ಕಾಂತಾರ 50 ದಿನ ಪೂರೈಸಿದೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶನಕ್ಕೆ ಸಿನಿ ಜಗತ್ತು ಬೆರಗಾಗಿದೆ. 300ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಹೌಸ್ ಫುಲ್ ಶೋ ಕಾಣುತ್ತಿರೋ ಕಾಂತಾರದ್ದು ಎಲ್ಲವೂ ಹೊಸ ಇತಿಹಾಸ. ಹೊಸ ದಾಖಲೆ. 400 ಕೋಟಿ ಕ್ಲಬ್ ಸನಿಹದಲ್ಲಿರೋ ಕಾಂತಾರದ ಮೂಲಕ ಕನ್ನಡ ಚಿತ್ರರಂಗವೂ ಫಳಫಳ ಹೊಳೆಯುತ್ತಿದೆ. ಈ ಮಧ್ಯೆಯೇ ಸಿನಿಮಾ ಒಟಿಟಿಗೆ ಬರುವ ಕಾಲ ಸನ್ನಿಹಿತವಾಗಿದೆ. ಈ ತಿಂಗಳ ಕೊನೆಗೆ ಕಾಂತಾರ ಒಟಿಟಿಗೆ ಬರಲಿದೆ. ಅಮೇಜಾನ್ ಪ್ರೈಂನಲ್ಲಿ ಪ್ರದರ್ಶನಗೊಳ್ಳಲಿದೆ.
ಚಿತ್ರ ಇನ್ನೂ ಹೌಸ್‍ಫುಲ್ ಇರುವಾಗ ಒಟಿಟಿಗೆ ಇನ್ನೂ ಲೇಟ್ ಆಗಿ ಬರಬಹುದಲ್ಲವೇ ಎಂಬುದು ಹಲವರ ಪ್ರಶ್ನೆ. ಅದಕ್ಕೆ ಕಾರಣ ಕಾಂತಾರದ ಯಶಸ್ಸು ಹೊಂಬಾಳೆಯವರಿಗೂ ಅನಿರೀಕ್ಷಿತ. ಗೆಲುವು ಪಕ್ಕಾ ಎನ್ನುವುದು ಗೊತ್ತಿತ್ತಾದರೂ ಚಿತ್ರಕ್ಕೆ ಈ ಪರಿ ಬೆಂಬಲ ಸಿಗುವ ನಿರೀಕ್ಷೆ ಹೊಂಬಾಳೆಗೂ ಇರಲಿಲ್ಲ. ರಿಷಬ್ ಶೆಟ್ಟಿಯವರಿಗೂ ಇರಲಿಲ್ಲ. ಚಿತ್ರದ ಈ ಮಟ್ಟದ ಗೆಲುವು ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ, ಕಾರ್ತಿಕ್ ಗೌಡ.. ಎಲ್ಲರನ್ನೂ ಅಚ್ಚರಿಗೆ ಬೀಳಿಸಿದ್ದು ನಿಜ. ಎಲ್ಲ ದೈವದ ಕೃಪೆ ಎನ್ನುವ ರಿಷಬ್ ಶೆಟ್ಟಿ ಈ ಚಿತ್ರವನ್ನು ನಾವು ಮಾಡಿದ್ದಲ್ಲ, ಅದು ತಂತಾನೇ ಆಗಿದ್ದು ಎಂದೇ ಹೇಳ್ತಾರೆ. ಈಗ ಚಿತ್ರ ಒಟಿಟಿಗೆ ಬರುತ್ತಿರುವುದಕ್ಕೆ ಕಾರಣವೂ ಇದೆ.

ಚಿತ್ರ ಬಿಡುಗಡೆಗೂ ಮೊದಲೇ ಚಿತ್ರದ ಒಟಿಟಿ ಹಕ್ಕುಗಳು ಮಾರಾಟವಾಗಿದ್ದವು. ಒಪ್ಪಂದದ ಪ್ರಕಾರವೇ ಚಿತ್ರ 6 ವಾರಗಳ ನಂತರ ಒಟಿಟಿಗೆ ಬರಬೇಕಿತ್ತು. ಆದರೆ ಸಿನಿಮಾ ಸಕ್ಸಸ್ ನೋಡಿಕೊಂಡು ಒತ್ತಡ ಹೇರಿ 2 ವಾರ ಮುಂದಕ್ಕೆ ಹಾಕಿದೆವು. ಇನ್ನೂ ಒತ್ತಡ ಹೇರುವುದು ಸಾಧ್ಯವಿಲ್ಲ. ಈ ತಿಂಗಳ ಕೊನೆಯಲ್ಲಿ ಕಾಂತಾರ ಒಟಿಟಿಗೆ ಬರಲಿದೆ ಎಂದಿದ್ದಾರೆ ಕೆಆರ್‍ಜಿ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ. ಚಿತ್ರದ ಅಧಿಕೃತ ವಿತರಕರು ಅವರೇ.
ಸಾಮಾನ್ಯವಾಗಿ ಒಟಿಟಿಯಲ್ಲಿ ಕೂಡಾ ಹೊಸ ಸಿನಿಮಾ ರಿಲೀಸ್ ಆಗುವುದು ಶುಕ್ರವಾರವೇ. ಆ ಲೆಕ್ಕದಲ್ಲಿ ನೋಡಿದರೆ ಕಾಂತಾರ ಅಮೇಜಾನ್ ಪ್ರೈಂನಲ್ಲಿ ನವೆಂಬರ್ 25ರಂದು ರಿಲೀಸ್ ಆಗಬೇಕು. ತಿಂಗಳ ಕೊನೆಯ ಶುಕ್ರವಾರ ಆವತ್ತೇ. ಇಲ್ಲದೇ ಡಿಸೆಂಬರ್ 1ರಂದು ರಿಲೀಸ್ ಆಗಬೇಕು. ಹೀಗಾಗಿ ಕಾಂತಾರವನ್ನು ಒಟಿಟಿಯಲ್ಲಿ ನೋಡಲು ಕಾದು ಕುಳಿತುಕೊಳ್ಳುವಂತಾಗಿದೆ. ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಸೇರಿದಂತೆ ಸೂಪರ್ ಡ್ಯೂಪರ್ ಹಿಟ್ ಆದ ಚಿತ್ರವನ್ನು ಮೊದಲು ಪೇಯ್ಡ್ ರಿಲೀಸ್ ಮಾಡುವ ಸಂಪ್ರದಾಯ ಪಾಲಿಸಿರುವ ಅಮೇಜಾನ್ , ಕಾಂತಾರವನ್ನು ಪೇಯ್ಡ್ ಮಾಡಲಿದೆಯೋ.. ಅಥವಾ ಎಲ್ಲ ಗ್ರಾಹಕರಿಗೂ ಪ್ರತ್ಯೇಕ ಶುಲ್ಕವಿಲ್ಲದೆ ನೀಡಲಿದೆಯೋ.. ಎನ್ನುವುದು ಖಚಿತವಾಗಿಲ್ಲ.



