ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ರಶ್ಮಿಕಾ ಮಂದಣ್ಣ ಈಗ ಕನ್ನಡತಿಯಾಗಿ ಉಳಿದಿಲ್ಲ. ನ್ಯಾಷನಲ್ ಕ್ರಶ್ ಆಗಿದ್ದಾರೆ. ಆನಂತರ ಕನ್ನಡದಲ್ಲಿ ನಟಿಸಿದ್ದು ಪುನೀತ್, ಧ್ರುವ ಸರ್ಜಾ ಮತ್ತೊಬ್ಬ ನಟ ಸೇರಿದಂತೆ ಕೆಲವೇ ಕೆಲವರ ಚಿತ್ರಗಳಲ್ಲಿ. ಸ್ಟಾರ್ ಆದ ಕೂಡಲೇ ಒಪ್ಪಿಕೊಂಡಿದ್ದ ಒಂದು ಸಿನಿಮಾವನ್ನೂ ಕೈಬಿಟ್ಟರು. ಇದರ ಮಧ್ಯೆ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್‍ಮೆಂಟ್ ಮತ್ತು ಬ್ರೇಕಪ್ ಕೂಡಾ ಆಯ್ತು. ಟ್ರೋಲು ಶುರುವಾಯ್ತು.
ರಶ್ಮಿಕಾ ಹೋದಲ್ಲಿ..ಬಂದಲ್ಲಿ..ಕುಂತಲ್ಲಿ.. ನಿಂತಲ್ಲಿ.. ಟ್ರೋಲಿಗರ ಕಾಟ. ರಶ್ಮಿಕಾ ನಕ್ಕರೆ ಟ್ರೋಲ್. ರಶ್ಮಿಕಾ ನಡೆದಾಡಿದರೆ ಟ್ರೋಲ್. ಯಾವುದಾದರೂ ಸಂದರ್ಶನದಲ್ಲಿ ಏನನ್ನಾದರೂ ಮಾತನಾಡಿದರೆ ಟ್ರೋಲ್. ಕುಳಿತರೂ ಟ್ರೋಲ್. ನಿಂತರೂ ಟ್ರೋಲ್. ಸಿನಿಮಾ ಹಿಟ್ ಆದರೂ ಟ್ರೋಲ್. ಫ್ಲಾಪ್ ಆದರೂ ಟ್ರೋಲ್. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ಟ್ರೋಲ್ ಮಾಡುವುದು ಇತ್ತೀಚೆಗೆ ಸಂಪ್ರದಾಯವೇ ಆಗಿ ಹೋಯ್ತು.
ಮೊದ ಮೊದಲು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆರಾಮಾಗಿದ್ದೇನೆ. ಡೋಂಟ್ ಕೇರ್ ಮುಖಭಾವವನ್ನೇ ತೋರಿಸುತ್ತಿದ್ದ ರಶ್ಮಿಕಾ ಮಂದಣ್ಣ ಮೇಲ್ನೋಟಕ್ಕೆ ಆರಾಮಾಗಿಯೇ ಕಾಣಿಸುತ್ತಿದ್ದರು. ಟ್ರೋಲ್ ಮಾಡುತ್ತಿರುವವರಲ್ಲಿ ಬಹುತೇಕರು ಕನ್ನಡಿಗರೇ. ಆದರೆ ಒಳಗೊಳಗೇ ರಶ್ಮಿಕಾ ಮಂದಣ್ಣ ಕುದಿಯುತ್ತಿದ್ದರು ಎನ್ನುವುದು ಈಗ ಸಾಬೀತಾಗಿದೆ. ಟ್ರೋಲ್ ಮಾಡುವವರಿಗೆ ಒಂದು ಸುದೀರ್ಘ ಪತ್ರವನ್ನೇ ಬರೆದು ಆಕ್ರೋಶ ತೋಡಿಕೊಂಡಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ಎದುರಾದ ಕೆಲವು ಸಮಸ್ಯೆಗಳ ಬಗ್ಗೆ ್ಗ ಮೊದಲೇ ಮಾತನಾಡಬೇಕಿತ್ತು. ನನ್ನ ವೃತ್ತಿ ಬದುಕು ಶುರುವಾದ ದಿನಗಳಿಂದಲೂ ಕೆಲವರು ಅದೇಕೋ ಏನೋ ನನ್ನನ್ನು ದ್ವೇಷಿಸುತ್ತಿದ್ದಾರೆ. ಟ್ರೋಲಿಗರಿಗೆ ನೆಗೆಟಿವ್ ವಿಚಾರ ಹರಡುವವರಿಗೆ ನಾನೊಂಥರಾ ಪಂಚಿಂಗ್ ಬ್ಯಾಗ್ ಆಗಿಬಿಟ್ಟಿದ್ದೇನೆ. ಆದರೆ ನನಗೆ ಗೊತ್ತಿದೆ. ಸಿನಿಮಾ ನನ್ನ ಕ್ಷೇತ್ರ. ನನ್ನ ಕ್ಷೇತ್ರವೇ ಅಂತಹುದು. ಅದಕ್ಕೆ ಬೆಲೆ ತೆರಲೇಬೇಕು. ಎಲ್ಲರೂ ನನ್ನನ್ನು ಪ್ರೀತಿ ಮಾಡಲೇಬೇಕು ಎಂದು ನಿರೀಕ್ಷಿಸುವ ಹಾಗಿಲ್ಲ. ಆದರೆ ನನ್ನ ಬಗ್ಗೆ ನಿಮಗೆ ಓಕೆ ಇಲ್ಲ ಎಂದಾಕ್ಷಣ ನನ್ನ ಬಗ್ಗೆ ನೆಗೆಟಿವಿಡಿ ಹರಡಿ ಎಂದಲ್ಲ. ನನ್ನ ಶ್ರಮದ ಉದ್ದೇಶವೇ ನಿಮ್ಮ ರಂಜನೆ. ಕೆಲಸದ ಬಗ್ಗೆಯೇ ಹೆಚ್ಚು ಯೋಚನೆ ಮಾಡುತ್ತೇನೆ. ಹೆಮ್ಮೆ ಪಡುವಂತಹ ಕೆಲಸಗಳನ್ನೇ ಮಾಡಲು ನನಗೂ ಇಷ್ಟ. ಆದರೆ ನಾನು ಹೇಳದೇ ಇರುವ ವಿಚಾರಗಳ ಬಗ್ಗೆಯೇ ಯಾಕೆ ಟ್ರೋಲ್ ಮಾಡುತ್ತೀರಿ? ಇದು ನನಗೆ ದುಃಖದ ವಿಚಾರ. ಅವು ನನ್ನನ್ನು ಖಿನ್ನತೆಗೆ ದೂಡುತ್ತವೆ ಎಂದಿದ್ದಾರೆ ಕಿರಿಕ್ ಪಾರ್ಟಿ ಚೆಲುವೆ.
