ಡಾ.ರಾಜ್, ವಿಷ್ಣು, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ಪುನೀತ್ ಸೇರಿದಂತೆ ಹಲವು ಕ್ಯಾಮೆರಾಮನ್ ಆಗಿದ್ದಾರೆ. ಚಿತ್ರಗಳಲ್ಲಿ ಫೋಟೋ ಕ್ಲಿಕ್ಕಿಸಿ ಫೋಟೋಗ್ರಾಫರ್ ಆಗಿದ್ದಾರೆ. ಆದರೆ ಒಬ್ಬ ಫೋಟೋಗ್ರಾಫರ್‍ನ ಜೀವನವೇ ಕಥೆಯಾಗಿದ್ದು, ಸಿನಿಮಾ ಆಗಿದ್ದು ಇಲ್ಲ. ಹೀಗಾಗಿಯೇ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ.. ಡಿಫರೆಂಟ್ ಅನ್ನಿಸೋದು. ಫೋಟೋಗ್ರಾಫರುಗಳಿಲ್ಲದೆ ಲೈಫೇ ಇರಲ್ಲ. ಮದುವೆ, ನಾಮಕರಣಗಳು ನಡೆಯೋದಿಲ್ಲ. ಯಾವುದಾದರೂ ಅಪ್ಲಿಕೇಷನ್ನಿಗೆ ಫೋಟೋ ಬೇಕೆಂದರೂ ಫೋಟೋಗ್ರಾಫರು ಬೇಕು. ಏಕೆಂದರೆ ಫೋಟೋ ಇಲ್ಲದೆ ಜೀವನವಿಲ್ಲ. ಅಂತಹ ಒಬ್ಬ ಫೊಟೋಗ್ರಾಫರ್ ಸ್ಟೋರಿ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ..ದಲ್ಲಿದೆ. 

ಇತ್ತೀಚೆಗೆ ಮಲೆನಾಡಿನ ಕಥೆಗಳು ಮೂಡಿಸುತ್ತಿರುವ ಸಂಚಲನವೇ ಬೇರೆ. ಕಾಂತಾರ ಕರಾವಳಿ ಮತ್ತು ಮಲೆನಾಡಿನ ಕಥೆಗಳೆರಡೂ ಇದ್ದ ಬ್ಲಾಕ್‍ಬಸ್ಟರ್ ಹಿಟ್ ಆದ ಸಿನಿಮಾ. ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಎಂಬ ಹೊಸ ಚಿತ್ರದ ಕಥೆ ನಡೆಯುವುದೆಲ್ಲ ಶಿರಸಿ ಸುತ್ತಮುತ್ತಲೇ. ಇದು ಹೊಸಬರ ಚಿತ್ರ. ಹೊಸತನದ ಕಥೆ. ಹಾಗಂತ ಮೆಸೇಜ್ ಹೇಳುವ ಪ್ರಯತ್ನವಿಲ್ಲ. ಕೇವಲ ಮನರಂಜನೆಯಿದೆ. ಸಂದೇಶ ಬೇಕಾದರೆ ಪ್ರೇಕ್ಷಕರೇ ಹುಡುಕಿಕೊಳ್ಳಬೇಕು. ಒಂದು ಚೆಂದದ ಕಥೆ, ಲವ್ ಸ್ಟೋರಿ, ಪ್ರಾಬ್ಲಮ್ಮು.. ಹೀಗೆ ಎಲ್ಲವೂ ಇರುವ ಚಿತ್ರಕ್ಕೆ ರಾಜೇಶ್ ಧ್ರುವ ಡೈರೆಕ್ಟರ್ ಮತ್ತು ಅವರೇ ಚಿತ್ರದ ಹೀರೋ.
ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಹೊಸತನದಿಂದ ಕೂಡಿದೆ. ಚಿತ್ರದ ಟ್ರೇಲರ್ ರಿಲೀಸ್ ವೇಳೆ ಹಿರಿಯ ಫೋಟೋಗ್ರಾಫರ್ ಕೆ.ಎನ್. ನಾಗೇಶ್ ಕುಮಾರ್ ಅವರಿಗೆ ಚಿತ್ರತಂಡ ಸನ್ಮಾನ ಮಾಡಿದರೆ, ವೃತ್ತಿಪರ ಫೋಟೋಗ್ರಾಫರ್ ಗಂಧದ ಗುಡಿ ಅಮೋಘವರ್ಷ ಚಿತ್ರಕ್ಕೆ ಶುಭ ಕೋರಿದರು.

ನಿರ್ಮಾಪಕ ವೆಂಕಟೇಶ್ವರ ರಾವ್ ಬಳ್ಳಾರಿಯವರಿಗೆ ಚಿತ್ರತಂಡದ ಮೇಲೆ ಕಾನ್ಫಿಡೆನ್ಸ್ ಇದೆ. ಇಡೀ ಚಿತ್ರವನ್ನು ಶಿರಸಿ ಸುತ್ತಮುತ್ತಲೇ ಚಿತ್ರೀಕರಿಸಲಾಗಿದ್ದು, 23 ದಿನದ ಟೈಟ್ ಶೆಡ್ಯೂಲ್‍ನಲ್ಲಿ ಚಿತ್ರ ಮಾಡಿರುವುದು ವಿಶೇಷ. ಸೀರಿಯಲ್ ಮೂಲಕ ಖ್ಯಾತಿ ಗಳಿಸಿರುವ ರಾಜೇಶ್ ಧ್ರುವ, ರಾಧಿಕಾ ಅಚ್ಯುತ್ ರಾವ್, ಶಿಶಿರ್, ನಕುಲ್ ಶರ್ಮಾ, ಶುಭಲಕ್ಷ್ಮಿ, ರವಿ ಸಾಲಿಯಾನ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಕಥೆ ಚಿತ್ರಕಥೆ ಅಭಿಷೇಕ್ ಶಿರಸಿ, ಪೃಥ್ವಿರಾಜ ಪೆನ್ನು ಅವರದ್ದಾದರೆ, ಸಂಭಾಷಣೆ ಅಜಿತ್ ಬೊಪ್ಪನಳ್ಳಿಯವರದ್ದು. ಸ್ವಸ್ವಿಕ್ ಕಾರೆನಾಡ್ ಸಂಗೀತ ನಿರ್ದೇಶಕ.



