ರಾಜೇಂದ್ರ ಸಿಂಗ್ ಭಾಬು ವರ್ಸಸ್ ರಮ್ಯಾ : ವಿವಾದದ ಮುತ್ತಿನ ಮಳೆ ಹನಿ..
ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕರಲ್ಲಿ ಒಬ್ಬರು. ಬಾಬು ನಿರ್ದೇಶನದ ಹಲವು ಚಿತ್ರಗಳು ಚಿತ್ರರಂಗದಲ್ಲಿ ಮೈಲುಗಲ್ಲನ್ನೇ ಸೃಷ್ಟಿಸಿವೆ. ಹೊಸ ಇತಿಹಾಸವನ್ನೇ ಬರೆದಿವೆ.ಬಂಧನ, ಮುತ್ತಿನ ಹಾರ, ಮುಂಗಾರಿನ ಮಿಂಚು, ಭೂಮಿ ತಾಯಿಯ ಚೊಚ್ಚಲ ಮಗ, ಕುರಿಗಳು, ಕೋತಿಗಳು.. ಹೀಗೆ ಹಿಟ್ ಮತ್ತು ಸ್ಪೆಷಲ್ ಚಿತ್ರಗಳ ಸಂಖ್ಯೆ ಉದ್ದಕ್ಕೂ ಬೆಳೆಯುತ್ತಾ ಹೋಗುತ್ತೆ. ಆದರೆ ಇತ್ತೀಚೆಗೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೊಸ ಹೊಸ ಚಿತ್ರಗಳಿಗಿಂತ ಹೆಚ್ಚು ವಿವಾದಗಳಿಂದಲೇ ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಂದವರು.

ಕಂಬಳದ ಮೇಲೊಂದು ಸಿನಿಮಾ ಮಾಡ್ತಾರೆ ಎಂಬ ಪ್ರಸ್ತಾಪ ಸುದ್ದಿ ಯಾಕೋ ತಣ್ಣಗಾದಂತೆ ಕಾಣುತ್ತಿದೆ. ವೀರ ಮದಕರಿ ನಾಯಕ ಸೆಟ್ಟೇರುವ ಸಾಧ್ಯತೆ ದೂರವಾಗಿದೆ. ಹಲವು ಚಿತ್ರಗಳು ಘೋಷಣೆಯಷ್ಟರಲ್ಲೇ ಮುಗಿದು ಹೋಗಿವೆ. ಇನ್ನು ಸಾಲಗಾರರು ವರ್ಸಸ್ ಸಿಂಗ್ ಬಾಬು ಗಲಾಟೆಗಳೂ ಆಗಾಗ್ಗೆ ಸದ್ದು ಮತ್ತು ಸುದ್ದಿ ಎರಡನ್ನೂ ಮಾಡ್ತವೆ. ಈಗ ಸಿಂಗ್ ಬಾಬು ಅವರ ಕಣ್ಣು ರಮ್ಯಾ ಮೇಲೆ ಬಿದ್ದಿದೆ.

ಸ್ಯಾಂಡಲ್‍ವುಡ್ ಮೋಹಕ ತಾರೆ ರಮ್ಯಾ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ. ರಾಜ್ ಬಿ.ಶೆಟ್ಟಿ ನಿರ್ದೇಶನದ ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಮ್ಯಾ ಈ ಚಿತ್ರಕ್ಕೆ ನಾಯಕಿ ಅಲ್ಲ. ಕೇವಲ ನಿರ್ಮಾಪಕಿ. ಮೊದಲಿಗೆ ದಿವ್ಯ ಸ್ಪಂದನರೇ ನಾಯಕಿ ಎನ್ನಲಾಗಿತ್ತಾದರೂ, ನಂತರ ರಮ್ಯಾ ಬದಲಿಗೆ ಸಿರಿ ರವಿಕುಮಾರ್ ನಾಯಕಿಯಾದರು. ಆದರೆ ಈಗ ಪೋಸ್ಟ್ ಪ್ರೊಡಕ್ಷನ್‍ನಲ್ಲಿರುವ ಚಿತ್ರದ ಟೈಟಲ್ ನನ್ನದು ಎಂದು ವಿವಾದ ಎತ್ತಿದ್ದಾರೆ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು.
ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪ್ರಕಾರ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ಅವರದ್ದು. ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಹೊರಬಿದ್ದಾಗ ಎಲ್ಲರಿಗೂ ನೆನಪಾಗಿದ್ದೇ ಬಣ್ಣದ ಗೆಜ್ಜೆ ಚಿತ್ರದ ಸೂಪರ್ ಹಿಟ್ ಹಾಡು. ರವಿಚಂದ್ರನ್-ಅಮಲಾ-ಭಾರತಿ ವಿಷ್ಣುವರ್ಧನ್-ದೇವರಾಜ್ ನಟಿಸಿದ್ದ ಆ ಚಿತ್ರದ ಎಲ್ಲ ಹಾಡುಗಳೂ ಹಿಟ್. ಸ್ವಾತಿ ಮುತ್ತಿನ ಹಾಡು ಸೂಪರ್ ಡ್ಯೂಪರ್ ಹಿಟ್. ಆ ಚಿತ್ರದ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು.

ನಾವು ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್‍ನ್ನು ಈಗಾಗಲೇ ಫಿಲ್ಮ್ ಚೇಂಬರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಅದೇ ಟೈಟಲ್‍ನ್ನು ಇನ್ನೊಬ್ಬರಿಗೆ ಕೊಡುವುದು ಕಾಪಿರೈಟ್ ಉಲ್ಲಂಘನೆ. ಅಲ್ಲದೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಚಿತ್ರೀಕರಣ ನಡೆಸಿದ್ದು ಶೇ.80ರಷ್ಟು ಶೂಟಿಂಗ್ ಕೂಡಾ ಮುಗಿಸಿದ್ದಾರೆ ಎಂದು ವಾದಿಸಿದ್ದಾರೆ ಸಿಂಗ್ ಬಾಬು. ಅಂಬರೀಷ್ ಮತ್ತು ಸುಹಾಸಿನಿ ಪ್ರಧಾನ ಪಾತ್ರದಲ್ಲಿದ್ದ ಚಿತ್ರದ ಶೂಟಿಂಗ್ ಅಂಬಿ ನಿಧನದ ಹಿನ್ನೆಲೆಯಲ್ಲಿ ನಿಂತಿದೆ. ಮತ್ತೆ ಟೇಕಾಫ್ ಮಾಡುತ್ತೇವೆ. ಟೈಟಲ್ ಕೊಡುವುದು ಬೇಡ ಎನ್ನುವುದು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ವಾದ.
ಫಿಲಂ ಚೇಂಬರ್ ಪ್ರಕಾರ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಇರುವುದು ಬಿ.ಕೆ.ಗಂಗಾಧರ್ ಹೆಸರಿನಲ್ಲಿ. 




