ಕಾಂತಾರ ನಭೂತೋನಭವಿಷ್ಯತಿ.. ಎಂಬಂತೆ ಜನ ಮೆಚ್ಚುಗೆ ಗಳಿಸಿದೆ. ಜನ ಮೆಚ್ಚಿದ ಕಾಂತಾರ ಅನ್ನೋದು ಬೇರೆ. ಆದರೆ ಒಬ್ಬ ನಿರ್ದೇಶಕರ ಚಿತ್ರವನ್ನು ಇನ್ನೊಬ್ಬ ನಿರ್ದೇಶಕರು ಮೆಚ್ಚಿ ಹಾಡಿ ಹೊಗಳುವುದು ಬೇರೆ. ಅದು ಅವರ ಕೆಲಸಕ್ಕೆ ಸಿಗುವ ಅತಿ ದೊಡ್ಡ ಮನ್ನಣೆ. ಇತ್ತೀಚೆಗೆ ಅಂತಾದ್ದೊಂದು ಮೆಚ್ಚುಗೆ ಪಡೆದಿದ್ದ ನಿರ್ದೇಶಕರೆಂದರೆ ರಾಜಮೌಳಿ ಮಾತ್ರ. ಸದ್ಯಕ್ಕೆ ರಾಜಮೌಳಿ ಚಿತ್ರವನ್ನು ಇನ್ನೂ ನೋಡಿದಂತೆ ಕಾಣುತ್ತಿಲ್ಲ. ಒಂದೆಡೆ ಆಸ್ಕರ್ ರೇಸ್ ಮತ್ತೊಂದೆಡೆ ಜಪಾನ್ನಲ್ಲಿ ಬಿಡುಗಡೆ ಹಿನ್ನೆಲೆಯಲ್ಲಿ ರಾಜಮೌಳಿ ಕಾಂತಾರ ಚಿತ್ರವನ್ನು ನೋಡಿದಂತೆ ಕಾಣುತ್ತಿಲ್ಲ. ಇಲ್ಲದಿದ್ದರೆ ಭಾಷೆ ಯಾವುದೇ ಇರಲಿ, ಮೆಚ್ಚುಗೆಯನ್ನಂತೂ ಖಂಡಿತಾ ತಿಳಿಸುತ್ತಿದ್ದರು ಎನ್ನುವುದು ರಾಜಮೌಳಿ ಅಭಿಮಾನಿಗಳ ನಂಬಿಕೆ. ಅಂತಹ ನಿರ್ದೇಶಕರು ಮೆಚ್ಚಿದ ಕಾಂತಾರ. ಯಾವ್ಯಾವ ನಿರ್ದೇಶಕರ ಅಭಿಪ್ರಾಯ ಹೇಗಿತ್ತು ಎಂಬುದನ್ನು ನೋಡಿದರೆ ಅಚ್ಚರಿಯಾಗುವುದು ಸಹಜ. ರಿಷಬ್ ಶೆಟ್ಟಿಗೆ ಸಮಕಾಲೀನ ನಿರ್ದೇಶಕರ ಮೆಚ್ಚುಗೆ ಯಾವ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗೂ ಕಡಿಮೆಯೇನಲ್ಲ.
ರಕ್ಷಿತ್ ಶೆಟ್ಟಿ : ರಿಷಬ್ ಶೆಟ್ಟಿಯ ಆಪ್ತಮಿತ್ರ. ಸಿನಿಮಾವನ್ನು ನೋಡಿದ ತಕ್ಷಣ ಮಗುವಿನಂತೆ ಕುಪ್ಪಳಿಸಿ ಬಂದು ರಿಷಬ್ ಶೆಟ್ಟಿಯನ್ನು ಅಪ್ಪಿಕೊಂಡಿದ್ದರು. ಆ ಸಂಭ್ರಮದಲ್ಲೇ ಗೆಳೆಯ ನಿರ್ದೇಶಕರಾಗಿ ಗೆದ್ದ ಹೆಮ್ಮೆಯಿತ್ತು. ಉಳಿದವರು ಕಂಡಂತೆ ಚಿತ್ರವನ್ನು ನಿರ್ದೇಶಿಸಿದ್ದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಯ ಪ್ರಥಮ ನಿರ್ದೇಶನದ ರಿಕ್ಕಿ ಚಿತ್ರದ ಹೀರೋ ಕೂಡಾ. ಕಿರಿಕ್ ಪಾರ್ಟಿಯಲ್ಲೂ ಅವರೇ ಹೀರೋ.
ಕಿಚ್ಚ ಸುದೀಪ್ : ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದ ಸುದೀಪ್ ಮಾಸ್ ಹೀರೋ. ಕನ್ನಡದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು. ಕಾಂತಾರ ನೋಡಿ ಸುದೀರ್ಘ ಪತ್ರವನ್ನೇ ಬರೆದು ರಿಷಬ್ ಶೆಟ್ಟಿ ಹಾಗೂ ಇಡೀ ತಂಡವನ್ನು ಹಾಡಿ ಹೊಗಳಿದ್ದರು.
ಪ್ರಶಾಂತ್ ನೀಲ್ : ಉಗ್ರಂ, ಕೆಜಿಎಫ್ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್ ನೀಲ್. ಇತ್ತೀಚೆಗೆ ಕೆಜಿಎಫ್ ಮೂಲಕ ಇಡೀ ಇಂಡಿಯನ್ ಸಿನಿಮಾ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ. ನನ್ನ ಆಲ್ಟೈಂ ಫೇವರಿಟ್ ಚಿತ್ರಗಳ ಹೊಸ ಸೇರ್ಪಡೆ ಕಾಂತಾರ ಎಂದು ಹೊಗಳಿದ್ದರು.


ಯೋಗರಾಜ್ ಭಟ್ : ಮುಂಗಾರು ಮಳೆ ಮೂಲಕ ಚಿತ್ರೋದ್ಯಮದ ದಿಕ್ಕನ್ನೇ ಬದಲಿಸಿದ ನಿರ್ದೇಶಕ ಯೋಗರಾಜ್ ಭಟ್. ನಮಸ್ತೆ, ಇಡೀ ನಾಡು ತಿರುಗಿ ನೋಡುವಂತೆ ಮಾಡಿದ ‘ಕಾಂತಾರ’ ಚಿತ್ರತಂಡದ ಸಾಧನೆಗೆ ಶರಣು ಶರಣಾರ್ಥಿ. ತುಂಬ ಪ್ರೀತಿಯ ರಿಷಭನಿಗೆ, ತುಂಬ ಪ್ರೀತಿಯ ಹೊಂಬಾಳೆಗೆ, ಶ್ರಮವಹಿಸಿದ ಇಡೀ ಚಿತ್ರತಂಡಕ್ಕೆ ನನ್ನ ನಮನಗಳು ಹಾಗೂ ಧನ್ಯವಾದಗಳು. ಅನ್ಲಿಮಿಟೆಡ್ ಅಕ್ಕರೆಗಳು.. ಜೈ ಕಾಂತಾರ ಎಂದಿದ್ದರು ಯೋಗರಾಜ್ ಭಟ್.
ಸಿಂಪಲ್ ಸುನಿ : ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮೂಲಕ ರಕ್ಷಿತ್ ಶೆಟ್ಟಿಗೆ ಹೀರೋ ಆಗಿ ಗುರುತಿಸುವಂತೆ ಮಾಡಿದ ನಿರ್ದೇಶಕ. ರಕ್ಷಿತ್ ಶೆಟ್ಟಿಯ ಉಳಿದವರು ಕಂಡಂತೆ ಚಿತ್ರದ ನಿರ್ಮಾಪಕ. ಈಗಲೂ ಅದೇ ಪ್ರೀತಿಯನ್ನಿಟ್ಟುಕೊಂಡಿರುವ ಸುನಿ ರಿಷಬ್ರನ್ನು ಕೊಂಡಾಡಿದ್ದರು.
ರಾಮ್ ಗೋಪಾಲ್ ವರ್ಮಾ : ರಾಮ್ ಗೋಪಾಲ್ ವರ್ಮಾಗೆ ಇಷ್ಟವಾಯಿತೆಂದರೆ ಅದನ್ನೂ ಅತಿಯಾಗಿಯೇ ಮಾಡ್ತಾರೆ. ಭಾರತೀಯ ಚಿತ್ರರಂಗದ ಟ್ರೆಂಡ್ ಸೆಟ್ಟರ್ಗಳಲ್ಲಿ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಶಿವ, ಕ್ಷಣ ಕ್ಷಣಂ, ರಂಗೀಲಾ, ಸರ್ಕಾರ್,ಕಂಪೆನಿ, ಸತ್ಯ, ರಕ್ತಚರಿತ್ರ.. ಹೀಗೆ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾ ನೋಡಿ ಥ್ರಿಲ್ಲಾಗಿದ್ದಾರೆ. ಅದೆಷ್ಟು ಟ್ವೀಟ್ ಮಾಡಿದ್ದಾರೋ..
