ಕಾಂತಾರಾ ಚಿತ್ರದ ಮೊದಲ ದೃಶ್ಯ ನೋಡಿದ್ದವರಿಗೆ ಇದು ಗೊಂದಲವಾಗಬಹುದು. ಅರ್ಥವಾಗದೇ ಹೋಗಬಹುದು. ಆದರೆ ಒಟ್ಟಾರೆ ಸಿನಿಮಾ ಚೆನ್ನಾಗಿದ್ದಾಗ ಇದನ್ನು ನೋಡದೇ ಹೋದವರೇ ಹೆಚ್ಚಿರುತ್ತಾರೆ. ತಲೆ ಕೆಡಿಸಿಕೊಳ್ಳೋದಿಲ್ಲ. ಏಕೆಂದರೆ ಚಿತ್ರದ ಕ್ಲೈಮಾಕ್ಸ್ ಹುಟ್ಟಿಸುವ ರೋಮಾಂಚನ ಅಂಥದ್ದು.
ಚಿತ್ರದಲ್ಲಿ ಮೊದಲ ದೃಶ್ಯದಲ್ಲಿ ಕಾಡಿನ ಮಧ್ಯದಿಂದ ಗಗ್ಗರದ ಶಬ್ಧ ಕೇಳಿಬರುತ್ತೆ. ವೀಕ್ಷಕರಿಗೆ ಭಯವಾಗಬಹುದೇನೋ.. ರಾಜನಿಗೆ ಆ ಶಬ್ಧ ಕೇಳಿ ಹೆದರಿಕೆ ಆಗಲ್ಲ. ಅಮ್ಮ ತಬ್ಬಿಕೊಂಡ ಹಾಗೆ, ಮಾವ ಪ್ರೀತಿಯಿಂದ ಕರೆದ ಹಾಗೆ ಭಾಸವಾಗುತ್ತದೆ ಎನ್ನುತ್ತಾನೆ. ಒಂದು ಕಲ್ಲಿನ ಮುಂದೆ ಬಂದು ನಿಂತ ಕೂಡಲೇ ರಾಜನಿಗೆ ಕಣ್ಣಲ್ಲಿ ನೀರು. ಇನ್ನಿಲ್ಲದ ನೆಮ್ಮದಿ ನಿರಾಳತೆ. ಅಮ್ಮ ತಬ್ಬಿಕೊಂಡ ಹಾಗೆ, ಮಾವ ತಲೆ ಸವರಿದ ಹಾಗೆ…ಇದನ್ನು ಸಿನಿಮಾದಲ್ಲಿ ಎರಡು ಸಲ ಹೇಳಿಸ್ತಾರೆ.
ಆಗ.. ಪ್ರೇಕ್ಷಕನಿಗೆ ಅಮ್ಮ ಅಂದವ್ನು ನಂತರ ಅಪ್ಪ ಅನ್ನದೆ ಮಾವ ಅಂತಿದಾನಲ್ಲ.. ಎಂದೆನ್ನಿಸಬಹುದು. ಆದರೆ ರಿಷಬ್ ಶೆಟ್ಟಿ ತಪ್ಪು ಮಾಡಿಲ್ಲ. ಕರಾವಳಿಯ ನೆಲ, ಸಂಸ್ಕೃತಿ ಸರಿಯಾಗಿ ಗೊತ್ತಿರೋ ರಿಷಬ್ ಶೆಟ್ಟಿ ಅಲ್ಲಿ ಅಮ್ಮನ ನಂತರ ಅಪ್ಪ ಎಂದು ಹೇಳಿಸದೆ ಮಾವ ಎಂದು ಸರಿಯಾಗಿಯೇ ಹೇಳಿಸಿದ್ದಾರೆ. ಇಲ್ಲಿ ಮಾವ ಅಂದರೆ ಸೋದರ ಮಾವ. ತಾಯಿಯ ಅಣ್ಣ ಅಥವಾ ತಮ್ಮ. ಕರಾವಳಿಯವರಲ್ಲಿ ಇರೋದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ. ಶೆಟ್ಟರು ಮಾತ್ರವೇ ಅಲ್ಲ. ಬಹುಪಾಲು ಜನರ ಸಂಸ್ಕೃತಿ ಇರುವುದೇ ಹಾಗೆ. ಮಾತೃಪ್ರಧಾನ ಕುಟುಂಬ ವ್ಯವಸ್ಥೆ. ಅಂದರೆ ಮನೆಯ ಮುಖ್ಯಸ್ಥೆ ಹಾಗೂ ಸಂಪೂರ್ಣ ಉಸ್ತುವಾರಿ ತಾಯಿಯದ್ದಾದರೆ, ಕುಟುಂಬದ ಯಜಮಾನ ಹಾಗೂ ಮುಖಂಡತ್ವ ತಾಯಿಯ ಅಣ್ಣ ಅಥವಾ ತಮ್ಮನಾದ ಸೋದರಮಾವನದ್ದಾಗಿರುತ್ತೆ. ಹಾಗಾಗಿ ಕುಟುಂಬದ ಯಾವುದೇ ಕಾರ್ಯಕ್ರಮವಿರಲಿ ಅದರ ಮೇಲ್ವಿಚಾರಣೆ ಹಾಗೂ ಕುಟುಂಬದಲ್ಲಿನ ಯಾವುದೇ ಕಿತ್ತಾಟ ಅಥವಾ ವ್ಯಾಜ್ಯಗಳ ಅಂತಿಮ ತೀರ್ಪು ಎಂದಿಗೂ ಸೋದರಮಾವನದ್ದು.ಇದನ್ನು ಅಳಿಯ ಸಂತಾನ ಅಥವಾ ಅಳಿಯಕಟ್ಟು ಅಂತಾನೂ ಕರೀತಾರೆ.
ಆತ ತನ್ನ ಮಕ್ಕಳಿಗಿಂತಲೂ ಹೆಚ್ಚು ಕಾಳಜಿ ಹಾಗೂ ಆರೈಕೆ ತನ್ನ ಅಕ್ಕ ಹಾಗೂ ತಂಗಿಯ ಮಕ್ಕಳಲ್ಲಿ ತೋರುತ್ತಾನೆ. ಒಂದರ್ಥದಲ್ಲಿ ಅವರು ಹುಟ್ಟಿದಾಗಿಂದ ಸಾಯೋ ಕ್ಷಣದವರೆಗೂ ಅವರ ಸಂಪೂರ್ಣ ಜವಾಬ್ದಾರಿಯೂ ಆತನದ್ದೇ.ಮನೆಯ ಹೆಣ್ಮಕ್ಕಳಿಗೆ ಮಗು ಹುಟ್ಟಿದಾಗ ಅದರ ಚೌಲ, ಕಿವಿ ಚುಚ್ಚಿಸೋದು, ಮಗುವಿಗೆ ಮೊದಲ ಬಾರಿ ಅನ್ನಪ್ರಾಶನ ಕೂಡಾ ಸೋದರ ಮಾವನೇ ಮಾಡಬೇಕು.
