ಟಗರು ಚಿತ್ರದ ನಂತರ ಡಾಲಿ ಧನಂಜಯ್ ಆಗಿರೋ ಧನಂಜಯ ರೌಡಿಯಾಗಿಯೂ ನಟಿಸಿದ್ದಾರೆ. ರೌಡಿಗಳನ್ನು ಮಟ್ಟ ಹಾಕುವ ಪೊಲೀಸ್ ಆಗಿಯೂ ನಟಿಸಿದ್ದಾರೆ. ಭಗ್ನ ಪ್ರೇಮಿಯಾಗಿ, ಆಟೋ ಡ್ರೈವರ್ ಆಗಿ ಗೆದ್ದಿದ್ದಾರೆ. ಕೂಲ್ ಕೂಲ್ ಮಗನಾಗಿ, ರಗಡ್ ರಗಡ್ ಹುಡುಗನಾಗಿಯೂ ಗೆದ್ದಿರುವ ಡಾಲಿ ಧನಂಜಯ ಈ ಬಾರಿ ಬಾರ್ ವೆಂಡರ್ ಆಗಿ, ಖೈದಿಯಾಗಿ, ಪ್ರೇಮಿಯಾಗಿ ಮಾಸ್ & ಕ್ಲಾಸ್ ಸ್ಟೋರಿ ಹೇಳೋಕೆ ಬಂದಿದ್ದಾರೆ. ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಶುರುವಾದಾಗಲೇ ಚಿತ್ರತಂಡ ಇದು ರೆಗ್ಯುಲರ್ ಸ್ಟೋರಿ ಆಗಿರಲ್ಲ ಅನ್ನೋ ಸುಳಿವು ಕೊಟ್ಟಿತ್ತು. ಟೈಟಲ್ಲೇ ಸಂಥಿಂಗ್ ಸ್ಪೆಷಲ್ ಎನ್ನುವ ಕುತೂಹಲ ಮೂಡಿಸಿತ್ತು. ಡಾಲಿ ಧನಂಜಯ, ಆದಿತಿ ಪ್ರಭುದೇವ ಲೀಡ್ ರೋಲ್‍ನಲ್ಲಿದ್ದರೆ, ಪ್ರಾಣ್ಯ ಪಿ.ರಾವ್ ಬೇರೆಯದೇ ಜಗತ್ತು ತೋರಿಸುತ್ತಾರೆ. ಪುಟ್ಟ ಹುಡುಗಿಯ ಪಾತ್ರವೇನು ಅನ್ನೋದೇ ಸಸ್ಪೆನ್ಸ್. ಕುತೂಹಲಕ್ಕೆ ಕಿರೀಟವಿಟ್ಟಂತೆ ಈಗ ಟೀಸರ್ ಹೊರಬಿದ್ದಿದೆ. ಇನ್ನಷ್ಟು ಬೆರಗು ಹುಟ್ಟಿಸಿದೆ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಟೀಸರ್.

ಟೀಸರ್‍ನ ಮೊದಲ ದೃಶ್ಯದಲ್ಲಿಯೇ ರಗಡ್ ಲುಕ್‍ನಲ್ಲಿ ಡಾಲಿ ಜೈಲಿಗೆ ಎಂಟ್ರಿ ಕೊಡುತ್ತಾರೆ. ಆದರೆ.. ಆತ ಮಗುವಿನ ಜೊತೆ ನಕ್ಕು ನಲಿಯುತ್ತಾನೆ. ಮಗುವನ್ನು ನಗಿಸುತ್ತಾ ಇರುವುದೇ ತನ್ನ ಜೀವನದ ಪರಮಧ್ಯೇಯವೇನೋ ಎಂಬಂತೆ ಬದುಕುತ್ತಾನೆ. ಆದಿತಿಯ ನಗುವಿನಲ್ಲಿ ಕಳೆದು ಹೋಗುತ್ತಾನೆ. ಅಮರ ಪ್ರೇಮಿಯಂತೆ. ಯಶಾ ಶೆಟ್ಟಿ, ಭಾವನಾ ರಾಮಣ್ಣ. ಪ್ರಕಾಶ್ ಬೆಳವಾಡಿ, ಮಯೂರಿ ನಟರಾಜ್.. ಹೀಗೆ ಹಲವರು ನಟಿಸಿರೋ ಚಿತ್ರದ ಕಥೆಯಲ್ಲಿ ಕುಶಾಲ್ ಗೌಡ ಬೇರೆಯದೇ ಲೋಕ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಟೀಸರ್‍ನ ಕೊನೆಯ ಸೀನ್‍ನಲ್ಲಿ ಆದಿತಿ ಪ್ರಭುದೇವ ಸಿಗರೇಟು ಸೇದುತ್ತಾ ಕೂರುತ್ತಾರೆ. ಆ ನಗುವಿಗೂ ಸಿಗರೇಟಿಗೂ ಹೊಂದಿಕೆಯಾಗುತ್ತಾ ಅನ್ನೋ ಕುತೂಹಲದಲ್ಲೇ ಟೀಸರ್ ಮುಗಿಸುತ್ತಾರೆ. ಅರ್ಜುನ್ ಜನ್ಯ ಮತ್ತೊಮ್ಮೆ ಮ್ಯೂಸಿಕ್ ಮ್ಯಾಜಿಕ್ ಮಾಡಿದ್ದಾರೆ. ಶ್ರೀಹರಿ ನಿರ್ಮಾಣದ ಸಿನಿಮಾ ಡಿಸೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ.



