ಎನ್.ಟಿ.ಆರ್. ತೆಲುಗಿನಲ್ಲಿ ಸೂಪರ್ ಸ್ಟಾರ್. ಕರ್ನಾಟಕದಲ್ಲಿ ಹೇಗೆ ಡಾ.ರಾಜ್ ಕುಟುಂಬವನ್ನು ಕನ್ನಡಿಗರು ಆರಾಧಿಸುತ್ತಾರೆಯೋ.. ಹಾಗೆಯೇ ಆಂಧ್ರ, ತೆಲಂಗಾಣದಲ್ಲಿ ಎನ್.ಟಿ.ಆರ್. ಕುಟುಂಬ. ಡಾ.ಪುನೀತ್ ರಾಜಕುಮಾರ್ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭಕ್ಕೆ ಬಂದಿದ್ದ ಎನ್.ಟಿ.ಆರ್. ಹೇಳಿದ್ದು ಕೆಲವೇ ಮಾತುಗಳಾದರೂ ಎಲ್ಲರ ಮನಗೆದ್ದರು. ಕುಂದಾಪುರದ ತಾಯಿಯ ಮಗ ತಾರಕರತ್ನ ರಾಮರಾವ್ ಹೇಳಿದ್ದು ಇಷ್ಟೆ. ನಾಮ-ಉಪನಾಮ ತಂದೆ ತಾಯಿಯಿಂದ ಬರುತ್ತವೆ. ವ್ಯಕ್ತಿತ್ವ ನಾವು ಗಳಿಸಿಕೊಳ್ಳುವಂತಹದ್ದು ಎಂದ ಎನ್.ಟಿ.ಆರ್. ಮಳೆಯಲ್ಲಿ ನಿಂತುಕೊಂಡೇ ಮಾತನಾಡಿದರು. ಇಲ್ಲಿ ನಾನೇನೋ ಸಾಧನೆ ಮಾಡಿದ್ದೇನೆ ಎಂಬ ಕಾರಣಕ್ಕೆ ಬಂದಿಲ್ಲ. ಒಬ್ಬ ಹೆಮ್ಮೆಯ ಗೆಳೆಯನಾಗಿ ಬಂದಿದ್ದೇನೆ ಎಂದರು.
ಇದಕ್ಕಿಂತಲೂ ಎಲ್ಲರ ಗಮನ ಸೆಳೆದದ್ದು ಎನ್‍ಟಿಆರ್ ಸರಳತೆ ಮತ್ತು ಸೌಜನ್ಯ. ಮಳೆ ಬಂದ ಕಾರಣ ಎಲ್ಲವೂ ಅಸ್ತವ್ಯಸ್ತವಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಗೊಂದಲಗಳು ಎದ್ದು ಕಾಣುತ್ತಿದ್ದವು. ನಿರೂಪಕರನ್ನು ಬಿಟ್ಟು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನಿರೂಪಣೆಗೆ ನಿಂತುಬಿಟ್ಟರು. ಈ ನಡುವೆ ಅತಿಥಿಗಳನ್ನು ಕರೆತಂದಿದ್ದವರು ಅತಿಥಿಗಳನ್ನು ಮರೆತೇಬಿಟ್ಟರು. ಕೊಡೆ ಹುಡುಕುವ ಕೆಲಸಕ್ಕೆ ನಿಂತರು. ಈ ನಡುವೆ ವೇದಿಕೆಯಲ್ಲಿ ಯಾರದ್ದೋ ಕುರ್ಚಿಯಲ್ಲಿ ಇನ್ಯಾರೋ ಕುಳಿದ್ದರು. ಸುರಿಯುತ್ತಿದ್ದ ಮಳೆ..
ಆಗ ಕರ್ನಾಟಕ ರತ್ನ ಗೌರವ ಸ್ವೀಕರಿಸಬೇಕಿದ್ದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಕೂರಬೇಕಿದ್ದ ಕುರ್ಚಿಯೇ ಒದ್ದೆಯಾಗಿ ಹೋಗಿತ್ತು. ಸ್ವತಃ ಎದ್ದು ನಿಂತು ಅಶ್ವಿನಿ ಅವರಿದ್ದ ಕುರ್ಚಿಯನ್ನು ಭದ್ರತಾ ಸಿಬ್ಬಂದಿಯ ಬಟ್ಟೆ ತೆಗೆದುಕೊಂಡು ಒರೆಸಿದ ಎನ್.ಟಿ.ಆರ್. ಅಶ್ವಿನಿಯವರನ್ನು ಕುಳ್ಳಿರಿಸಿದರು. ಅಷ್ಟೇ ಅಲ್ಲ, ಸುಧಾಮೂರ್ತಿಯವರಿಗೆ ಕುಳಿತುಕೊಳ್ಳಲು ಕುರ್ಚಿಯೇ ಇರಲಿಲ್ಲ. ಅಷ್ಟು ಹೊತ್ತಿಗೆ ಕುಳಿತಿದ್ದ ಎನ್.ಟಿ.ಆರ್. ಕುರ್ಚಿಯನ್ನು ಬಿಟ್ಟುಕೊಟ್ಟಿದ್ದಷ್ಟೇ ಅಲ್ಲ, ಅವರ ಚೇರ್‍ನ್ನು ಕೂಡಾ ಒರೆಸಿ ನಂತರ ವೇದಿಕೆಯಲ್ಲಿ ನಿಂತರು. ಎನ್.ಟಿ.ಆರ್. ಅವರ ಸರಳತೆ ಸಜ್ಜನಿಕೆ ಕನ್ನಡಿಗರಿಗೆ ಇಷ್ಟವಾಯಿತು.



