ಶಿವ ಸೊಂಟ ಗಿಲ್ಲಿದಾಗ ಹುಸಿಕೋಪ.. ಪ್ರಣಯ ಪಕ್ಷಿಗಳಂತೆ ಹಾರಾಡುವಾಗಿನ ತುಂಟತನ.. ಕಣ್ಣುಗಳಲ್ಲಿ ಮುಗ್ಧತೆ.. ಫಾರೆಸ್ಟ್ ಗಾರ್ಡ್ ಆದ ಮೊದಲ ದಿನವೇ ತನ್ನದೇ ಊರಿಗೆ ಬೇಲಿ ಹಾಕುವ ಅನಿವಾರ್ಯತೆಯಲ್ಲಿನ ಅಸಹಾಯಕತೆ.. ಊರಿಗೆ ಧಣಿ ಕರೆಸಿದವರು ಬೆಂಕಿ ಹಚ್ಚಲು ಬಂದಾಗ ರೌದ್ರ.. ಧಣಿಗೇ ಈಟಿ ಎಸೆಯುವಾಗ ತೋರುವ ಫೈಟರ್.. ಬೈಕ್ ಓಡಿಸುವ ಛಲಗಾತಿ.. ಅತ್ತೆಯ ಮೇಲೆ ತೋರುವ ವಾತ್ಸಲ್ಯ.. ಎಲ್ಲದರಲ್ಲೂ ಶೀಲಾಗೆ 100ಕ್ಕೆ 100 ಅಂಕ ಕೊಡಬಹುದು. ಈಕೆ ಕಾಂತಾರದ ಚೆಲುವೆ.
ಸಪ್ತಮಿ ಗೌಡ ಎಂಬುದಕ್ಕಿಂತ ಮೊದಲು ಪಾಪ್ ಕಾರ್ನ್ ಮಂಕಿ ಟೈಗರ್ನಲ್ಲಿ ಗಿರಿಜಾ ಆಗಿ ಫೇಮಸ್ ಆಗಿದ್ದವರು. ದುನಿಯಾ ಸೂರಿ ಹುಡುಕಿದ ಪ್ರತಿಭೆ ಇದು. ರಿಷಬ್ ಶೆಟ್ಟಿ ಈಕೆಯನ್ನು ಬಂಗಾರವನ್ನಾಗಿಸಿದರು. ಅಂದಹಾಗೆ ಸಪ್ತಮಿ ಗೌಡ ಕರಾವಳಿಯವರಲ್ಲ. ಬೆಂಗಳೂರಿನವರು. ಅಪ್ಪ ಖ್ಯಾತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್. ಸಿವಿಲ್ ಎಂಜಿನಿಯರಿಂಗ್ ಪದವೀಧರೆ.

ಅಷ್ಟೇ ಅಲ್ಲ, ಈಕೆ ರಾಷ್ಟ್ರೀಯ ಈಜು ಚಾಂಪಿಯನ್ ಕೂಡಾ ಹೌದು. 5ನೇ ವಯಸ್ಸಿಗೆ ಸ್ವಿಮ್ಮಿಂಗ್ ಪೂಲ್ಗೆ ಇಳಿದ ಸಪ್ತಮಿ ಗೌಡ, ಈಜುವುದರಲ್ಲಿ ಅಪ್ಪಟ ಮೀನು. 9ನೇ ವಯಸ್ಸಿನಲ್ಲಿದ್ದಾಗಲೇ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಹುಡುಗಿ. 2009ರಲ್ಲಿ ರಾಷ್ಟ್ರೀಯ ಮಟ್ಟದ ಟ್ರಯಥ್ಲಾನ್ ಚಿನ್ನ ಗೆದ್ದ ಹುಡುಗಿ ಜಪಾನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೂ ಆಯ್ಕೆಯಾದರು. ಆದರೆ ಅರ್ಹತೆಗೆ ಬೇಕಾದ ವಯಸ್ಸು ಪೂರ್ಣವಾಗಿರದ ಕಾರಣ ಆಡಲು ಸಾಧ್ಯವಾಗಲಿಲ್ಲ. ಈಗ ಕನ್ನಡಿಗರು ಎಲ್ಲೇ ಹೋದರೂ ಸಿಂಗಾರ ಸಿರಿಯೇ ಎನ್ನುತ್ತಾರೆ. ಲೀಲಾ ಎಂದು ಪ್ರೀತಿಸುತ್ತಾರೆ. ಎರಡು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಭರವಸೆಯ ನಾಯಕಿಯಾಗುವ ನಿರೀಕ್ಷೆಯಂತೂ ಇದೆ.



