ಬೇಟೆಗಾರರನ್ನು ಬೇಟೆಯಾಡೋ ರಣಬೇಟೆಗಾರ ಬಂದ.. ಕೆಜಿಎಫ್ ಚಿತ್ರದ ಫೇಮಸ್ ಡೈಲಾಗ್ ಇದು. ಕೆಜಿಎಫ್ ದಾಖಲೆಯನ್ನು ನಮ್ಮ ಕನ್ನಡದ ಚಿತ್ರವೇ ಬ್ರೇಕ್ ಮಾಡುತ್ತಿದೆ. ಪ್ರಶಾಂತ್ ನೀಲ್-ಯಶ್ ಜೋಡಿಯ ಕೆಜಿಎಫ್ ಚಾಪ್ಟರ್ 1 ದಾಖಲೆಯನ್ನು ಹಿಂದಿಯಲ್ಲಿ, ಅದೇ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಕನ್ನಡದಲ್ಲಿ ಅಳಿಸಿ ಹೊಸ ಚರಿತ್ರೆ ಸೃಷ್ಟಿಸುತ್ತಿದೆ. ಕನ್ನಡದ ಸಿನಿಮಾವೊಂದು ಸೃಷ್ಟಿಸಿದ್ದ ದಾಖಲೆಯನ್ನು ಕನ್ನಡ ಸಿನಿಮಾವೇ ಮುರಿಯುತ್ತಿದೆ ಎನ್ನುವುದೇ ಕನ್ನಡಿಗರ ಹೆಮ್ಮೆ.
ಜನರಿಗೆ ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ಆತ್ಮೀಯವಾಗುತ್ತಿರುವ ಕಾಂತಾರದ ಕನಸಿನ ಓಟ ಮುಗಿದಿಲ್ಲ. ಹಿಂದಿಯಲ್ಲಿ ಹೊಸ ಇತಿಹಾಸವನ್ನೇ ಬರೆಯುತ್ತಿದೆ. ಕೇವಲ ಕಂಟೆಂಟ್‍ನಿಂದಲೇ ಗೆದ್ದ ಚಿತ್ರ ಕಾಂತಾರ. ಏಕೆಂದರೆ ರಿಷಬ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡದ ಯಾರೊಬ್ಬರೂ ಹಿಂದಿ ಭಾಷಿಕರಿಗೆ ಪರಿಚಿತರೇ ಅಲ್ಲ. ಆದರೆ ಕಂಟೆಂಟ್ ಇಸ್ ಕಿಂಗ್. ಸಿನಿಮಾ ನೋಡಿದವರೇ ಇನ್ನೊಬ್ಬರನ್ನು ನೋಡುವಂತೆ ಪ್ರೇರೇಪಿಸಿ ಗೆಲ್ಲಿಸಿದ ಕಾಂತಾರ ಹಿಂದಿಯಲ್ಲಿ ಕೆಜಿಎಫ್ ಚಾಪ್ಟರ್ 1 ದಾಖಲೆಯನ್ನು ಹಿಂದೆ ಹಾಕಿದೆ.
3ನೇ ವಾರದ ಹೊತ್ತಿಗೆ ಮೌತ್ ಪಬ್ಲಿಸಿಟಿಯಿಂದಲೇ ದೊಡ್ಡ ಕಲೆಕ್ಷನ್ ಮಾಡುತ್ತಿದೆ. ಆರಂಭದ ದಿನಗಳಲ್ಲಿ 2 ಕೋಟಿ ಆಸುಪಾಸಿನಲ್ಲೇ ಇದ್ದ ಕಾಂತಾರದ ಕಲೆಕ್ಷನ್ ಚೆನ್ನಾಗಿಯೇ ಇತ್ತು. ಒಂದು ಡಬ್ಬಿಂಗ್ ಆದ ಸಿನಿಮಾಗೆ ಅಷ್ಟು ದೊಡ್ಡ ಮಟ್ಟದ ಓಪನಿಂಗ್ ಸಿಗುವುದೇ ವಂಡರ್. ಈಗ 16 ಮತ್ತು 17ನೇ ದಿನದ ಹೊತ್ತಿಗೆ ಕಲೆಕ್ಷನ್ ಡಬಲ್ ಆಗಿದೆ. 2 ವೀಕೆಂಡ್‍ಗಳಲ್ಲಿ 2ರಿಂದ 3 ಕೋಟಿ ಆಸುಪಾಸಿನಲ್ಲಿಯೇ ಇದ್ದ ಕಲೆಕ್ಷನ್ 3ನೇ ವೀಕೆಂಡ್ ಹೊತ್ತಿಗೆ 4 ಕೋಟಿ ದಾಟಿದೆ. ಕಾಂತಾರ ಇದುವರಗೆ ಮಾಡಿರುವ ಕಲೆಕ್ಷನ್ 44 ಕೋಟಿ. ಕೆಜಿಎಫ್ ಚಾಪ್ಟರ್ 1 ಕೂಡಾ 44 ಕೋಟಿ ಕಲೆಕ್ಷನ್ ಮಾಡಿತ್ತು. ಯಶ್-ಪ್ರಶಾಂತ್ ನೀಲ್-ಹೊಂಬಾಳೆ ಜೋಡಿ ಸೃಷ್ಟಿಸಿದ್ದ ದಾಖಲೆಯನ್ನೂ ಈಗ ರಿಷಬ್ ಶೆಟ್ಟಿ-ರಿಷಬ್ ಶೆಟ್ಟಿ-ಹೊಂಬಾಳೆ ಜೋಡಿ ಬ್ರೇಕ್ ಮಾಡಿದೆ.
ಇನ್ನು ಕನ್ನಡದಲ್ಲಿಯೂ ಅಷ್ಟೆ.ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆಯುವ ಹಾದಿಯಲ್ಲಿದೆ. ಕನ್ನಡದಲ್ಲಿ ಕೆಜಿಎಫ್ ಚಾಪ್ಟರ್ 2 ಕರ್ನಾಟಕದಲ್ಲಿ ಮಾಡಿದ್ದ ಕಲೆಕ್ಷನ್ 175 ಕೋಟಿ. ಈ ದಾಖಲೆಯನ್ನು ಈ ವಾರಾಂತ್ಯದ ಒಳಗೆ ಅಳಿಸಿ ಹಾಕುವ ಸಾಧ್ಯತೆಗಳಿವೆ. ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಿದ್ದಕ್ಕಿಂತ ಹೆಚ್ಚು ಜನ ಕಾಂತಾರ ನೋಡಿದ್ದಾರೆ. ವೀಕ್ಷಕರ ಸಂಖ್ಯೆ ಕರ್ನಾಟಕದಲ್ಲಿಯೇ 1 ಕೋಟಿಯನ್ನು ಸಮೀಪಿಸುತ್ತಿದೆ. ಅದು ಚಿತ್ರವೊಂದು ಸೃಷ್ಟಿಸಲಿರುವ ಹೊಸ ದಾಖಲೆ. ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಕರ್ನಾಟಕದಲ್ಲಿಯಂತೂ ಕಾಂತಾರ ಶೀಘ್ರದಲ್ಲೇ ಬ್ರೇಕ್ ಮಾಡಲಿದೆ. ವೇಯ್ಟ್ & ಸೀ.



