ಕಾಂತಾರ ಯಶಸ್ಸಿನ ನಂತರ ಆ ದೈವ, ಪಂಜುರ್ಲಿ, ಗುಳಿಗದ ಕುರಿತಂತೆ ಅನೇಕ ವಿಷಯಗಳು ಹೊರಬರುತ್ತಿವೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ದೈವ, ಭೂತಕೋಲದ ಬಗ್ಗೆ ತಿಳಿಯುವ ಆಸಕ್ತಿ ತೋರಿಸುತ್ತಿದ್ದಾರೆ. ಜೊತೆ ಜೊತೆಯಲ್ಲೇ ದೈವಗಳ ಪವಾಡದ ಕಥೆಗಳೂ ಹೊರಬರುತ್ತಿವೆ. ಕರಾವಳಿ ಜನರಿಗೆ ಇದು ಗೊತ್ತಿಲ್ಲದ ವಿಷಯಗಳೇನಲ್ಲ. ಆದರೆ ಕರಾವಳಿಯ ಹೊರಗೆ ಅದು ನಿಗೂಢವಾದ ಜಗತ್ತು. ಎಲ್ಲವೂ ಹೊಸ ಹೊಸದು.
ಸುಳ್ಯದಲ್ಲಿ ಇತ್ತೀಚೆಗೆ ನಡೆದ ಕೊರಗಜ್ಜ ದೈವಕೋಲದಲ್ಲಿ 12 ದೈವಪಾತ್ರಿಗಳ ಉತ್ಸವ ನಡೆಯುವಾಗ ಕೆಲವರಿಗೆ 13 ದೈವಗಳು ಕಾಣಿಸಿದ್ದು, ಉಡುಪಿಯ ಕಾಪುವಿನಲ್ಲಿ ಕಳ್ಳತನವಾದ ಸರ ಕಾರುಂದಾರು ದೈವಕ್ಕೆ ದೂರು ನೀಡಿದ ಮೇಲೆ ದೈವದ ದೀಪದಡಿ ಪತ್ತೆಯಾಗಿದ್ದು, ಉಡುಪಿಯಲ್ಲಿಯೇ ಕಳ್ಳತನವಾದ ಚಿನ್ನವನ್ನು ಎತ್ತಿಕೊಂಡು ಹೋಗಲಾಗದೆ ಕಳ್ಳರು ಪರದಾಡಿದ್ದು, ದಾವಣಗೆರೆಯಲ್ಲಿ ಅಸ್ವಸ್ಥವಾಗಿದ್ದ ಮಗು ವೈದ್ಯರು ಕೈಸೋತಾಗ ಚೇತರಿಸಿಕೊಂಡಿದ್ದು.. ಹೀಗೆ ಹತ್ತು ಹಲವು ಪವಾಡಗಳ ಕಥೆಗಳಿವೆ. ರಿಷಬ್ ಶೆಟ್ಟಿಯವರ ಕಾಂತಾರಕ್ಕೂ ಅಂತಹುದೇ ಪ್ರೇರಣೆಗಳಿವೆ.
ರಿಷಬ್ ಶೆಟ್ಟಿಯವರ ಒಬ್ಬರು ಮಾವ ದೈವಪಾತ್ರಿಯಂತೆ. ಶಂಕರ ಶೆಟ್ಟಿ ಎಂದವರ ಹೆಸರು. ರಿಷಬ್ ಶೆಟ್ಟಿ ಅವರನ್ನು ಕರೆಯುತ್ತಿದ್ದುದೇ ಶಂಕ್ರು ಮಾಮ ಎಂದು. ಬಾಲ್ಯದಿಂದಲೂ ನೋಡಿದ್ದ ಅವರು ಶಂಕ್ರು ಮಾಮ ಎತ್ತಿ ಆಡಿಸಿದ ಹುಡುಗ. ಅವರು ಮಲಯಾಳಿ ಬಬ್ಬರ್ಯನ ದೈವ ಪಾತ್ರಿಯಾಗಿದ್ದರು. ವಿಶೇಷವೆಂದರೆ ಆ ಶಂಕರ ಶೆಟ್ಟಿಯವರಿಗೆ ಕೆರಾಡಿ ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿರಲಿಲ್ಲ.


ದೈವದ ಪವಾಡಗಳನ್ನು ಜನ ಇವತ್ತಿಗೂ ನೋಡುತ್ತಾರೆ. ಕೆಲವು ಅರ್ಥವಾಗಲ್ಲ. ಅರ್ಥವಾಗದ ಘಟನೆಗಳನ್ನು ದೇವರು,ದೈವಕ್ಕೆ ಸಮೀಕರಿಸುವುದು ಭಾರತೀಯರ ಪದ್ಧತಿ. ದೈವಭಾಷೆಯೋ.. ಏನು ಮರ್ಮವೋ. ಎಲ್ಲವೂ ದೈವಲೀಲೆ.



