ಕಾಂತಾರ. ರಿಲೀಸ್ ಆಗಿದ್ದು ಸೆ.30ರಂದು. ರಿಲೀಸ್ ಆಗಿ ಇವತ್ತಿಗೆ 45ನೇ ದಿನ. ರಿಷಬ್ ಶೆಟ್ಟಿ ನಿರ್ದೆಶನ, ನಟನೆ ಎರಡೂ ಮೋಡಿಯನ್ನೇ ಮಾಡಿದವು. ಇಂಡಿಯಾದ ಫಿಲ್ಮ್ ಇಂಡಸ್ಟ್ರಿ ಈ ಚಿತ್ರದ ಬಗ್ಗೆಯೇ ಮಾತನಾಡುತ್ತಿದೆ. ಶಿವ, ಲೀಲಾ ಪಾತ್ರಗಳು ರೊಮ್ಯಾಂಟಿಕ್ ಮೋಡಿ ಮಾಡಿದರೆ , ಗುಳಿಗ, ಪಂಜುರ್ಲಿ ದೈವಗಳು ದೈವೀಕ ಮೋಡಿ ಮಾಡಿದವು. ಹೊಂಬಾಳೆಯ ಮಡಿಲಿಗೆ ಇನ್ನೊಂದು ದಾಖಲೆ ಬರೆದು ಹಾಕಿದವು.

ಈಗ ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದೆ. ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರ ದೇಶದಾದ್ಯಂತ ಗಳಿಸಿದ್ದುದು 1200 ಕೋಟಿಗೂ ಹೆಚ್ಚು. ಆರ್.ಆರ್.ಆರ್. ದಾಖಲೆಯನ್ನು ಮೂಲೆಗೆ ತಳ್ಳಿತ್ತು. ಆದರೆ ಕಾಂತಾರ ಬೇರೆಯದೇ ರೀತಿಯಲ್ಲಿ ದಾಖಲೆ ಬರೆದಿದೆ. ಕಾಂತಾರ ಈಗ ಕೇವಲ 1 ಕೋಟಿಗೂ ಹೆಚ್ಚು ಮಂದಿ ನೋಡಿದ ಚಿತ್ರವಷ್ಟೇ ಅಲ್ಲ, ಕಲೆಕ್ಷನ್ನಿನಲ್ಲಿಯೂ ನಂ.1 ದಾಖಲೆ ಬರೆದಿದೆ. ಕನ್ನಡದಲ್ಲಿ ಸುಮಾರು 190 ಕೋಟಿ ಕಲೆಕ್ಷನ್ ಮಾಡಿತ್ತು ಕೆಜಿಎಫ್ ಚಾಪ್ಟರ್ 2. ಈಗ ಕಾಂತಾರ 200 ಕೋಟಿಯ ಗಡಿ ದಾಟಿದೆ. ಈ ಮೂಲಕ ಹೆಚ್ಚು ಜನ ನೋಡಿದ ಹಾಗೂ ಕರ್ನಾಟಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆ ಬರೆದಿದೆ.
ಕೆಜಿಎಫ್ ಚಾಪ್ಟರ್ 2ಗಿಂತ ಹೆಚ್ಚು ಜನ ನೋಡಿದರೂ ಓವರ್ ಆಲ್ ಕಲೆಕ್ಷನ್ ಮಾತ್ರ ಕಡಿಮೆ ಯಾಕೆ ಎಂಬ ಪ್ರಶ್ನೆಗೆ ಉತ್ತರ ಟಿಕೆಟ್ ದರ. ಕೆಜಿಎಫ್ ಚಿತ್ರದ ಭರ್ಜರಿ ಗಳಿಕೆಗೆಟಿಕೆಟ್ ದರವೂ ಕಾರಣವಾಗಿತ್ತು. ಆದರೆ ಕಾಂತಾರ ಚಿತ್ರಕ್ಕೆ ಹೊಂಬಾಳೆ ದುಬಾರಿ ದರ ಇಡಲಿಲ್ಲ. ಹೀಗಾಗಿ ಕಾಂತಾರ 45ನೇ ದಿನವೂ ಅದೇ ವೇಗದಲ್ಲಿ ಮುಂದುವರೆಯುತ್ತಿದೆ. 

ಹಿಂದಿಯಲ್ಲಿ 75 ಕೋಟಿ+, ತೆಲುಗಿನಲ್ಲಿ 50 ಕೋಟಿ+ ದಾಟಿರುವ ಕಾಂತಾರದ ಗಳಿಕೆ 350 ಕೋಟಿ ಗಡಿ ದಾಟಿ 400 ಕೋಟಿಯತ್ತ ಮುನ್ನುಗ್ಗುತ್ತಿದೆ. ಅಂದಹಾಗೆ ಕಾಂತಾರ ಕೆಜಿಎಫ್ ಚಾಪ್ಟರ್ 2 ಚಿತ್ರದ ಒಟ್ಟಾರೆ ಗಳಿಕೆ ಮೀರಿಸುವುದು ಅಸಾಧ್ಯ. ಏಕೆಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಕನ್ನಡಕ್ಕಿಂತ ಹಿಂದಿಯಲ್ಲಿ ಭಾರಿ ಸದ್ದು ಮಾಡಿತ್ತು. ಕೆಜಿಎಫ್ ಚಾಪ್ಟರ್ 2 ತೆಲುಗಿನಲ್ಲಿ 136 ಕೋಟಿ, ತಮಿಳಿನಲ್ಲಿ 115 ಕೋಟಿ, ಕೇರಳದಲ್ಲಿ 68 ಕೋಟಿ ಹಾಗೂ ಕನ್ನಡದಲ್ಲಿ 186 ಕೋಟಿ ಗಳಿಸಿದ್ದರೆ, ಹಿಂದಿಯಲ್ಲಿ 525 ಕೋಟಿ ಗಳಿಸಿತ್ತು. ಹೀಗಾಗಿ ಓವರಾಲ್ ದಾಖಲೆಯನ್ನು ಕಾಂತಾರ ಮುರಿಯವುದು ಅಸಾಧ್ಯವಾದರೂ ಕನ್ನಡದಲ್ಲಿ ಕಲೆಕ್ಷನ್, ಹೆಚ್ಚು ಶೋಗಳು ಮತ್ತು ಅತಿ ಹೆಚ್ಚು ಜನ ನೋಡಿದ ಸಿನಿಮಾ ಎಂಬ ದಾಖಲೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಕ್ಕೆ ದೂಡಿದೆ.



