ರಂಗಾದ ರಗಳೆ.. ನನ್ನ ತುಂಬಾ.. ನಿನ್ನದೇ ಕ್ವಾಟ್ಲೆ..
ಹಾಡು ಕೇಳುತ್ತಾ ಕೇಳುತ್ತಾ ಮೆಲೋಡಿ ಲೋಕಕ್ಕೆ ಜಾರಿ ಹೋಗುತ್ತೀರಿ. ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಚಿತ್ರದ ರೊಮ್ಯಾಂಟಿಕ್ ಹಾಡಿದು. ಹಾಡು ಕೇಳುತ್ತಲೇ ಮೆಲೋಡಿ ಲೋಕಕ್ಕೆ ಕರೆದೊಯ್ಯುವುದು ಸಂಗೀತ ನಿರ್ದೇಶಕ ಅನೂಪ್ ಸಿಳೀನ್. ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಧ್ವನಿಯಲ್ಲಿ ಪ್ರೇಮ ಪ್ರೀತಿಯ ಧ್ಯಾನವಿದೆ.
ಸಾಹಿತ್ಯ ನೀಡಿರುವುದು ಪ್ರಮೋದ್ ಮರವಂತೆ. ಸಿಂಗಾರ ಸಿರಿಯೇ ಹಾಡಿನಲ್ಲಿ ಪ್ರೇಮಿಗಳ ಆತುರ, ಅವಸರ, ಪ್ರೀತಿಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟಿದ್ದ ಮರವಂತೆ, ಈ ಹಾಡಿನಲ್ಲಿ ಮುಗ್ಧ ಪ್ರೇಮಿಗಳ ತುಂಟಾಟವನ್ನು ಹಿಡಿದಿಟ್ಟಿದ್ದಾರೆ. ಹಾಡು, ಸಾಹಿತ್ಯ, ಮ್ಯೂಸಿಕ್ಕಿಗೆ ತಕ್ಕಂತೆ ಹಾಡನ್ನು ಅದ್ಭುತವಾಗಿ ಚಿತ್ರಿಸಿರುವುದು ನಿರ್ದೇಶಕ ಕುಶಾಲ್ ಗೌಡ.
ಇಡೀ ಹಾಡಿನಲ್ಲಿ ಗುಂಗುರು ಕೂದಲ ತರುಣನಾಗಿ ಯಂಗ್ ಯಂಗ್ ಆಗಿ ಕಾಣುವ ಧನಂಜಯ್, ಮುದ್ದು ಮುದ್ದಾಗಿ ನಗುತ್ತಲೇ ಪ್ರೇಕ್ಷಕರ ಹೃದಯಕ್ಕೇ ಲಗ್ಗೆ ಹಾಕುವ ಆದಿತಿ ಪ್ರಭುದೇವ ಅಕ್ಷರಶಃ ರಂಗು ರಂಗಾದ ರಗಳೆ ಮಾಡುತ್ತಾರೆ. ತುಂಟ ಪ್ರೇಮಿಗಳ ಜೂಟಾಟ, ಪ್ರೀತಿ, ಪ್ರೇಮಗಳನ್ನು ಹಾಡಿನಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ಡಾಲಿ, ಆದಿತಿ ಜೊತೆ 6 ವರ್ಷಗಳ ನಂತರ ಕಮ್ ಬ್ಯಾಕ್ ಮಾಡಿರುವ ಭಾವನಾ ರಾಮಯ್ಯ ಇದ್ದಾರೆ. ನಿರುತ್ತರ ನಂತರ ಭಾವನಾ ನಟಿಸಿರುವ ಚಿತ್ರವಿದು. ಜೊತೆಗೆ ಪ್ರಾಣ್ಯ ಪಿ.ರಾವ್, ಯಶ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ನಂದಗೋಪಾಲ್, ಸಂತೋಷ್, ರುಷಿಕಾ ರಾಜ್, ಸತ್ಯಣ್ಣ, ಬಾಬು ಹಿರಣ್ಣಯ್ಯ ಮೊದಲಾದವರು ನಟಿಸಿರುವ ಚಿತ್ರಕ್ಕೆ ಶ್ರೀಹರಿ ಎಂಬುವವರ ಪೊಡ್ಯೂಸರ್.
ಅಂದಹಾಗೆ ಬಡವ ರಾಸ್ಕಲ್ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಕಳೆದ ವರ್ಷದ ಕೊನೆಯಲ್ಲಿ ಬಂದು ಸೂಪರ್ ಡ್ಯೂಪರ್ ಹಿಟ್ ಕೊಟ್ಟಿದ್ದ ಧನಂಜಯ ಈ ಬಾರಿಯೂ ವರ್ಷದ ಕೊನೆಯ ಸಕ್ಸಸ್ ನೋಡುವ ನಿರೀಕ್ಷೆಯಲ್ಲಿದ್ದಾರೆ.



