ಅಗ್ರಿಮೆಂಟ್ ಮಾಡ್ಕೋ, ಒಂದ್ ವರ್ಷ ಮಾತ್ರ. ಆಮೇಲೆ ನಂಗೂ ನಿಂಗೂ ಡಿವೋರ್ಸ್.. ಇಂಥಾದ್ದೊಂದು ಕಥೆ ಕೇಳಿದ ತಕ್ಷಣ ಕನ್ನಡಿಗರ ಕಣ್ಣೆದುರು ಮಾಲಾಶ್ರೀ-ಶಶಿಕುಮಾರ್ ಅಭಿನಯದ ರೆಡಿಮೇಡ್ ಗಂಡ ಸಿನಿಮಾ, ರವಿಚಂದ್ರನ್-ರಮ್ಯಕೃಷ್ಣ ಅಭಿನಯದ ಮಾಂಗಲ್ಯಂ ತಂತು ನಾನೇನ ಸಿನಿಮಾ ನೆನಪಾಗುತ್ತದೆ. ಆದರೆ ಇದಕ್ಕಿಂತಲೂ ವಿಭಿನ್ನವಾದ ಕಥೆ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯದ್ದು.
ಕನ್ನಡ ಕಿರುತೆರೆಯಲ್ಲಿ ಮದುವೆ ಕಥೆಯನ್ನೇ ಇಟ್ಟುಕೊಂಡು ಬಂದಿರುವ ಕಥೆಗಳಿಗಿಂತ ಇದು ಹೊಸದು. ಇದೀಗ ‘ನಿನ್ನ ಜೊತೆ ನನ್ನ ಕಥೆ’ ಎಂಬ ಹೊಸ ಧಾರಾವಾಹಿಯ ಮೂಲಕ ವಿನೂತನ ಕಥೆ ಸ್ಟಾರ್ ಸುವರ್ಣದಲ್ಲಿ ಶುರುವಾಗುತ್ತಿದೆ. ಅಂದಹಾಗೆ ಈ ಧಾರಾವಾಹಿ ನಡೆಯುವುದು ಮಂಡ್ಯದಲಿಲ.
ಕಥೆಯಲ್ಲಿ ಏನಿದೆ..?
ಧಾರಾವಾಹಿಯ ಕಥಾನಾಯಕಿ ಭೂಮಿ. ಚಹಾ ಮಾರುವ ಹುಡುಗಿ. ಈಕೆಗೆ ಪೊಲೀಸ್ ಕಾನ್ಸ್ ಟೇಬಲ್ ಆಗಬೇಕೆಂಬ ಕನಸಿದೆ. ಇದೇ ಭೂಮಿಯ ತಾಯಿ ಯಾರದ್ದೋ ಸಂಚಿಗೆ ಬಲಿಯಾಗಿ, ತಪ್ಪೇ ಮಾಡದಿದ್ದರೂ ಜೈಲು ಸೇರಿರುತ್ತಾರೆ.
ಈ ಕಥೆಯ ನಾಯಕ ಅಜಿತ್. ಶ್ರೀಮಂತ ಕುಟುಂಬದಲ್ಲಿ ಬೆಳೆದಿರುವ ಯುವಕ. ನಿಷ್ಠಾವಂತ ಪೊಲೀಸ್ ಅಧಿಕಾರಿ. ಈತನಿಗೋ ಮದುವೆ ಅಂದ್ರೇನೆ ಇಷ್ಟ ಇರಲ್ಲ. ಇವರಿಬ್ಬರಿಗೂ ಮದುವೆ ಆಗುತ್ತೆ.
ಅನಿವಾರ್ಯ ಕಾರಣಗಳು, ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಭೂಮಿ ಹಾಗು ಅಜಿತ್ ಇಬ್ಬರೂ ಪರಸ್ಪರ ಷರತ್ತು ಹಾಕಿಕೊಳ್ತಾರೆ. ಒಂದು ವರ್ಷದ ಕಾಂಟ್ರಾಕ್ಟ್ ಮಾಡಿಕೊಂಡು ಮದುವೆ ಆಗ್ತಾರೆ.
ಮುಂದೇನಾಗುತ್ತೆ ಅನ್ನೋದು ಧಾರಾವಾಹಿಯ ಕಥೆ. ಕಥೆಯನ್ನು ಸಖತ್ ಇಂಟ್ರೆಸ್ಟಿಂಗ್ ಆಗಿ ಹೇಳಲಾಗಿದೆ. ಪ್ರತಿ ಸಂಚಿಕೆಯೂ ಭಾವನೆಗಳ ತಾಕಲಾಟ, ಸಸ್ಪೆನ್ಸ್ ಇರಲಿದೆ.
ಕಥೆಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನಟ ನಿರಂಜನ್ ವರ್ಷಗಳ ಬಳಿಕ “ನಿನ್ನ ಜೊತೆ ನನ್ನ ಕಥೆ” ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ‘ಕಮಲಿ’ ಧಾರಾವಾಹಿ ಮೂಲಕ ಫೇಮಸ್ ಆದ ನಟ ನಿರಂಜನ್, ತೆಲುಗಿನಲ್ಲಿ ‘ಎನ್ನೆನೋ ಜನ್ಮಲ ಬಂಧಮ್’, ತಮಿಳಿನಲ್ಲಿ ‘ಅಳಗು’, ‘ನಂದಿನಿ’, ‘ಸತ್ಯಭಾಮಾ’ ಮುಂತಾದ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಪರಭಾಷೆಯಲ್ಲಿಯೇ ಒಂದಾದ ಮೇಲೊಂದು ಧಾರಾವಾಹಿಗಳಲ್ಲಿ ಅವರು ನಟಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕನ್ನಡ ಕಿರುತೆರೆಯಿಂದ ದೂರವಿದ್ದ ಅವರು, ಇದೀಗ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.
ನಾಯಕಿಯಾಗಿ ನಟಿ ನಿರೂಷಾ ಗೌಡ ನಟಿಸುತ್ತಿದ್ದಾರೆ. ‘ಅಮ್ಮನ ಮನೆ’, ‘ಗಂಡ ಹೆಂಡತಿ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ನಿರೂಷಾ ಗೌಡ ಅವರಿಗೆ ಇದು ಹೊಸ ಧಾರಾವಾಹಿ ಹಾಗೂ ಸವಾಲಿನ ಪಾತ್ರ. ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.
ಅಂದಹಾಗೆ ಮಾಂಗಲ್ಯಂ ತಂತು ನಾನೇನ ಚಿತ್ರದಲ್ಲಿ ಅಗ್ರಿಮೆಂಟ್ ಮಾಡಿಸಿಕೊಳ್ಳೋದು ರವಿಚಂದ್ರನ್, ರೆಡಿಮೇಡ್ ಗಂಡ ಚಿತ್ರದಲ್ಲಿ ಅಗ್ರಿಮೆಂಟ್ ಮಾಡಿಸಿಕೊಳ್ಳೋದು ನಟಿ ಮಾಲಾಶ್ರೀ. ಇಲ್ಲಿ ಅಗ್ರಿಮೆಂಟ್ ಮಾಡಿಸಿಕೊಳ್ಳೋದು ಯಾರು ಅನ್ನೋ ಕುತೂಹಲ ಇದೆಯಾ..? ಉತ್ತರ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ʻನಿನ್ನ ಜೊತೆ ನನ್ನ ಕಥೆʼ ಧಾರಾವಾಹಿಯಲ್ಲಿ ಸಿಗಲಿದೆ.



