ಡೌಟೇ ಇಲ್ಲ. ಇದು ಶುರುವಾಗಿದ್ದೇ ಮೂಗುತಿಯಿಂದ. ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ಸುದ್ದಿ ಎಲ್ಲ ಕಡೆ ವೈರಲ್ ಆಗುತ್ತಲೇ.. ಶುರುವಾದ ಕಥೆಯಿದು. ಆದರೆ ಆರಂಭದಲ್ಲಿ ಇದ್ಯಾವುದೋ ಸಿನಿಮಾ ಸ್ಟೋರಿ ಎಂದೇ ಎಲ್ಲರೂ ಅಂದುಕೊಂಡಿದ್ದರು. ಹರಿಪ್ರಿಯಾ ಇರುವುದೇ ಹಾಗೆ. ಪಾತ್ರಕ್ಕಾಗಿ ಬದಲಾಗುವುದು, ಗೆಟಪ್ ಚೇಂಜ್ ಮಾಡಿಸಿಕೊಳ್ಳೋದು ಹೊಸದೇನೂ ಅಲ್ಲ. ಆದರೆ ಆ ವಿಡಿಯೋದಲ್ಲಿ ಇರುವುದು ಕಂಚಿನ ಕಂಠದ ವಸಿಷ್ಠ ಸಿಂಹ ಎಂದು ಅನ್ನಿಸೋಕೆ ಶುರುವಾದ ಸಿನಿಮಾ ಪತ್ರಕರ್ತರ ನಿಜವಾದ ಹುಡುಕಾಟ ಶುರುವಾಯ್ತು. ಸಿಂಪಲ್ಲಾಗೊಂದ್ ಲವ್ ಸ್ಟೋರಿ ರೆಕ್ಕೆ ಬಿಚ್ಚಿದ್ದೇ ಆಗ.

4 ವಾರಗಳ ಹಿಂದೆ ವಸಿಷ್ಠ ಸಿಂಹ ಮಾಡಿದ್ದ ಒಂದು ಪೋಸ್ಟ್ ಕಣ್ಣಿಗೆ ಬಿತ್ತು. ಆ ವಿಡಿಯೋದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಇಬ್ಬರೂ ಇದ್ದರು. ಹರಿಪ್ರಿಯಾಗೆ ವಿಶ್ ಮಾಡುತ್ತಾ ವಸಿಷ್ಠ ಸಿಂಹ ನಿಮಗೆ ಪ್ರೀತಿ, ಸಂಗಾತಿಯೂ ಸೇರಿದಂತೆ ಎಲ್ಲವೂ ಬೆಸ್ಟ್ ಎನ್ನುವುದೇ ಸಿಗಲಿ. ನಿಮಗೆ ಹೆಚ್ಚು ಹೆಚ್ಚು ಪ್ರೀತಿ, ಸಂತೋಷ ಸಿಗಲಿ. ನೀವು ನೀವೇ ಆಗಿರುವುದಕ್ಕೆ ಥ್ಯಾಂಕ್ಸ್ ಎಂದಿದ್ದರು. ಹರಿಪ್ರಿಯಾ ಕೂಡಾ ರಿಯಾಕ್ಟ್ ಮಾಡಿದ್ದರು. ಥ್ಯಾಂಕ್ಯೂ ಪಾರ್ಟ್‍ನರ್ ಎಂಬುದಕ್ಕೆ ವಿಷ್ ಮಾಡಿದ್ದರು. ಅದಾದ ಕೆಲ ದಿನಗಳಲ್ಲಿ ಹೊರಬಿದ್ದ ಕಥೆ ಮೂಗುತಿಯದ್ದು. ಈಗ ಇದ್ದಕ್ಕಿದ್ದಂತೆ ಕಥೆಯೇ ಚೇಂಜ್.
ಚಿತ್ರವೊಂದರ ಸೆಟ್ಟಿನಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿದ್ದರಂತೆ. ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್. ಕ್ರಮೇಣ ಪರಿಚಯವಾಗಿ ಪ್ರೀತಿಯಾಗಿದೆ. ಇಬ್ಬರೂ ಇತ್ತೀಚೆಗೆ ದುಬೈನಲ್ಲಿ ಒಂದು ರೌಂಡ್ ಮದುವೆ ಶಾಪಿಂಗ್ ಕೂಡಾ ಮುಗಿಸಿದ್ದಾರೆ. ಶೀಘ್ರದಲ್ಲೇ ಎಂಗೇಜ್‍ಮೆಂಟ್ ಕೂಡಾ ನಡೆಯಲಿದೆ ಎಂಬ ಸುದ್ದಿಗಳು ಜೋರಾಗಿವೆ. 2023ರಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರಷ್ಟೇ ಅಲ್ಲ, ಇಬ್ಬರೂ ಆತ್ಮೀಯರೂ ಈ ಬಗ್ಗೆ ಗಪ್ ಚುಪ್. ಮಾತನಾಡುತ್ತಿಲ್ಲ. ಆದರೆ ಅವರಲ್ಲಿ ಬಹುತೇಕರಿಗೆ ಇವರಿಬ್ಬರ ಲವ್ ಸ್ಟೋರಿಯೂ ಗೊತ್ತು. ಮೂಗುತಿ ಪ್ರೀತಿಯೂ ಗೊತ್ತು. ಆದರೆ ಅವರಿಬ್ಬರೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಅಧಿಕೃತ ಸ್ಪಷ್ಟನೆ ಸಿಗುವವರೆಗೆ ಅಂತೆ..ಕಂತೆ..ಪ್ರೀತಿಯಂತೆ… ಕಥೆ ಮಾತ್ರ.

ಹರಿಪ್ರಿಯಾ ಕನ್ನಡ ಚಿತ್ರರಂಗದ ಸ್ಟಾರ್ ನಟಿ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತರಾಗಿರುವ ಹರಿಪ್ರಿಯಾ ಈ ಚಿಕ್ಕಬಳ್ಳಾಪುರದ ಚೆಲುವೆಗೆ ಈಗ 31 ವರ್ಷ. 2007ರಲ್ಲಿ ಚಿತ್ರರಂಗಕ್ಕೆ ಬಂದಿರೋ ಹರಿಪ್ರಿಯಾ ಕನ್ನಡದ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿದ್ದಾರೆ. ಕಮರ್ಷಿಯಲ್ ಮತ್ತು ಪ್ರಯೋಗಾತ್ಮಕ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಈಗಲೂ ಕೈಲಿ ಐದಾರು ಚಿತ್ರಗಳಿವೆ.
ಇನ್ನು ವಸಿಷ್ಠ ಸಿಂಹ. ಗಾಯಕನಾಗಬೇಕೆಂದು ಬಂದು ವಿಲನ್ ಆಗಿ, ತಮ್ಮದೇ ಛಾಪು ಮೂಡಿಸಿ ಈಗ ಹೀರೋ ಆಗುತ್ತಿರುವ ಚೆಲುವ. ಮೈಸೂರು ಹುಡುಗ. ಇವರಿಬ್ಬರಿಗೂ ಪ್ರೀತಿಯಾಗಿದೆಯಂತೆ. ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಂತೆ ಎಂಬ ಸುದ್ದಿ ಕರ್ನಾಟಕದಾದ್ಯಂತ ಹಬ್ಬಿದೆ.



