ ನಡೆಯುವ ಕಥೆ. ಸದ್ದೇ ಇಲ್ಲದೆ ರಿಲೀಸ್ ಆಗಿದ್ದ ಸಿನಿಮಾಗೀಗ ಪ್ರೇಕ್ಷಕರು ಮುಗಿ ಬೀಳುತ್ತಿರುವುದು ಈ ವಾರದ ಅಚ್ಚರಿ. ಅಂಜನ್, ಅಶ್ವಿತಾ, ನವನ್ ಶ್ರೀನಿವಾಸ್, ದೀಪಕ್ ರೈ ಪಾಣಾಜೆ, ರೋಹಿತ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿದ್ದಾರೆ. ಅಪ್ಪ ಅಮ್ಮನ ಜೊತೆ ಸಿಟ್ಟು ಮಾಡಿಕೊಂಡು ಊರು ಬಿಟ್ಟವರು ಚಿತ್ರವನ್ನೊಮ್ಮೆ ನೋಡಬೇಕು. ಪ್ರೀತಿ ಪ್ರೇಮದ ಗುಂಗಿನಲ್ಲಿರುವವರು ಸಿನಿಮಾ ನೋಡುವುದನ್ನು ಮರೆಯಬಾರದು. ಗೆಳೆಯರನ್ನು ದೂರ ಮಾಡಿದವರು, ಊರು ಬಿಟ್ಟವರು ಎಲ್ಲರನ್ನೂ ಕಾಡುವ ಚಿತ್ರವಿದು. ಹೊಸ ಹುಡುಗರ ಮುದ್ದು ಮುದ್ದಾದ ಅಭಿನಯ ಕೋಡಿ ಥ್ರಿಲ್ಲಾಗುವವರು ಕಡೆಯ 20 ನಿಮಿಷ ಅವರಿಗೇ ಗೊತ್ತಿಲ್ಲದೆ ಕಣ್ಣೀರು ಹಾಕುತ್ತಾರೆ.



