ಕಾಂತಾರ. ರಿಷಬ್ ಶೆಟ್ಟಿ-ಸಪ್ತಮಿ ಗೌಡ-ಹೊಂಬಾಳೆ ಜೋಡಿಯ ಸಿನಿಮಾ ಸತತ 7ನೇ ವಾರಕ್ಕೆ ಕಾಲಿಟ್ಟಿದೆ. 7ನೇ ವಾರದ ಥಿಯೇಟರ್ಸ್ ಲಿಸ್ಟ್ ನೋಡಿದರೆ.. ಯಾವುದೇ ದೊಡ್ಡ ದೊಡ್ಡ ಬದಲಾವಣೆಗಳಿಲ್ಲ. 7ನೇ ವಾರದಲ್ಲೂ ಇಷ್ಟೊಂದು ಥಿಯೇಟರ್ಸ್‍ನಲ್ಲಿ ಶೋ ನೋಡಿ ಯಾವ ಕಾಲವಾಗಿತ್ತೋ..ದಾಖಲೆಗಳ ಮೇಲೆ ದಾಖಲೆ ಬರೆದು ಮುನ್ನುಗ್ಗುತ್ತಿದೆ ಕಾಂತಾರ. ರಿಷಬ್ ಶೆಟ್ಟಿ ಈಗ ಡಿವೈನ್ ಸ್ಟಾರ್.
ಕಾಂತಾರ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ 50 ದಿನ ಪೂರೈಸಲಿದೆ. ಈಗಾಗಲೇ ಕೆಜಿಎಫ್ ಚಾಪ್ಟರ್ 2ನ ಅತೀ ಹೆಚ್ಚು ಜನ ನೋಡಿದ ಸಿನಿಮಾ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದ ಕಾಂತಾರ ಚಿತ್ರವನ್ನು ನೋಡಿದವರ ಸಂಖ್ಯೆ 1 ಕೋಟಿ ದಾಟಿದೆ. ಇದು ಕೇವಲ ಕರ್ನಾಟಕದ ಕನ್ನಡ ಕಾಂತಾರದ ಲೆಕ್ಕ. ಇನ್ನೂ ಇನ್ನೂ ಜನ ನೋಡುತ್ತಿದ್ದಾರೆ. ಈಗ ಕೆಜಿಎಫ್‍ನ ಮತ್ತೊಂದು ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಬೆಂಗಳೂರಿನಲ್ಲಿ ಬೆಂಗಳೂರು ಸಿಟಿಯಲ್ಲಿ 16,800 ಶೋಗಳ ಪ್ರದರ್ಶನ ಕಂಡಿತ್ತು. ಇದು ಕೇವಲ ಬೆಂಗಳೂರಿನ ಲೆಕ್ಕ. ಆ ದಾಖಲೆಯನ್ನು ಬ್ರೇಕ್ ಮಾಡಿರುವ ಕಾಂತಾರ ಈಗಾಗಲೇ 17,700 ಶೋ ಪ್ರದರ್ಶನ ಕಂಡಿದೆ. ಮತ್ತೂ ಪ್ರದರ್ಶನಗಳು ಮುಂದುವರೆಯುತ್ತಿವೆ.
ಅತ್ತ ಹಿಂದಿಯಲ್ಲಿ 75 ಕೋಟಿ ಕಲೆಕ್ಷನ್ ಮಾಡಿರುವ ಕಾಂತಾರ ಒಟ್ಟಾರೆಯಾಗಿ ಅಲ್ಲು ಅರ್ಜುನ್ ಅವರ ಪುಷ್ಪ ದಾಖಲೆಯನ್ನು ಅಳಿಸಿದ್ದಾರೆ. ಪುಷ್ಪ ಚಿತ್ರ ಎಲ್ಲ ಭಾಷೆಗಳೂ ಸೇರಿ 350 ಕೋಟಿ ಕಲೆಕ್ಷನ್ ಮಾಡಿತ್ತು. ಕಾಂತಾರ 355 ಕೋಟಿ ಕಲೆಕ್ಷನ್ ದಾಟಿದೆ. ಪುಷ್ಪದ 350 ಕೋಟಿ ಕಲೆಕ್ಷನ್‍ನಲ್ಲಿ ಹಿಂದಿ ವರ್ಷನ್ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ಆ ದಾಖಲೆ ಮಾತ್ರ ಈಗಲೂ ಪುಷ್ಪ ಹೆಸರಲ್ಲೇ ಇದೆ.
ಸಿನಿಮಾ ನೋಡಿದವರ ಸಂಖ್ಯೆ ಇಷ್ಟಿದ್ದರೂ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಹೀಗೇಕೆ ಎಂಬ ಪ್ರಶ್ನೆಗೆ ಉತ್ತರವೂ ಇದೆ. ಹೊಂಬಾಳೆಯವರು ಈ ಚಿತ್ರದ ಟಿಕೆಟ್ ದರವನ್ನು ಹೆಚ್ಚಿಸುವ ಉತ್ಸಾಹ ತೋರಿಸಿಲ್ಲ. ಬದಲಿಗೆ ಸಾಮಾನ್ಯ ಟಿಕೆಟ್ ದರದಲ್ಲೇ ಶೋ ನಡೆಯುತ್ತಿವೆ. ಚಿತ್ರ ಎಬ್ಬಿಸಿರುವ ಹವಾಗೆ ಕೆಜಿಎಫ್, ಪುಷ್ಪ ಮಾದರಿಯಲ್ಲಿ ಟಿಕೆಟ್ ದರ ಏರಿಸಿದ್ದರೆ ಇಷ್ಟು ಹೊತ್ತಿಗೆ ಕಾಂತಾರ ಕಲೆಕ್ಷನ್ ಸಾವಿರ ಕೋಟಿ ದಾಟಿರುತ್ತಿತ್ತೇನೋ..



