



ಭೂತಕೋಲ, ದೈವಾರಾಧನೆ ಹಿಂದೂಗಳದ್ದಲ್ಲ. ಅದು ಮೂಲನಿವಾಸಿಗಳ ಬುಡಕಟ್ಟು ಜನರ ಆಚರಣೆ. ಕಾಂತಾರದಲ್ಲಿ ಹಿಂದೂ ಸಂಸ್ಕøತಿಯನ್ನು ವೈದಿಕ ಬ್ರಾಹ್ಮಣ್ಯ ಅಂಶಗಳನ್ನು ಹೇರಿಕೆ ಮಾಡಲಾಗಿದೆ ಎಂದಿದ್ದರು ಚೇತನ್. ಸಿನಿಮಾ ನೋಡಿ ಮೆಚ್ಚಿದವರೇ ಚೇತನ್ ವಿರುದ್ಧ ಹಿಗ್ಗಾಮುಗ್ಗ ಝಾಡಿಸಿದ್ದರು. ಚಿತ್ರ ತಂಡದ ಸದಸ್ಯರಾದ ಗುರುವ ಪಾತ್ರಧಾರಿ ಸೂರಜ್ ಶೆಟ್ಟಿ, ರಿಷಬ್ ಶೆಟ್ಟಿಯವರ ತಂದೆ, ದೈವನರ್ತನದ ಸೂಕ್ಷ್ಮಗಳನ್ನು ಹೇಳಿಕೊಟ್ಟಿದ್ದ ಮುಕುಂದ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ.. ಹೀಗೆ ಹಲವರು ಚೇತನ್‍ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈಗ ರಿಷಬ್ ಶೆಟ್ಟಿಯವರೇ ಉತ್ತರ ಕೊಟ್ಟಿದ್ದಾರೆ.
ಭೂತಕೋಲ, ದೈವಾರಾಧನೆಯನ್ನು ಬಾಲ್ಯದಿಂದಲೇ ನೋಡಿಕೊಂಡು ಬೆಳದವನು ನಾನು. ಅಂಥಾದ್ದೊಂದು ಕಥೆಯನ್ನ ಸಿನಿಮಾ ಮಾಡುವಾಗ ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕೋ ತೆಗೆದುಕೊಂಡಿದ್ದೇವೆ. ಯಾರಿಗೂ ನೋವಾಗದಂತೆ. ದೈವಾರಾಧಕರಿಗೆ ನೋವಾಗದಂತೆ ಸಿನಿಮಾ ಇರಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿತ್ತು. ಅದಕ್ಕೆಂದೇ ನಾನು ಹಿರಿಯರನ್ನು, ದೈವಾರಾಧಕರನ್ನು ಜೊತೆಯಲ್ಲಿಟ್ಟುಕೊಂಡೇ ಸಿನಿಮಾ ಚಿತ್ರೀಕರಿಸಿದ್ದೆವು ಎಂದಿದ್ದಾರೆ.

ನನಗೆ ಸಂಸ್ಕøತಿಯ ಬಗ್ಗೆ ಮಾತನಾಡುವಷ್ಟು ಗೊತ್ತಿಲ್ಲ. ಸಂಸ್ಕøತಿಯ ಬಗ್ಗೆ ಮಾತನಾಡುವುದಕ್ಕೆ ದೊಡ್ಡ ಅರ್ಹತೆ ಬೇಕು. ನನಗೆ ಆ ಅರ್ಹತೆ ಇಲ್ಲ. ಟೀಕಿಸಿದವರಿಗೂ ಆ ಅರ್ಹತೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಚೇತನ್ ಟೀಕೆಗೆ ಉತ್ತರಿಸಬೇಕಾದವರು ಉತ್ತರಿಸುತ್ತಾರೆ. ದೈವಾರಾಧಕರನ್ನು ಬೇರೆ ಯಾರಿಗೂ ಟೀಕಿಸುವ ಅರ್ಹತೆ ಇಲ್ಲ ಎಂದಿದ್ದಾರೆ ರಿಷಬ್ ಶೆಟ್ಟಿ. ಚಿತ್ರಕ್ಕಾಗಿ ಶ್ರಮ ಹಾಕಿದ್ದೇವೆ. ರಕ್ತ ಸುರಿಸಿದ್ದೇವೆ. ಎಲ್ಲವನ್ನೂ ವೀಕ್ಷಕರಿಗೆ ಬಿಟ್ಟಿದ್ದೇವೆ. ಪ್ರತಿಫಲವೂ ಸಿಗುತ್ತಿದೆ ಎಂದು ಸಿನಿಮಾ ಯಶಸ್ಸಿನ ಬಗ್ಗೆ ಖುಷಿಯಾಗಿ ಮಾತನಾಡಿದ್ದಾರೆ ರಿಷಬ್ ಶೆಟ್ಟಿ.

ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಇದು ಸರಿ ತಪ್ಪು ಎಂದು ಹೇಳುವ ಅಧಿಕಾರ ಇರುತ್ತೆ. ಸದ್ಯಕ್ಕೆ ಈ ಸಿನಿಮಾ ನನ್ನದಲ್ಲ. ದೈವಾರಾಧನೆ ಮಾಡುವವರಿಗೆ ಮಾತ್ರ ಈ ಬಗ್ಗೆ ಮಾತನಾಡುವುದಕ್ಕೆ ಅರ್ಹತೆ ಇದೆ. ಈ ವಿಚಾರದಲ್ಲಿ ನಾನು ಯಾರಿಗೂ ಉತ್ತರ ಕೊಡಬೇಕಿಲ್ಲ. ನೋ ಕಮೆಂಟ್ಸ್. ಸಂಬಂಧಪಟ್ಟವರೇ ಇದಕ್ಕೆ ಉತ್ತರ ಕೊಡ್ತಾರೆ ಎಂದಿದ್ದಾರೆ ರಿಷಬ್ ಶೆಟ್ಟಿ. ನೋ ಕಮೆಂಟ್ಸ್.



