ಚಂದನವನದ ಕ್ಯೂಟ್ ಜೋಡಿ ಎನಿಸಿಕೊಂಡಿರೋ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಪ್ರೇಮಗೀತೆ ಎಲ್ಲರಿಗೂ ಗೊತ್ತಿರುವಂತದ್ದೇ. ಇವರು ಹೋದಲ್ಲಿ ಬಂದಲ್ಲಿ ಮೀಡಿಯಾಗಳು ಮುತ್ತಿಕೊಳ್ಳುತ್ತಿವೆ. ಆದರೂ ಪರ್ಸನಲ್ ಲೈಫ್‍ನ್ನು ಪರ್ಸನಲ್ಲಾಗಿಯೇ ಇಟ್ಟುಕೊಂಡಿರುವ ಈ ತಾರಾ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ನಿಶ್ಚಿತಾರ್ಥ ಆದ ಮೇಲೆ ಶಾಕ್ ಕೊಟ್ಟಿದ್ದ ಸಿಂಹಪ್ರಿಯಾ ಜೋಡಿ ಮದುವೆಯನ್ನು ಮಾತ್ರ ಮೊದಲೇ ಘೋಷಿಸಿದೆ. ಜನವರಿ 26ಕ್ಕೆ ಸಿಂಹ-ಪ್ರಿಯಾ ಕಲ್ಯಾಣ.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಬ್ಬರ ವಿವಾಹ ಕಾರ್ಯಕ್ರಮ ನಡೆಯಲಿದೆ. ಹೊಸ ವರ್ಷದ ಶುರುವಾತಿನಲ್ಲೇ ಇಬ್ಬರ ಮದುವೆಯ ದಿನಾಂಕ ಘೋಷಣೆಯಾಗಿದೆ. ಇಡೀ ದೇಶ ಭಾರತ ಒಕ್ಕೂಟವಾದ ದಿನವನ್ನು ಸಂಭ್ರಮಿಸುತ್ತಿದ್ದರೆ, ಸಿಂಹ-ಪ್ರಿಯಾ ಜೋಡಿ ತಾವು ಒಂದಾಗುವ ದಿನದ ಮುಹೂರ್ತದ ಸಂಭ್ರಮದಲ್ಲಿರುತ್ತಾರೆ.
ಈ ಸ್ಯಾಂಡಲ್`ವುಡ್ ಸೆನ್ಸೇಷನ್ ಲವ್ ಬಡ್ರ್ಸ್ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹಯ ಮದುವೆ ವಿಷಯ ಮತ್ತು ದಿನಾಂಕ ಖಚಿತ ಪಡಿಸಿದ್ದು ಸಂಸದ ಪ್ರತಾಪ್ ಸಿಂಹ ಎನ್ನುವುದು ವಿಶೇಷ. ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ ಕೂಡಾ ಆಶ್ರಮಕ್ಕೆ ಭೇಟಿ ನೀಡಿದ್ದ ವೇಳೆ ಹಾಜರಿದ್ದರು. ಡಿಸೆಂಬರ್ 3ನೇ ತಾರೀಕು ನಿಶ್ಚಿತಾರ್ಥ ಮಾಡಿಕೊಂಡಿದ್ದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇದೇ ಜನವರಿ 26ಕ್ಕೆ ಸಪ್ತಪದಿ ತುಳಿಯಲಿದ್ದಾರೆ.



