ಗಿಲಕ್ಕೋ ಗಿಲಕ್ಕೋ.. ಎಂದು ಹಾಡಿ ಕುಣಿದು ಹೊಡೆದು ಝಲಕ್ ತೋರಿಸಿದ್ದ ಶಿವಣ್ಣ ತಮ್ಮ 125ನೇ ಸಿನಿಮಾದಲ್ಲಿ ತುಂಟಾಟ ದ ಪ್ರೇಮಿಯಾಗಿದ್ದಾರೆ. ವೇದ ಚಿತ್ರದ ಪುಷ್ಪ ಪುಷ್ಪ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಶಿವಣ್ಣ ಹಾವಭಾವದಲ್ಲಿ ಪುಷ್ಪಳನ್ನು ಕೆಣಕೋದ್ರಲ್ಲಿ.. ರೇಗಿಸೋದ್ರಲ್ಲಿ.. ಪ್ರೀತಿಸೋದ್ರಲ್ಲಿ ಬ್ಯುಸಿಯಾಗಿದ್ದರೆ.. ಹಿಂದೆ ನಿಂತು ಕುಮ್ಮಕ್ಕು ಕೊಡೋದು ಉಮಾಶ್ರೀ. ಅಜ್ಜಿಯಾಗಿ ಉಮಾಶ್ರೀ ಹಾಡಿನಲ್ಲೇ ಚಪ್ಪಾಳೆ ಗಿಟ್ಟಿಸಿಬಿಡುತ್ತಾರೆ. ಗಾನವಿ ಲಕ್ಷ್ಮಣ್ ಹಾಡಿನಲ್ಲಿ.. ಕಣ್ಣ ನೋಟದಲ್ಲಿ ಶಿವಣ್ಣನನ್ನಷ್ಟೇ ಅಲ್ಲ, ನೋಡುವವರನ್ನೂ ಕೆಣಕುತ್ತಾರೆ.

ಹಾಡು ಬರೆದಿರೋದು ಡಾ.ವಿ.ನಾಗೇಂದ್ರ ಪ್ರಸಾದ್. ಹಾಡಿರೋದು ಖುದ್ದು ಶಿವಣ್ಣ. ಅರ್ಜುನ್ ಜನ್ಯ ಮ್ಯೂಸಿಕ್ಕು ಮತ್ತು ಶಿವಣ್ಣನ ಸ್ಟೆಪ್ಪು.. ಗಿಲಕ್ಕಿಗಿಂತಲೂ ಸಖತ್ತಾಗಿದೆ. ಹರ್ಷ ಮತ್ತು ಶಿವಣ್ಣನ ಕಾಂಬಿನೇಷನ್ನಿನಲ್ಲಿ ಬರುತ್ತಿರೊ 4ನೇ ಸಿನಿಮಾ ವೇದ. ಗೀತಾ ಶಿವರಾಜ್ ಕುಮಾರ್ ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದು, ಶಿವರಾಜ್ ಕುಮಾರ್ ವೃತ್ತಿ ಜೀವನದ 125ನೇ ಸಿನಿಮಾ ವೇದ. ಶಿವಣ್ಣ, ಗಾನವಿ ಲಕ್ಷ್ಮಣ್, ಉಮಾಶ್ರೀ, ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ರಘು ಶಿವಮೊಗ್ಗ.. ಹೀಗೆ ಹೊಸಬರು ಮತ್ತು ಹಳಬರ ಸಮ್ಮಿಶ್ರದಲ್ಲಿ ಹೊಸದೇ ಸ್ಟೈಲಿನ ವೇದ ರೆಡಿಯಾಗಿದೆ. ಡಿಸೆಂಬರ್ ಕೊನೆಗೆ ರಿಲೀಸ್ ಆಗುತ್ತಿರುವ ಚಿತ್ರವಿದು.

‘ವೇದ’ ಚಿತ್ರದಲ್ಲಿ 60- 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. ಆ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮಿಸಿದೆ. ರವಿ ಸಂತೆಹಕ್ಲು ನಿರ್ದೇಶನದಲ್ಲಿ ಸಾಕಷ್ಟು ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಕಾಸ್ಟ್ಯೂಮ್, ಬ್ಯಾಕ್ಡ್ರಾಪ್ ಎನ್ನವನ್ನು ಕಥೆ ತಕ್ಕಂತೆ ತೋರಿಸಲಾಗಿದೆ. ಇನ್ನು ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಕೂಡ ಒಂದೊಳ್ಳೆ ಪಾತ್ರ ಮಾಡಿದ್ದಾರೆ. ‘ಪುಷ್ಪ ಪುಷ್ಪ’ ಹಾಡಿನಲ್ಲಿ ಶಿವಣ್ಣನಿಗೆ ಅವರು ಸಾಥ್ ಕೊಟ್ಟಿದ್ದಾರೆ. ಇದು ಫ್ಯಾಂಟಸಿ ಕಥೆ ಅಲ್ಲ. ದಶಕಗಳ ಹಿಂದೆ ಒಂದು ಹಳ್ಳಿಯಲ್ಲಿ ನಡೆದ ಕಥೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆಗಳ ಸುತ್ತಾ ಕಥೆ ಸುತ್ತುತ್ತದೆ ಎಂದು ಚಿತ್ರತಂಡ ಹೇಳಿದೆ.