ನಾನು ಹೇಳಿದ ಮಾತುಗಳನ್ನು ಹೇಳ ಮಾತುಗಳನ್ನು ನನ್ನ ವಿರುದ್ಧವೇ ತಿರುಗಿಸುತ್ತಾರೆ. ಇದು ಉದ್ಯಮದೊಳಗಿನ ಒಡನಾಟ, ಸಂಬಂಧಗಳಿಗೆ ಹಾನಿ ಮಾಡುತ್ತಿದೆ. ನಿಮ್ಮ ವಿಮರ್ಶೆಗಳಿಗೆ, ವಸ್ತುನಿಷ್ಠ ಟೀಕೆಗಳಿಗೆ ಯಾವತ್ತಿಗೂ ನನ್ನ ಸ್ವಾಗತ. ಆದರೆ ನಕಾರಾತ್ಮಕ ಮಾತು, ಚಿಂತನೆಗಳಿಂದ ಏನು ಸಿಗುತ್ತದೆ. ತುಂಬಾ ದಿನಗಳಿಂದ ಇಂತಹವನ್ನು ನಿರ್ಲಕ್ಷಿಸಿದ್ದೆ. ಆದರೆ ಕಾಮೆಂಟ್ಸ್ ನನಗೂ ನೋವು ಮಾಡುತ್ತವೆ ಎಂದಿರುವ ಶ್ರೀವಲ್ಲಿ ನಿಮ್ಮನ್ನು ರಂಜಿಸುವುದರಿಂದಲೇ ನನಗೆ ಸಂತೋಷ ಸಿಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ರಶ್ಮಿಕಾ ವಿಜಯ್ ದೇವರಕೊಂಡ ಜೊತೆಗಿನ ಸಂಬಂಧ, ಸಿನಿಮಾ, ಕಾಂತಾರ ಎದುರು ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾ ಸೋತಿದ್ದು ಹಾಗೂ ಕಾಂತಾರ ಸಿನಿಮಾ ಇನ್ನೂ ನೋಡಿಲ್ಲ ಎಂದು ಹೇಳಿದ್ದಕ್ಕೆ ಟ್ರೋಲ್ ಆಗಿದ್ದರು. ಇನ್ನೂ ವಿಶೇಷವೆಂದರೆ ನಟಿ ರಮ್ಯಾ ರಶ್ಮಿಕಾ ಮಂದಣ್ಣ ಸಪೋರ್ಟಿಗೆ ಬಂದಿರುವುದು.
ಟ್ರೋಲಿಂಗ್ ಎಂಬುದೇ ಕೆಟ್ಟದ್ದು. ನಾವು ಯಾರ ಜೀವನದ ಬಗ್ಗೆಯೂ ನೀವು ಹೀಗೆಯೇ ಇರಬೇಕು ಎಂದು ಅಭಿಪ್ರಾಯ ಹೇರೋಕೆ ಆಗಲ್ಲ. ಜೀವನ ಕಳೆಯುತ್ತಾ ಹೋದಂತೆ ಯಾವುದು ಸರಿ ಯಾವುದು ತಪ್ಪು ಎಂದು ಅವರಿಗೇ ಗೊತ್ತಾಗುತ್ತಾ ಹೋಗುತ್ತದೆ. ಅವರನ್ನು ಅವರ ಪಾಡಿಗೆ ಇರಲು ಬಿಡಿ ಎಂದಿದ್ದಾರೆ ರಮ್ಯಾ. ನಟಿ ರಮ್ಯಾ ಕೂಡಾ ಟ್ರೋಲಿಗರ ಹಾವಳಿ ಅನುಭವಿಸಿದವರೇ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ ರಮ್ಯಾ ರಾಜಕೀಯಕ್ಕೆ ಗುಡ್ ಬೈ ಹೇಳಿದ ಮೇಲೆ ಟ್ರೋಲ್ ಸ್ವಲ್ಪ ಕಡಿಮೆಯಾಗಿದೆ. ಟ್ರೋಲಿಗರಿಂದ ತಪ್ಪಿಸಿಕೊಂಡ ರಮ್ಯಾ ಅವರ ಜಾಗಕ್ಕೆ ರಶ್ಮಿಕಾ ಮಂದಣ್ಣ ಬಂದಿದ್ದಾರೆ ಎನ್ನುವವರೂ ಇದ್ದಾರೆ.
ರಶ್ಮಿಕಾ ಅವರಿಗೆ ರಮ್ಯಾ ಅವರಷ್ಟೇ ಅಲ್ಲ, ತಾನ್ಯ ಹೋಪ್, ದುಲ್ಕರ್ ಸಲ್ಮಾನ್ ಸೇರಿದಂತೆ ಹಲವು ಕಲಾವಿದರು ಬೆಂಬಲ ಸೂಚಿಸಿದ್ದಾರೆ.



