ವರಾಹರೂಪಂ ದೈವವರೀತಂ.. ಕಾಂತಾರದ ಈ ಹಾಡು ಈಗ ಕೋಟಿ ಕೋಟಿ ಮೊಬೈಲ್ ರಿಂಗ್‍ಟೋನ್‍ಗಳಲ್ಲಿ, ಕಾಲರ್ ಟ್ಯೂನ್‍ಗಳಲ್ಲಿದೆ. ಕಾಂತಾರದ ವಿಶ್ವರೂಪವನ್ನು ಜಗತ್ತಿಗೇ ಪರಿಚಯಿಸಿದ್ದು ಕಾಂತಾರದ ವರಾಹರೂಪಂ. ಆದರೆ ಸಿನಿಮಾ ಬಿಡುಗಡೆಯಾಗದ ಕೆಲವೇ ದಿನಗಳಲ್ಲಿ ವರಾಹರೂಪಂ ಹಾಡು ವೊರಿಜಿನಲ್ ಅಲ್ಲ, ಕಾಪಿ ಮಾಡಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಕೇರಳದ ತೈಕ್ಕುಡಂ ಬ್ರಿಡ್ಜ್ ತಂಡದವರು ಹಾಡಿನ ವಿರುದ್ಧ ಕಾಪಿ ರೈಟ್ ಉಲ್ಲಂಘನೆ ಕೇಸು ಹಾಕಿದ್ದರು. ತೈಕ್ಕುಡಂ ತಂಡದ ನವರಸಂ ಮ್ಯೂಸಿಕ್ ಆಲ್ಬಂನ ಯಥಾವತ್ ಕಾಪಿ ಈ ಹಾಡು ಎಂದು ದೂರಿದ್ದರು. ಕೇರಳದ ಕೊಯಿಕ್ಕೋಡ್ ನ್ಯಾಯಾಲಯ ಹಾಡಿಗೆ ಸ್ಟೇ ಕೊಟ್ಟಿತ್ತು. ಹಾಡನ್ನು ಚಿತ್ರದಲ್ಲಿ, ಯಾವುದೇ ಸೋಷಿಯಲ್ ಮೀಡಿಯಾದಲ್ಲಿ, ರಿಂಗ್ ಟೋನುಗಳಲ್ಲಿ ಬಳಸಕೂಡದು ಎಂದಿತ್ತು. ಈಗಲೂ ಈ ಕ್ಷಣಕ್ಕೂ ಹೊಂಬಾಳೆ ತಂಡ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡು ತಮ್ಮ ವೊರಿಜಿನಲ್ ಸೃಷ್ಟಿಯೇ ಹೊರತು ಕದ್ದಿದ್ದಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ ಈಗ ಹೊಂಬಾಳೆ ಯೂ ಟ್ಯೂಬ್ ಚಾನೆಲ್‍ನಿಂದ ವರಾಹರೂಪಂ ಹಾಡು ಮಾಯವಾಗಿದೆ.
ಹೊಂಬಾಳೆ ಯೂಟ್ಯೂಬ್ ಚಾನೆಲ್‍ನಲ್ಲಿದ್ದ ವರಾಹರೂಪಂ ಹಾಡನ್ನು ಡಿಲೀಟ್ ಮಾಡಲಾಗಿದೆ. ಇದುವರೆಗೆ ಈ ಹಾಡನ್ನು ಮೂರೂವರೆ ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದರು.
ನಮಗೆ ಕ್ರೆಡಿಟ್ ಬೇಕು ಎಂದು ವಾದಿಸಿದ್ದ ತೈಕ್ಕುಡಂ ಬ್ರಿಡ್ಜ್ ತಂಡ ಚಿತ್ರತಂಡ ಎಲ್ಲಿಯೂ ಇದು ನವರಸಂ ಆಲ್ಬಂನ ಸ್ಫೂರ್ತಿ ಎಂದು ಹೇಳಿಕೊಂಡಿಲ್ಲ. ಚಿತ್ರದ ಕ್ರೆಡಿಟ್ ಕಾರ್ಡಿನಲ್ಲೂ ನಮ್ಮ ಹೆಸರಿಲ್ಲ. ನಮಗೆ ಕ್ರೆಡಿಟ್ ಕೊಡಿ ಎಂದು ಕೇಳಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪರವಾಗಿಯೇ ನಿಂತಿದ್ದು ಕೋರ್ಟಿನಲ್ಲಿ ಗೆಲ್ಲುವುದಕ್ಕೆ ಹೋರಾಡುತ್ತಿದ್ದಾರೆ. ಇದರ ಮಧ್ಯೆಯೇ ಹಾಡು ಡಿಲೀಟ್ ಆಗಿದೆ. ಅಂದಹಾಗೆ ಕೋರ್ಟಿನ ತಡೆಯಾಜ್ಞೆ ಬಂದಿದ್ದು 2 ವಾರಗಳ ಹಿಂದೆ. ಇಷ್ಟು ದಿನದ ನಂತರ ಡಿಲೀಟ್ ಮಾಡಿದ್ದೇಕೆ. ಅಂದರೆ ಕಾಂತಾರ ಟೀಂ ಹಾಡಿನ ವೊರಿಜಿನಾಲಿಟಿ ಸಾಬೀತು ಮಾಡುವಲ್ಲಿ ಸೋಲುತ್ತಿದೆಯಾ ಎಂಬ ಅನುಮಾನ ಮೂಡುವುದು ಸತ್ಯ.
ಆದರೆ ಚಿತ್ರಮಂದಿರದಲ್ಲಿ ಹಾಡು ಸಿಗಲಿದೆ. ಕಾಂತಾರ ಚಿತ್ರದ ಸಿನಿಮಾ ಶೋಗಳಿಗೆ ಥಿಯೇಟರುಗಳಲ್ಲಿ ಬ್ರೇಕ್ ಹಾಕಿಲ್ಲ ಎನ್ನಲಾಗಿದೆ. ಇನ್ನು ಚಿತ್ರ 7ನೇ ವಾರಕ್ಕೆ ಕಾಲಿಟ್ಟಿದ್ದು, ಗೆಲುವಿನ ಓಟ ಮುಂದುವರೆದಿದೆ. ಕಲೆಕ್ಷನ್ 350 ಕೋಟಿ ದಾಟಿದ್ದು, 400 ಕೋಟಿ ದಾಟುವ ನಿರೀಕ್ಷೆಗಳಿವೆ.



