ಯುವ. ಚಿತ್ರದ ಹೀರೋ ಹೆಸರು ಕಾರ್ತಿಕ್ ಶೆಟ್ಟಿ. ಹೀಗಂದರೆ ಅಚ್ಚರಿಯಾಗ್ತೀರಿ. ಆದರೆ ಇದು ನಿಜ. ಈಗ ಯುವ ಸಂಚಲನ ಸೃಷ್ಟಿ ಮಾಡುತ್ತಿರಬಹುದು, ಆದರೆ ಈ ಟೈಟಲ್ಲಿನ ಸಿನಿಮಾ ಒಂದು 2009ರಲ್ಲೇ ಬಂದಿತ್ತು. ಆ ಚಿತ್ರದ ಹೀರೋ ಕಾರ್ತಿಕ್ ಶೆಟ್ಟಿ. ಮಾರ್ಷಲ್ ಆಟ್ರ್ಸ್, ಮವಾಥಾಯ್ ಕಲೆಗಳನ್ನೆಲ್ಲ ಕಲಿತಿದ್ದ ಕಾರ್ತಿಕ್ ಶೆಟ್ಟಿ, ಸಾಹಸ ದೃಶ್ಯಗಳ ಮೂಲಕವೇ ಗಮನ ಸೆಳೆದಿದ್ದರು. ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದರೂ ಮಂಗಳೂರು ಮೂಲದವರಾಗಿದ್ದ ಕಾರ್ತಿಕ್ ಶೆಟ್ಟಿ, ನಟರೂ ಹೌದು, ನಿರ್ದೇಶಕರೂ ಹೌದು. ಆ ಯುವ ಚಿತ್ರಕ್ಕೆ ಸಂಗೀತ ನೀಡಿದ್ದವರು ಗುರು ಕಿರಣ್. ಆ ಚಿತ್ರ 2009ರಲ್ಲಿಯೇ ರಿಲೀಸ್ ಆಗಿತ್ತು. ಅದಾದ ಮೇಲೆ ಅದೇ ಕಾರ್ತಿಕ್ ಶೆಟ್ಟಿ ಅಗ್ನಿಮುಷ್ಠಿ, ಅಕ್ಷತೆ ಅನ್ನೋ ಚಿತ್ರಗಳಲ್ಲೂ ನಟಿಸಿದ್ದರು. ಹಿಂದಿಯಲ್ಲಿ ರೈನ್ ಬೋ ಕಾಲೊನಿ, ತನ್ ಮನ್ ಗೋಪಾಲ್, ಮರಾಠಿಯಲ್ಲಿ ಭಕ್ತಿ ಹೀಚ್ ಕರಿ ಶಕ್ತಿ.. ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಭಲೇ ಪುಡರ್ ದಿಕಾ ಎ ಪ್ರೀತಿಂಗ್ ಎಂಬ ತುಳು ಚಿತ್ರವನ್ನೂ ಮಾಡಿದ್ದರು. ಅವರ ಮೊದಲ ಕನ್ನಡ ಚಿತ್ರದ ಹೆಸರೇ ಯುವ.
ಅದೇ ಯುವ ಎಂಬ ಹೆಸರು ಇದೀಗ ಗಾಂಧಿನಗರದ ಸೆನ್ಸೇಷನ್ ಆಗಿದೆ. ರಾಜವಂಶದ ಅಭಿಮಾನಿಗಳಿಗೂ ಸೆನ್ಸೇಷನ್. ಇತ್ತೀಚೆಗೆ ಯುವ ಚಿತ್ರದ ಟೈಟಲ್ ಲಾಂಚ್ ಆಗಿ ಟೀಸರ್ ಹೊರಬಂದಿದೆ. ಯುವ ರಾಜ್ ಕುಮಾರ್ ಅಭಿನಯದ, ಸಂತೋಷ್ ಆನಂದರಾಮ್ ನಿರ್ದೇಶನದ ಚಿತ್ರಕ್ಕೆ ಹೊಂಬಾಳೆಯವರು ನಿರ್ಮಾಪಕರು. ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರ ಡಿಸೆಂಬರ್ 22ಕ್ಕೆ ರಿಲೀಸ್ ಆಗಲಿದೆ.


ಯುವ ರಾಜ್ ಕುಮಾರ್ ಅವರನ್ನು ಪುನೀತ್ ರಾಜಕುಮಾರ್ ಅವರ ಉತ್ತರಾಧಿಕಾರಿ ಎಂಬಂತೆ ನೋಡಲಾಗುತ್ತಿದೆ. ನಿರೀಕ್ಷೆಗಳು ಈಗಾಗಲೇ ಗಗನದೆತ್ತರದಲ್ಲಿವೆ. ಪುನೀತ್ ಅವರನ್ನು ಮನೆಯಲ್ಲಿ ಎಲ್ಲರೂ ಕರೆಯುತ್ತಿದ್ದುದೇ ಅಪ್ಪು ಎಂದು. ಹೀಗಾಗಿ ತಮ್ಮನ ಚಿತ್ರಕ್ಕೆ ಅಪ್ಪು ಹೆಸರೇ ಇರಲಿ ಎಂದು ಶಿವಣ್ಣ ಫೈನಲ್ ಮಾಡಿದ್ದರು. ತಮ್ಮ ಹೆಸರಿನ ಚಿತ್ರದ ಮೂಲಕವೇ ಅಪ್ಪು ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿಯಾಗಿದ್ದರು. ಹೀಗಾಗಿ ಯುವ ಕೂಡಾ ತಮ್ಮ ಹೆಸರಿನ ಚಿತ್ರದಿಂದಲೇ ಲಾಂಚ್ ಆಗಲಿ ಎನ್ನುವುದು ಎಲ್ಲರ ನಿರೀಕ್ಷೆಯಾಗಿದ್ದು, ಚಿತ್ರದ ಕಥೆಗೆ ಯುವ ಟೈಟಲ್ ಸೂಕ್ತವಾಗಿದೆ ಎಂಬ ಕಾರಣಕ್ಕೆ ಸಂತೋಷ್ ಆನಂದರಾಮ್ ಅದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.