#Kantara is cinematic scintillating experience one should not miss, captivating background score,brilliant cinematography, Splendidly directed & flawlessly acted by @shetty_rishab,the climax gave me goosebumps with moist eyes. I am just Spellbound.Congrats to the entire team.🙏 pic.twitter.com/13R3KMZAFd
— Madhur Bhandarkar (@imbhandarkar) October 17, 2022
ಮಧುರ್ ಬಂಡಾರ್ಕರ್ :ಚಾಂದ್ನಿ ಬಾರ್, ಪೇಜ್ 3, ಫ್ಯಾಷನ್, ಟ್ರಾಫಿಕ್ ಸಿಗ್ನಲ್ನಂತಹ ವಿಭಿನ್ನ ಚಿತ್ರಗಳನ್ನು ಕೊಟ್ಟ ನಿರ್ದೇಶಕ. ಪ್ರತಿ ಚಿತ್ರದಲ್ಲೂ ಕಾನ್ಸೆಪ್ಟ್ ಚೇಂಜ್ ಮಾಡುವ ವೆರೈಟಿ ನಿರ್ದೇಶಕ. ಮಧುರ್ ಭಂಡಾರ್ಕರ್ ಚಿತ್ರವನ್ನು ನೋಡಿ ರಿಷಬ್ ಶೆಟ್ಟಿಯವರಿಗೆ ಫೋನ್ ಮಾಡಿ ಅಭಿನಂದಿಸಿದ್ದಾರೆ. ಹಿಂದಿಯಲ್ಲಿ ಚಿತ್ರವನ್ನು ತಮ್ಮ ಟ್ವೀಟ್ ಮೂಲಕ ಪ್ರಮೋಟ್ ಮಾಡುತ್ತಿದ್ದಾರೆ.
ಧನುಷ್ : ಧನುಷ್ ನಟರಾಗಿಯೇ ಹೆಚ್ಚು ಖ್ಯಾತಿ ಪಡೆದವರು.. ಪಾ ಪಾಂಡಿ ಅನ್ನೋ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಪಕರೂ ಹೌದು. ಅಂತಹ ಧನುಷ್ ಮೈನವಿರೇಳಿಸುವಂತೆ ಮಾಡಿದೆಯಂತೆ ಕಾಂತಾರ. ಕಾಂತಾರ ನೋಡಿ ಮೆಚ್ಚಿದ ಮೊದಲ ತಮಿಳು ನಟ ನಿರ್ದೇಶಕ ಧನುಷ್.
ಪೃಥ್ವಿರಾಜ್ ಸುಕುಮಾರನ್ : ಲೂಸಿಫರ್, ಬ್ರೊ ಡ್ಯಾಡಿ ಚಿತ್ರಗಳ ಮೂಲಕ ತಾನು ಕೇವಲ ಌಕ್ಟರ್ ಅಷ್ಟೇ ಅಲ್ಲ, ಅದ್ಭುತ ಡೈರೆಕ್ಟರ್ ಅನ್ನೋದನ್ನೂ ಸಾಬೀತು ಮಾಡಿದವರು ಪೃಥ್ವಿರಾಜ್ ಸುಕುಮಾರನ್. ಲೂಸಿಫರ್ ಚಿತ್ರದಲ್ಲಿ ಮೋಹನ್ ಲಾಲ್ ಇದ್ದರೆ ಅದೇ ಸಿನಿಮಾವನ್ನ ತೆಲುಗಿನಲ್ಲಿ ಚಿರಂಜೀವಿ ಮಾಡಿ ಗೆದ್ದರು ಎನ್ನುವುದು ವಿಶೇಷ. ಆ ಚಿತ್ರವನ್ನ ಮಲಯಾಳಂನಲ್ಲಿ ಸ್ವತಃ ಬಿಡುಗಡೆ ಮಾಡುವಷ್ಟು ಇಂಪ್ರೆಸ್ ಆದರು ಪೃಥ್ವಿರಾಜ್.
ಸಂತೋಷ್ ಆನಂದರಾಮ್ : ಹೊಂಬಾಳೆಗೆ ಮೊದಲ ಯಶಸ್ಸು ಕೊಟ್ಟ ನಿರ್ದೇಶಕ. ರಾಜಕುಮಾರ ಚಿತ್ರದ ಮೂಲಕ ಅಪ್ಪು ಇಮೇಜ್ನ್ನು ಆಕಾಶದೆತ್ತರಕ್ಕೆ ಏರಿಸಿದ ನಿರ್ದೇಶಕ. ಮೊದಲ ದಿನವೇ ಸಿನಿಮಾ ನೋಡಿ ಎಕ್ಸೈಟ್ ಆಗಿ ಚಿತ್ರವನ್ನು ಹಾಡಿ ಹೊಗಳಿದ್ದರು.
