ಕಾಂತಾರದ ನಾಗಾಲೋಟ.. ದೈವೀಕ ಯಶಸ್ಸಿನ ಘಂಟಾನಾದ ದೇಶಾದ್ಯಂತ ವಿಶ್ವದಾದ್ಯಂತ ಮೊಳಗುತ್ತಿದೆ. ಕಾಂತಾರ ಈಗ 300 ಕೋಟಿ ಕ್ಲಬ್ ಸೇರಿದೆ. ಡಿವೈನ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರಕ್ಕೆ ಸಿಕ್ಕಿರೋದು ದೈವೀಕ ಯಶಸ್ಸು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶ್ರೀಶ್ರೀಶ್ರೀ ರವಿಶಂಕರ್ ಸೇರಿದಂತೆ ಹಲವು ಧರ್ಮಗುರುಗಳು ಕಾಂತಾರ ನೋಡಿದ್ದಾರೆ. ಇದರ ನಡುವೆಯೇ ಕಾಂತಾರ ಹೊಸ ಹೊಸ ದಾಖಲೆಗಳನ್ನು ಮಡಿಲಿಗೆ ಹಾಕಿಕೊಳ್ಳುತ್ತಿದೆ.
ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಂತಾರವನ್ನು 90 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಸಿನಿಮಾ ನೋಡಿದವರ ಸಂಖ್ಯೆ 1 ಕೋಟಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ. ಇದು ಕನ್ನಡದ ಮಟ್ಟಿಗೆ ಹೊಚ್ಚ ಹೊಸ ದಾಖಲೆ.
ಹಿಂದಿಯಲ್ಲಿ ಡಬ್ಬಿಂಗ್ ಚಿತ್ರವೊಂದು ಈ ರೀತಿ ಗೆಲ್ಲುವುದು ಇತ್ತೀಚೆಗೆ ಹೊಸದೇನೂ ಅಲ್ಲ. ಹಿಂದಿ ಚಿತ್ರಗಳು ಡುಮ್ಕಿ ಹೊಡೆಯುತ್ತಿರುವಾಗ ಡಬ್ಬಿಂಗ್ ಚಿತ್ರಗಳೇ ಮನಸ್ಸು ಗೆಲ್ಲುತ್ತಿವೆ. ಹಿಂದಿಯಲ್ಲಿ 20ನೇ ದಿನಕ್ಕೆ 50 ಕೋಟಿಯ ಬಾರ್ಡರ್ ದಾಟಿರುವ ಕಾಂತಾರ, ಕೆಜಿಎಫ್ ಚಾಪ್ಟರ್ 1 ದಾಖಲೆಯನ್ನು ಹಿಂದಕ್ಕೆ ಹಾಕಿದೆ. ಕನ್ನಡದಿಂದ ಡಬ್ ಆಗಿ ಹಿಂದಿಯಲ್ಲಿ ಬಂದ ಚಿತ್ರಗಳಲ್ಲಿ ಈಗ ಕಾಂತಾರ ನಂ.2. ಮೊದಲ ಸ್ಥಾನ ಕೆಜಿಎಫ್ ಚಾಪ್ಟರ್ 2ನದ್ದು.
ಅದಕ್ಕಿಂತ ಬೆರಗಿನ ಸಂಗತಿಯೆಂದರೆ ಪುಷ್ಪ ಚಿತ್ರದ ದಾಖಲೆಯನ್ನು ಹಿಂದಕ್ಕೆ ಹಾಕುವ ಓಟದಲ್ಲಿರೋದು. ಕಲೆಕ್ಷನ್‍ನಲ್ಲಿ ಕಾಂತಾರ 300 ಕೋಟಿ ಗಡಿಯನ್ನು ದಾಟಿದೆ. ಓಟ ತಗ್ಗಿಲ್ಲ. ಹಿಂದಿಯಲ್ಲಿ ಡಬಲ್ ಬೂಮ್ ವೇಗದಲ್ಲಿ ಹೋಗುತ್ತಿದೆ. ಹೀಗೆಯೇ ಮುಂದುವರಿದರೆ ಕಾಂತಾರ ಕಲೆಕ್ಷನ್ ಒಟ್ಟಾರೆಯಾಗಿ ಪುಷ್ಪ ದಾಖಲೆಯನ್ನು ಹಿಂದಿಕ್ಕುವ ಸಾಧ್ಯತೆಗಳೂ ಇವೆ. ತಗ್ಗದೆಲೆ.. ಎನ್ನುವಂತಿಲ್ಲ.
ಕನ್ನಡದಲ್ಲಿ ಶೋಗಳ ಸಂಖ್ಯೆ ಸ್ವಲ್ಪ ಮಾತ್ರವೇ ಕಡಿಮೆಯಾಗಿದೆ. ಥಿಯೇಟರುಗಳಲ್ಲಿ ಈಗಲೂ ರನ್ನಿಂಗ್ ನಂ.1 ಕಾಂತಾರ. ಕಲೆಕ್ಷನ್ 160 ಕೋಟಿ ದಾಟಿ ಮುನ್ನುಗ್ಗುತ್ತಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಿತ್ರವನ್ನು ನೋಡಿ ಮೆಚ್ಚಿರುವುದು ಇನ್ನಷ್ಟು ಸೆನ್ಸೇಷನ್ ಸೃಷ್ಟಿಸಲಿದೆ.
ತೆಲುಗಿನಲ್ಲಿಯೂ ಕಾಂತಾರದ ಕಲೆಕ್ಷನ್ 50 ಕೋಟಿಯ ಗಡಿ ದಾಟಿದೆ. ತೆಲುಗಿನಲ್ಲಿ ಡಬ್ಬಿಂಗ್ ಆಗಿ ಗೆದ್ದ ಚಿತ್ರಗಳ ಲಿಸ್ಟಿನಲ್ಲಿ ಕಾಂತಾರ ಟಾಪ್‍ನಲ್ಲಿದೆ. ಅಫ್‍ಕೋರ್ಸ್.. ಅಲ್ಲಿಯೂ ನಂ.1 ಸ್ಥಾನದಲ್ಲಿರುವುದು ಕೆಜಿಎಫ್ ಚಾಪ್ಟರ್ 2 ಚಿತ್ರವೇ. ತಮಿಳು ಹಾಗೂ ಮಲಯಾಳಂನಲ್ಲಿ ಬಾಕ್ಸಾಫೀಸ್ ಲೆಕ್ಕ ಮೊದಲಿನಿಂದಲೂ ನಿಗೂಢವೇ. ಅಲ್ಲಿಯದ್ದು ಮಾತ್ರ ಲೆಕ್ಕಕ್ಕೆ ಸಿಗುತ್ತಿಲ್ಲ.



