ತಮಿಳು ನಟ ಸೂರ್ಯ ಹಾಗೂ ಪುನೀತ್ ರಾಜ್‍ಕುಮಾರ್ ಬಾಲ್ಯದಿಂದಲೂ ಗೆಳೆಯರಂತೆ. ನಾವಿಬ್ಬರೂ ನಮ್ಮ ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಫ್ರೆಂಡ್ಸ್ ಆಗಿದ್ದೆವು ಎಂದು ಮಾತಿಗಾರಂಭಿಸಿದ ಸೂರ್ಯ ನಾವಿಬ್ಬರೂ ಸುಜಾತ ಹೋಟೆಲ್‍ನಲ್ಲಿ ಮೊದಲು ಭೇಟಿಯಾಗಿದ್ದೆವಂತೆ ಎಂದು ತಮ್ಮ ಹಿರಿಯರು ಹೇಳಿದ್ದನ್ನು ನೆನಪಿಸಿಕೊಂಡರು.
ಅಪ್ಪು ಜೊತೆ ನನಗೆ ನೂರಾರು ನೆನಪುಗಳಿವೆ. ಸ್ಟಾರ್ ಆಗಿದ್ದರೂ ಅದರಿಂದ ಹೊರಗಿದ್ದವರು ಅಪ್ಪು. ಸಮಾಧಿಗೆ ಭೇಟಿ ನೀಡಿದ್ದಾಗ ಒಂದು ವಿಷಯ ಅರ್ಥವಾಯಿತು. ಅಲ್ಲಿಗೆ ಪ್ರತಿ ವಾರ 50 ಸಾವಿರ ಮಂದಿ ಭೇಟಿ ನೀಡುತ್ತಾರೆ ಎನ್ನುವುದನ್ನು ಕೇಳಿದಾಗ ಪರಮಾಶ್ಚರ್ಯವಾಯಿತು. ಒಬ್ಬ ವ್ಯಕ್ತಿಯನ್ನು ಜನ ಇಷ್ಟು ಗಾಢವಾಗಿ ಪ್ರೀತಿಸುವುದನ್ನು ಜೀವನದಲ್ಲಿಯೇ ಕಂಡಿಲ್ಲ. ಮತ್ತೆಂದಾದರೂ ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ. ಉದ್ಯಮದಲ್ಲಿಯೂ ಸಹ ಯಾರಾದರೂ ಇಷ್ಟೊಂದು ಪ್ರೀತಿಸಲು ಸಾಧ್ಯವೇ ಎನ್ನುವುದು ನನಗೆ ಅನುಮಾನ. ಆದರೆ ಅಪ್ಪು ಅದೃಷ್ಟವಂತರು.ಕರ್ನಾಟಕ ಅದ್ಭುತ ರಾಜ್ಯ ಎಂದರು ಸೂರ್ಯ.
ಅಪ್ಪು ಅವರನ್ನು ಇಷ್ಟೊಂದು ಪ್ರೀತಿಸುವ ಕನ್ನಡಿಗರು. ಇಂತಹ ಅಭಿಮಾನಿಗಳನ್ನು ಪಡೆದ ಅಪ್ಪು ಅದೃಷ್ಟವಂತ. ಅಪ್ಪು ಅಂತಹವರನ್ನು ಪಡೆದ ನೀವೂ ಅದೃಷ್ಟವಂತರು ಎಂದರು ಸೂರ್ಯ. ನಂಬರ್ ಗೇಮ್ ನೋಡದೆ ಹೃದಯವನ್ನು ಸ್ವಚ್ಛವಾಗಿಟ್ಟುಕೊಂಡಿರುವವರಷ್ಟೇ ಇಂತಹ ಗಂಧದ ಗುಡಿ ತೆಗೆಯಲು ಸಾಧ್ಯ. ಅಶ್ವಿನಿ ಅವರು ಧೈರ್ಯವಾಗಿ ಹೆಜ್ಜೆಯಿಟ್ಟಿದ್ದಾರೆ. ಅಪ್ಪು ಖಂಡಿತಾ ತಮ್ಮ ಕುಟುಂಬದ ಬಗ್ಗೆ ಹೆಮ್ಮೆ ಪಡುತ್ತಾರೆ. ಅವರು ಹೀಗೆಯೇ ಧೈರ್ಯವಾಗಿ ಮುಂದೆ ಸಾಗಬೇಕು ಎಂದರು ಸೂರ್ಯ.



