ಕಾಂತಾರದ ಯಶಸ್ಸು, ಚಿತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯನ್ನು ನೋಡಿ ಥ್ರಿಲ್ಲಾಗಿರುವ ಹೊಂಬಾಳೆ & ರಿಷಬ್ ಶೆಟ್ಟಿ ಟೀಂ ಕಾಂತಾರ 2 ಮಾಡ್ತಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿತ್ತು. ಅದಕ್ಕೆ ತಕ್ಕಂತೆ ರಿಷಬ್ ಶೆಟ್ಟಿ, ಪತ್ನಿ ಹಾಗೂ ಇಡೀ ಕಾಂತಾರ ತಂಡದೊಂದಿಗೆ ಮಂಗಳೂರು, ಉಡುಪಿಯ ವಿವಿಧ ದೇವಸ್ಥಾನ, ದೈವ ಸ್ಥಾನಕ್ಕೆ ಭೇಟಿ ನೀಡುತ್ತಲೇ ಇದ್ದರು.

ಅಷ್ಟೇ ಏಕೆ, ರಾಜಮೌಳಿಯವರ ಬಾಹುಬಲಿ ಮಾದರಿಯಲ್ಲಿ ಕಾಂತಾರದ ಪ್ರೀಕ್ವೆಲ್ ಮತ್ತು ಸೀಕ್ವೆಲ್ ಎರಡನ್ನೂ ಮಿಕ್ಸ್ ಮಾಡಿ ರಿಷಬ್ ಚೆಂದದ ಕಥೆ ಹೆಣೆದಿದ್ದಾರೆ ಎಂಬ ಚೆಂದವಾದ ಕಥೆಯೂ ಹೊರಬಿತ್ತು. ಈ ಎಲ್ಲ ಸುದ್ದಿಗಳಿಗೂ ಕಾಂತಾರ ನಟ, ನಿರ್ದೇಸಕ ರಿಷಬ್ ಶೆಟ್ಟಿ ನೋ ಎಂದಿದ್ದಾರೆ. ಕಾಂತಾರ 2 ಮಾಡುವ ಆಲೋಚನೆ ಸದ್ಯಕ್ಕೆ ಇಲ್ಲ. ಆ ರೀತಿಯ ಯಾವುದೇ ಆಲೋಚನೆ ಇದ್ದರೆ ಖಂಡಿತಾ ನಾನೇ ಅಧಿಕೃತವಾಗಿ ತಿಳಿಸುತ್ತೇನೆ ಎಂದಿದ್ದಾರೆ ರಿಷಬ್ ಶೆಟ್ಟಿ.

ಸದ್ಯಕ್ಕೆ ನಾನು ಮಂಗಳೂರು, ಉಡುಪಿಯಲ್ಲಿದ್ದೇವೆ. ದೈವಗಳ ಹರಕೆ ತೀರಿಸುತ್ತಿದ್ದೇವೆ. ಈ ಯಶಸ್ಸು ಸಿಕ್ಕಿದ್ದು ದೈವಗಳ ಆಶೀರ್ವಾದದಿಂದ. ಹೀಗಾಗಿಯೇ ನಾನು, ನನ್ನ ಪತ್ನಿ, ಕಾಂತಾರ ಚಿತ್ರತಂಡದವರೆಲ್ಲ ದೈವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇವೆ. ಈ ವೇಳೆ ದೈವ ಎದುರು ಬಂದಾಗ ನನ್ನಲ್ಲಿ ಈಗಲೂ ರೋಮಾಂಚನವಾಗುತ್ತೆ. ದೈವ ಕಣ್ಣುಗಳ ಹುಬ್ಬು ಹಾರಿಸಿ ಹೇಗೆ ಎನ್ನುವಂತೆ ನೋಡಿದಾಗ ಅದನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ಇದು ನನ್ನದಲ್ಲ. ನಿನಗೆ ಸಲ್ಲಬೇಕಾದ ಯಶಸ್ಸು ಎಂದು ಪಾದಗಳಿಗೆ ನಮಸ್ಕರಿಸುವುದಷ್ಟೇ ನನ್ನಿಂದಾಗುವ ಕೆಲಸ ಎಂದಿರೋ ರಿಷಬ್ ಶೆಟ್ಟಿ, ಕಾಂತಾರ 2 ಪ್ಲಾನ್‍ನ್ನು ತಳ್ಳಿ ಹಾಕಿದ್ದಾರೆ.



