ಧರ್ಮಸ್ಥಳ ಮಂಜುನಾಥ, ಅಣ್ಣಪ್ಪ ದೈವದ ಅಪ್ಪಣೆ ಪಡೆದೇ ಕಾಂತಾರ ಚಿತ್ರ ಶುರು ಮಾಡಿದೆವು ಎಂದು ಹಲವು ಬಾರಿ ಹೇಳಿಕೊಂಡಿದ್ದರು ರಿಷಬ್ ಶೆಟ್ಟಿ. ದೈವದ ಅಪ್ಪಣೆ ಕೇಳಿದಾಗ ಕೆನ್ನೆಗೆ ಬಣ್ಣ ಹಚ್ಚಿ ಒಪ್ಪಿಗೆ ಕೊಟ್ಟಿತ್ತಂತೆ ಪಂಜುರ್ಲಿ. ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ಪ್ರಸಾದ ಪಡೆದು ಶುರು ಮಾಡಿದ ಕಾಂತಾರದಲ್ಲಿ ದೈವದ ನೀತಿ ನಿಯಮ ಶುದ್ಧಾಚಾರಗಳನ್ನು ಚಾಚೂತಪ್ಪದೆ ಪಾಲಿಸಲಾಗಿತ್ತು. ಕಾಂತಾರ ಚಿತ್ರ ಬಿಡುಗಡೆಯಾದ ಎಲ್ಲೆಡೆ ದಾಖಲೆಗಳ ಮೇಲೆ ದಾಖಲೆ ಬರೆದು ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. 16 ಕೋಟಿ ಬಜೆಟ್ಟಿನ ಸಿನಿಮಾ ಥಿಯೇಟರಿನಲ್ಲಿಯೇ ಗಳಿಸಿದ್ದು 400 ಕೋಟಿಗೂ ಹೆಚ್ಚು. ಚಿತ್ರ ನೋಡಿದವರೆಲ್ಲ ಮೂಕವಿಸ್ಮಿತರಾಗಿ ಬೆರಗಾಗಿದ್ದರು. ರಿಷಬ್ ಅವರಿಗೀಗ ಬಿಡುವೂ ಇಲ್ಲ. ಈ ನಡುವೆಯೇ ವಾಟ್ ನೆಕ್ಸ್ಟ್ ಅನ್ನೋ ಪ್ರಶ್ನೆಯೂ ಎದುರಾಗಿತ್ತು.
ರಿಷಬ್ ಶೆಟ್ಟಿ ಕಾಂತಾರ ನಂತರ ಮುಂದೇನು ಎಂಬ ಪ್ರಶ್ನೆ ಎದ್ದಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಾಂತಾರ ನಂತರ ಮತ್ತೊಮ್ಮೆ ಕಾಂತಾರ-2. ಯೆಸ್, ರಿಷಬ್ ಶೆಟ್ಟಿ ಮತ್ತು ತಂಡ ಕಾಂತಾರ ಚಿತ್ರದ ಸೀಕ್ವೆಲ್ ಮಾಡಲು ನಿರ್ಧರಿಸಿದ್ದು, ವಿಜಯ್ ಕಿರಗಂದೂರು ಅವರೇ ನಿರ್ಮಾಪಕರಾಗಲಿದ್ದಾರೆ. ಕಾಂತಾರ 2 ಸ್ಕ್ರಿಪ್ಟ್ ವರ್ಕ್ ಶುರುವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳೂರಿನ ಹೊರಗೆ ಬಂದಲೆಯಲ್ಲಿ ಕೋಲ ನಡೆಸಿದ್ದು ಕೋಲದಲ್ಲಿ ಕಾಂತಾರ 2 ಮಾಡುವ ಬಗ್ಗೆ ಪಂಜುರ್ಲಿಗೇ ಅನುಮತಿ ಕೇಳಲಾಗಿದೆ. ಮೊದಲ ಭಾಗದಲ್ಲಿ ರಿಷಬ್ ಶೆಟ್ಟಿ & ಟೀಂ ದೈವದ ಕೋಲದ ಸೆಟ್ಟಿನಲ್ಲಿ ಪಾದರಕ್ಷೆ ಧರಿಸದೆ, ಮಾಂಸಾಹಾರವನ್ನೂ ತ್ಯಜಿಸಿ ಭಕ್ತಿ ಭಾವದಿಂದ ಚಿತ್ರೀಕರಿಸಿದ್ದರು. ಸ್ವತಃ ದೈವನರ್ತಕರ ಕುಟುಂಬದವರಾಗಿದ್ದೂ ರಿಷಬ್ ಶೆಟ್ಟಿ ದೈವನರ್ತಕರ ಮಾರ್ಗಸೂಚನೆಗಳನ್ನು ಪಾಲಿಸಿದ್ದರು. ಅನುಸರಿಸಿದ್ದರು. ಆದರೆ ಈಗ ಕಾಂತಾರ 2 ಮಾಡಬೇಕೇ ಬೇಡವೇ ಎಂಬ ಪ್ರಶ್ನೆ ಉದ್ಭವವಾಗಿದ್ದು ಇಡೀ ಚಿತ್ರತಂಡ ವಿಶೇಷ ಕೋಲ ನಡೆಸಿ ಪ್ರಶ್ನೆ ಕೇಳಿದೆ.
ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಸಪ್ತಮಿ ಗೌಡ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲಾದಲ್ಲಿ ಕಾಂತರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು.
ದೈವದ ಜೊತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜೊತೆ ಸಿನಿಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ.
ಮೊದಲು ಯಾವ ರೀತಿ ಎಚ್ಚರಿಕೆ ತೆಗೆದುಕೊಂಡಿದ್ದೀರೋ ಅದರ 10 ಪಟ್ಟು ಶುದ್ಧಾಚಾರದಿಂದ ಮಾಡಿ. ಚಿತ್ರವನ್ನು ಮುಂದುವರೆಸಿ. ನಿಯಮ ಪಾಲನೆ ಬಿಡಬೇಡಿ ಎಂದು ಹೇಳಿದೆಯಂತೆ ಪಂಜುರ್ಲಿ. ಅಲ್ಲಿಗೆ ಕಾಂತಾರ 2 ಬರುವುದು ನಿರೀಕ್ಷಿತ ಎನ್ನಬಹುದು. ಎಲ್ಲವೂ ಪಕ್ಕಾ ಆದರೆ ಜನವರಿ ತಿಂಗಳಲ್ಲಿ ಸಿನಿಮಾ ಸೆಟ್ಟೇರಲೂಬಹುದು.