ಮದುವೆಯ ಸಂದರ್ಭದಲ್ಲೂ, ಲಗ್ನಪತ್ರಿಕೆಯಲ್ಲಿ ಹೆತ್ತವರಿಗಿಂತಲೂ ಮೊದಲು ಇಂತವರ ಅಳಿಯ ಅಥವಾ ಸೊಸೆ ಅಂತ ಬರೆಯೋ ಪದ್ಧತಿಯೂ ಇದೆ. ನಂತರದಲ್ಲಿ ಇಂತವರ ಮಗ/ಮಗಳು ಅಂತ ಬರೆಯವ ಸಂಪ್ರದಾಯವೂ ಇದೆ. ಮದುಮಗಳನ್ನು ಮದುವೆ ಮಂಟಪಕ್ಕೆ ಕರೆದು ತರೋದೂ ಹಾಗೂ ಮದುಮಗಳನ್ನು ಧಾರೆ ಎರೆಯೋದು ಕೂಡಾ ಸೋದರಮಾವನೇ. ಇವೆಲ್ಲಾ ಕಾರಣಗಳಿಗಾಗಿ ಇಡೀ ಕುಟುಂಬದಲ್ಲಿ ಮನೆಮಂದಿಯಾದಿಯಾಗಿ ಮಕ್ಕಳಿಗೆಲ್ಲಾ ಮಾವನೆಂದರೆ ಅತೀವ ಭಯ ಭಕ್ತಿ…
ಹಾಗಾಗಿಯೇ ಕರಾವಳಿಯಾದ್ಯಂತ ಒಂದು ಮಾತು ವಾಡಿಕೆಯಲ್ಲಿದೆ. ನಮ್ಮ ಮಕ್ಕಳು ತಗ್ಗಿಬಗ್ಗಿ ನಡೆಯೋದು ಇಬ್ಬರಿಗೆ ಮಾತ್ರ. ಒಂದು ದೈವ, ಮತ್ತೊಂದು ಸೋದರಮಾವ ಅಂತ. ಇದು ಅಲ್ಲಿನ ಕುಟುಂಬದಲ್ಲಿ ಸೋದರಮಾವನ ಸ್ಥಾನಕ್ಕಿರೋ ತೂಕಕ್ಕೊಂದು ನಿದರ್ಶನ. ಈ ಕಾರಣಗಳಿಗಾಗಿಯೇ ಹೆತ್ತವರನ್ನು ಕಳೆದುಕೊಂಡವನಲ್ಲ, ಸೋದರ ಮಾವನನ್ನು ಕಳೆದುಕೊಂಡವನು ನಿಜವಾದ ಅನಾಥ ಎಂಬ ಮಾತೇ ಇದೆ ಇಲ್ಲಿ.
ಪ್ರತೀ ಬಾರಿ ಪೂಜೆ ಸಂದರ್ಭದಲ್ಲಿಯೂ ದೈವ ಮನವರಿಕೆ ಮಾಡೋ, ನೆನಪಿಸೋ ಕಾರ್ಯ ಮಾಡೋ, ಅದೆಂತಾ ಪರಿಸ್ಥಿತಿಯಲ್ಲೂ ಪಾಲಿಸಲೇಬೇಕಾದ ಕಟ್ಟಳೆ, ತಲತಲಾಂತರಗಳಿಂದ ನಡೆದುಕೊಂಡು ಬರುತ್ತಿರೋ ದೈವ ನಿರ್ಣಯ.ಇಲ್ಲಿ ತಂದೆಯ ಸ್ಥಾನ ನಾಮಕಾವಸ್ತೆಗಷ್ಟೇ. ಹಾಗಂತ ಆತನೇನು ಆಟಕ್ಕುಂಟು ಲೆಕ್ಕವಿಲ್ಲದವನಲ್ಲ. ಆತ ಮತ್ತೊಬ್ಬರಿಗೆ ಸೋದರಮಾವನಾಗಿರ್ತಾನೆ. ಆತನಿಗೆ ಅಲ್ಲಿ ಮರ್ಯಾದೆ. ಸೋದರಮಾವನಾಗಿಯೇ ಆತನ ಅಸ್ತಿತ್ತ್ವ. ಬದುಕಿದ್ದಷ್ಟೂ ದಿನ ಆತ ಸೋದರಮಾವನಾಗಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಸಾಗುವ ಕಾರಣ, ಸತ್ತ ನಂತರದಲ್ಲಿ ವಿಧಿವಿಧಾನಗಳ ಸಂಪೂರ್ಣ ಹೊಣೆಗಾರಿಕೆಯೆಲ್ಲವೂ ಆತನ ಸಹೋದರಿಯರ ಹೆಗಲಿಗೆ ಹೋಗುತ್ತದೆ. ಸತ್ತಾಗ ಆತನ ಹೆಣವೂ ಮಡದಿ ಮಕ್ಕಳಿರುವಲ್ಲಿಗಲ್ಲ. ಆತನ ಸಹೋದರಿಯರಿರೋ ತವರುಮನೆಗೆ ಹೋಗುತ್ತದೆ. ಆತನ ಅಂತಿಮ ಸಂಸ್ಕಾರ, ಅಸ್ಥಿ ವಿಸರ್ಜನೆಯಂತಹ ವಿಧಿ ವಿಧಾನಗಳೆಲ್ಲವೂ ಆತನ ತವರಿನ ಮನೆಯಲ್ಲಿಯೇ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ನಂತರದಲ್ಲಿ ಹಬ್ಬ ಹರಿದಿನಗಳಾದಾಗ ಆತನಿಗೆ ಮೀಸಲು ಇಡೋ ಹಾಗೂ ಪ್ರತೀ ವರ್ಷ ಶ್ರಾದ್ಧ ಕಾರ್ಯ ಮಾಡೋದೆಲ್ಲವೂ ಸಹೋದರಿಯರ ಜವಾಬ್ದಾರಿ.ಆತ ಸತ್ತಾಗ ಸೂತಕವೂ ಆತನ ಅಕ್ಕ/ತಂಗಿ ಹಾಗೂ ಅವರ ಮಕ್ಕಳಿಗೆ ಇರುತ್ತದೆಯೇ ಹೊರತು ಸತ್ತಾಗ ಆತನ ಮಡದಿ ಮಕ್ಕಳಿಗೆ ಆತನ ಸೂತಕ ಕೂಡಾ ಇರೋದಿಲ್ಲ. ಹಾಗಾಗಿ ಕರಾವಳಿಯ ಮಕ್ಕಳಿಗೆ ತೋಳು ಅಮ್ಮನದ್ದಾದರೆ, ಹೆಗಲು ಯಾವತ್ತಿಗೂ ಸೋದರ ಮಾವನದ್ದೇ…ಆತನೇ ಪಿತೃಸಮಾನ.
ಹಾಗಾಗಿಯೇ ಕರಾವಳಿ ಭಾಗದ ಜನಗಳಿಗೆ ಎಷ್ಟು ಚಂದವಾಗಿ ಒಂದೇ ಲೈನಲ್ಲಿ ಇಂತಹದ್ದೊಂದು ಆಚರಣೆ ಹಾಗೂ ಮಾವ ಅಳಿಯನ ಸಂಬಂಧದ ಅಗಾಧತೆಯೆಂತದ್ದು ಎಂಬುದನ್ನು ಕಟ್ಟಿಕೊಟ್ಟಿದಾರಲ್ವಾ ರಿಶಭ್ ಶೆಟ್ಟಿ. ನೆಲದ ಸಂಸ್ಕೃತಿ ಗೊತ್ತಿಲ್ಲದವರು ಏನೇನೋ ಮಾತನಾಡುತ್ತಿರಬೇಕಾದರೆ, ಇಲ್ಲಿಯೇ ಹುಟ್ಟಿ ಬೆಳೆದ ರಿಷಬ್ ಶೆಟ್ಟಿ ಸಂಸ್ಕೃತಿ ಪದ್ಧತಿ ಸಂಪ್ರದಾಯಗಳನ್ನು ಚೆನ್ನಾಗಿಯೇ ಗುರುತಿಸಿದ್ದಾರೆ. ಹೃದಯಕ್ಕೆ ನಾಟುವಂತೆ ಚಿತ್ರಿಸಿದ್ದಾರೆ.
(ಇದಿಷ್ಟೂ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಸುಧೀಂದ್ರ ಎಂಬುವವರು ಬರೆದುಕೊಂಡಿದ್ದಾರೆ. ಹಲವರು ಶೇರ್ ಮಾಡಿದ್ದಾರೆ.)



