ಕಂಟೆಂಟ್ ಮುಖ್ಯ. ಭಾಷೆ ಅಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ರಕ್ಷಿತ್ ಶೆಟ್ಟಿ ಈಗ ಥಾಯ್, ಜಪಾನಿ ಹಾಗೂ ಚೀನಾ ಭಾಷೆಗೂ ಹೋಗುತ್ತಿದ್ದಾರೆ. ಹೌದು, ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿದ್ದ 777 ಚಾರ್ಲಿ ಚಿತ್ರಕ್ಕೆ ಚೀನಾ, ಥಾಯ್‍ಲ್ಯಾಂಡ್ ಹಾಗೂ ಜಪಾನ್‍ನಲ್ಲಿ ಡಿಮ್ಯಾಂಡ್ ಶುರುವಾಗಿದೆ. 777 ಚಾರ್ಲಿ ಕೂಡಾ ಈ ವರ್ಷದ ಸೂಪರ್ ಹಿಟ್ ಸಿನಿಮಾ. 150 ಕೋಟಿಗೂ ಹೆಚ್ಚ ಬ್ಯುಸಿನೆಸ್ ಮಾಡಿದ್ದ 777 ಚಾರ್ಲಿಯಲ್ಲಿ ನಾಯಿಯ ಕಥೆಗೆ ಪ್ರೇಕ್ಷಕರು ಕಣ್ಣೀರಿಟ್ಟಿದ್ದರು. ದೇಶ ವಿದೇಶಗಳ ಪ್ರೇಕ್ಷಕರನ್ನು ಸೆಳೆದಿತ್ತು. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ.ಶೆಟ್ಟಿ.. ಮೊದಲಾದವರು ನಟಿಸಿದ್ದ ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದರು. ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕೊಟ್ಟಿದ್ದ ಕಿರಣ್ ರಾಜ್ 777 ಚಾರ್ಲಿ ಚಿತ್ರವನ್ನು ದೇಶ ವಿದೇಶಗಳಲ್ಲಿ ಆಯಾ ಭಾಷೆಗಳಲ್ಲೇ ರಿಲೀಸ್ ಮಾಡುತ್ತಿದ್ದಾರೆ.

ಈಗಾಗಲೇ ಚಿತ್ರದ ಥಾಯ್ ಭಾಷೆಯ ವರ್ಷನ್ ಟ್ರೇಲರ್ ರಿಲೀಸ್ ಕೂಡಾ ಆಗಿದೆ. ಡಿಸೆಂಬರ್ 1ರಂದು ಥಾಯ್ ಭಾಷೆಯ 777 ಚಾರ್ಲಿ ರಿಲೀಸ್ ಆಗಲಿದೆ. ಥಾಯ್ ಜನ ಪ್ರಾಣಿ ಪ್ರಿಯರು. ನಾವಿಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಂತೆಯೇ ಥಾಯ್ ಹಕ್ಕು ಪಡೆದಿದ್ದರು. ಈಗ ರಿಲೀಸ್ ಆಗುತ್ತಿರೆ. ಜಪಾನ್, ರಷ್ಯಾ, ಚೀನಾ ಭಾಷೆಯಲ್ಲೂ ಡಿಮ್ಯಾಂಡ್ ಇದೆ. ಇನ್ನು ಕೆಲವೇ ದಿನಗಳಲ್ಲಿ ಜಪಾನಿ ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಚೀನಾ ಭಾಷೆಯ ಕೆಲಸ ಕೂಡಾ ಚಾಲ್ತಿಯಲ್ಲಿದೆ ಎಂದಿದ್ದಾರೆ ಡೈರೆಕ್ಟರ್ ಕಿರಣ್ ರಾಜ್.
ಇತ್ತೀಚೆಗೆ ರಾಜಮೌಳಿಯವರ ಆರ್.ಆರ್.ಆರ್. ಜಪಾನಿ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಅದರೊಂದಿಗೆ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನೂ ಹಿಂದೆ ಹಾಕಿತ್ತು. ಇನ್ನು ಅಮೀರ್ ಖಾನ್‍ರ ಸೀಕ್ರೆಟ್ ಸೂಪರ್ ಸ್ಟಾರ್, ದಂಗಲ್, ಪಿಕೆಯಂತಹ ಚಿತ್ರಗಳು ಚೀನಾದಲ್ಲಿ ಭರ್ಜರಿ ಸಕ್ಸಸ್ ಕಂಡಿದ್ದವು. ಚೀನಾದಲ್ಲಿ ಬಿಡುಗಡೆಯಾದರೆ ನಮಗೆ ಸಿಗುವ ಷೇರ್ ಕಡಿಮೆ. ಆದರೆ 75 ಸಾವಿರ ಥಿಯೇಟರ್ಸ್ ಇರುವ ದೇಶ ಅದು. ಪರ್ಸಂಟೇಜ್ ಕಡಿಮೆಯಿದ್ದರೂ ಥಿಯೇಟರ್ಸ್ ಜಾಸ್ತಿ ಇರುವ ಕಾರಣ, ಸಿನಿಮಾ ಗೆದ್ದರೆ ಸಾವಿರ ಕೋಟಿ ಬ್ಯುಸಿನೆಸ್ ಮಾಡಬಹುದು ಎಂಬ ನಿರೀಕ್ಷೆ ಕಿರಣ್ ರಾಜ್ ಅವರದ್ದು.
ರಕ್ಷಿತ್ ಶೆಟ್ಟಿ ಕನ್ನಡದ ಚಿತ್ರದ ಮೂಲಕ ಕನ್ನಡವನ್ನೂ ಬೇರೆ ಬೇರೆ ದೇಶಗಳಿಗೆ ಪರಿಚಯಿಸುತ್ತಿದ್ದಾರೆ. ಆ ಮೂಲಕ ಮತ್ತೊಂದು ಚರಿತ್ರೆಯನ್ನೇ ಸೃಷ್ಟಿಸಲು ಹೊರಟಿದ್ದಾರೆ.



