ಹೊಂಬಾಳೆ ಮುಟ್ಟಿದ್ದೆಲ್ಲ ಚಿನ್ನ. ರಿಷಬ್ ಶೆಟ್ಟಿ ಮುಟ್ಟಿದ್ದೆಲ್ಲ ಬಂಗಾರ. ಸಪ್ತಮಿ ಗೌಡ ಹೋದಲ್ಲೆಲ್ಲ ಸಿರಿ ಸಿರಿ ಸಿಂಗಾರ. ಈಗಾಗಲೇ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಕಾಂತಾರ ಇದೀಗ ಮತ್ತೂ ಒಂದು ದಾಖಲೆಯನ್ನು ತನ್ನ ಕಿರೀಟಕ್ಕೆ ಸೇರಿಸಿಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವನ್ನು ಕರ್ನಾಟಕದಲ್ಲಿ ನೋಡಿದವರ ಸಂಖ್ಯೆ 1 ಕೋಟಿಯ ಗಡಿ ದಾಟಿದೆ.
ಇದು ವಿಶೇಷ..ವಿಶಿಷ್ಟ ದಾಖಲೆಯೇ ಸರಿ. ಒಂದು ಸೂಪರ್ ಡ್ಯೂಪರ್ ಹಿಟ್ ಸಿನಿಮಾ ನೋಡುವವರ ಸಂಖ್ಯೆ 50 ಲಕ್ಷ ದಾಟಲ್ಲ. 50 ಲಕ್ಷಕ್ಕೂ ಹೆಚ್ಚು ಜನ ನೋಡಿದ ದಾಖಲೆ ಇದ್ದದ್ದು ಕೆಜಿಎಫ್ ಚಾಪ್ಟರ್ 2ನದ್ದು. ಆ ದಾಖಲೆಯನ್ನು ಆಗಲೇ ಮುರಿದಿದ್ದ ಕಾಂತಾರ ಈಗ ಹೊಸ ಮೈಲುಗಲ್ಲು ನೆಟ್ಟಿದೆ.
ನಾಳೆ 7ನೇ ವಾರಕ್ಕೆ ಕಾಲಿಡುವ ಹೊತ್ತಿನಲ್ಲಿಯೇ ಚಿತ್ರದ ಕ್ರೇಜ್ ಇನ್ನೂ ಮುಂದುವರೆಯುತ್ತಿರುವ ಸಮಯದಲ್ಲಿಯೇ ಈ ದಾಖಲೆ ಬರೆದಿದೆ. ಕರ್ನಾಟಕವೊಂದರಲ್ಲಿಯೇ 1 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಕೇವಲ ಕನ್ನಡ ಕಲೆಕ್ಷನ್ 200 ಕೋಟಿ ಗಡಿ ದಾಟಿ ಹೋಗಿದೆ. ಹಿಂದಿಯಲ್ಲಿ ಸುಮಾರು 70 ಕೋಟಿ ದಾಟಿದ್ದು 75 ಕೋಟಿಯ ಸಮೀದಲ್ಲಿದೆ. ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಕಾಂತಾರ, ಹಿಂದಿಯಲ್ಲಿ ಪುಷ್ಪ ದಾಖಲೆಯನ್ನು ಮುರಿಯುವತ್ತ ಹೆಜ್ಜೆಯಿಟ್ಟಿದೆ.
ಕರ್ನಾಟಕದಲ್ಲಿ ಕಾಂತಾರ ನೋಡಿದವರ ಸಂಖ್ಯೆ 1 ಕೋಟಿ ದಾಟಿದೆ. ಇದು ಇದುವರೆಗೆ ಕಂಡು ಕೇಳಿಲ್ಲದ ದಾಖಲೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಕಾಂತಾರ 25 ದಿನದಲ್ಲಿ ಕೆಜಿಎಫ್ 2 ದಾಖಲೆ ಬ್ರೇಕ್ ಮಾಡಿತ್ತು. 77 ಲಕ್ಷ ಟಿಕೆಟ್ ಸೇಲ್ ಆಗಿತ್ತು. ಅದು ಒಂದು ದಾಖಲೆ. ತನ್ನದೇ ದಾಖಲೆಯನ್ನು ಮುರಿಯುತ್ತಾ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರದ ಟಿಕೆಟ್ ಸೇಲ್ ಆಗಿರುವ ಸಂಖ್ಯೆ 1 ಕೋಟಿ ದಾಟಿದೆ. ಇದು ಕೇವಲ ಕರ್ನಾಟಕದ ಲೆಕ್ಕ.
ಕಾಂತಾರದ ಪ್ರಮುಖ ಚಿತ್ರಮಂದಿರ ವೀರೇಶ್ ಸಿನಿಮಾಸ್‍ನಲ್ಲಿಯೇ 1.30 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೇಲ್ ಆಗಿವೆ. ಅಮೆರಿಕದಲ್ಲಿ 2 ಮಿಲಿಯನ್ ಡಾಲರ್ ಕ್ಲಬ್ ಸೇರಿದೆ. ಅಷ್ಟೇ ಅಲ್ಲ, ಒಟ್ಟಾರೆ ಕಲೆಕ್ಷನ್ 350 ಕೋಟಿಯನ್ನೂ ದಾಟಿದೆ. ಪುಷ್ಪ ಚಿತ್ರದ ಒಟ್ಟಾರೆ ಕಲೆಕ್ಷನ್ ಬ್ರೇಕ್ ಮಾಡಿದೆ. ಪುಷ್ಪ ಚಿತ್ರ 350.3 ಕೋಟಿ ಗಳಿಸಿತ್ತು. ಈಗ ಕಾಂತಾರ ಚಿತ್ರ 350.7 ಕೋಟಿ ಗಳಿಸಿದೆ. ಇನ್ನು ಮುಂದೆ ಆಗುವುದು ಇನ್ನೊಂದು ದಾಖಲೆ. ಅಂದಹಾಗೆ ಹಿಂದಿಯಲ್ಲಿ ಪುಷ್ಪ ದಿ ರೈಸ್ 100 ಕೋಟಿಗೂ ಹೆಚ್ಚು ಗಳಿಸಿ ದಾಖಲೆ ಬರೆದಿತ್ತು. ಆ ದಾಖಲೆಯ ಬೇಟೆಗೆ ಹೊರಟಿದೆ ಕಾಂತಾರ.