ಗಣೇಶ್ : ಗೋಲ್ಡನ್ ಸ್ಟಾರ್ ಕೂಡಾ ಚಿತ್ರವನ್ನು ನಿರ್ದೇಶನ ಮಾಡಿದ್ದವರೇ. ಮಳೆಯಲಿ ಜೊತೆಯಲಿ ಚಿತ್ರವನ್ನು ನಿರ್ದೇಶಿಸಿದ್ದ ಗಣೇಶ್ ಚಿತ್ರದ ಬಗ್ಗೆ ಪ್ರೀತಿಯ ಮಾತನ್ನಾಡಿದ್ದಾರೆ. ರಿಷಬ್ ಶೆಟ್ಟಿಯವರನ್ನ ಕೊಂಡಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ : ಲವ್ ಮಾಕ್ಟೇಲ್ ಚಿತ್ರದ ಮೂಲಕ ನಿರ್ದೇಶಕರಾದ ಡಾರ್ಲಿಂಗ್ ಕೃಷ್ಣ ಚಿತ್ರವನ್ನು ನೋಡಿದ ದಿನವೇ ಥ್ರಿಲ್ಲಾಗಿ ಚಿತ್ರವನ್ನು ಮೆಚ್ಚಿಕೊಂಡಿದ್ದರು.
ಕಾರ್ತಿಕ್ ಸುಬ್ಬರಾಜ್ : ಪಿಜ್ಜಾ, ಜಿಗರ್ಥಂಡ, ಇರವೈ, ಮರ್ಕ್ಯೂರಿ, ಪೆಟ್ಟಾ.. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜ್ ತಮಿಳಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವಂತೆ ಕೇಳಿದ್ದ ತಮಿಳು ನಿರ್ದೇಶಕರಲ್ಲಿ ಒಬ್ಬರು.
ಹೇಮಂತ್ ಎಂ. ರಾವ್ : ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿಯಂತಹ ವಿಭಿನ್ನ ಪ್ರಯೋಗಗಳನ್ನು ನೀಡಿ ಗೆದ್ದ ನಿರ್ದೇಶಕ ಹೇಮಂತ್ ಚಿತ್ರ ನೋಡಿ ಖುಷಿಯಾಗಿ ಹೊಗಳಿದ್ದರು.
ಕಿರಣ್ ರಾಜ್ : ಮೊದಲ ಚಿತ್ರದಲ್ಲೇ 777 ಚಾರ್ಲಿಯಂತಾ ಚಿತ್ರವನ್ನು ನೀಡಿ ಗೆದ್ದಿದ್ದ ಕಿರಣ್ ರಾಜ್ ಚಿತ್ರವನ್ನು ಸ್ವತಃ ಪ್ರಮೋಟ್ ಮಾಡಿದ್ದರು.
ರಾಜ್ ಬಿ.ಶೆಟ್ಟಿ : ಇವರನ್ನು ಬೇರೆಯವರು ಅನ್ನೋಕೆ ಸಾಧ್ಯವಿಲ್ಲ. ಚಿತ್ರವನ್ನು ಹೊಗಳಿದ್ದಾರೆ. ರಿಷಬ್ ಶೆಟ್ಟಿಯವರನ್ನೂ ಹೊಗಳಿದ್ದಾರೆ. ಆದರೆ ಚಿತ್ರದ ಹಾರ್ಟ್ ಭೂತಕೋಲ ಹಾಗೂ ದೈವದ ದೃಶ್ಯಗಳ ಹಿಂದಿನ ಶಕ್ತಿಯೂ ಇವರೇ ಆಗಿದ್ದರು. ಒಂದು ರೀತಿಯಲ್ಲಿ ರಿಷಬ್ ಶೆಟ್ಟಿಯವರಂತೆಯೇ ಇವರೂ ಕೂಡಾ ಕಾಂತಾರ ಟೀಂ. ಅದನ್ನೂ ಮೀರಿ ಚಿತ್ರವನ್ನು ಹೊಗಳಿ ಚಿತ್ರದ ಪ್ರಚಾರವನ್ನೂ ಮಾಡಿದ್ದಾರೆ ರಿಷಬ್.
ಇನ್ನೂ ಕೆಲವು ನಿರ್ದೇಶಕರ ಹೆಸರು ಮಿಸ್ ಆಗಿರಬಹುದು. ಆದರೆ ಇಂತಹ ಹಲವು ನಿರ್ದೇಶಕರ ಮೆಚ್ಚುಗೆ ಗಳಿಸಿದ ಡೈರೆಕ್ಟರ್ ಆಫ್ ದಿ ಡೈರೆಕ್ಟರ್ ರಾಜ್ ಬಿ.ಶೆಟ್ಟಿ.



