ಯುವ ರಾಜ್ ಕುಮಾರ್ ಹೀರೋಯಿನ್ ಯಾರು? ಯುವ ಚಿತ್ರ ಟೈಟಲ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕುತೂಹಲವಿದೆ. ಯುವರಾಜ್ ಕುಮಾರ್ ಸಿನಿಮಾ ಬಹುತೇಕ ಅಪ್ಪು ಹುಟ್ಟುಹಬ್ಬಕ್ಕೆ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ. ಯುವ ಎಂಟ್ರಿಗೆ ಪುನೀತ್ ಉತ್ಸುಕರಾಗಿದ್ದರು. ಸ್ವತಃ ತಮ್ಮದೇ ಬ್ಯಾನರ್`ನಲ್ಲಿ ಎಂಟ್ರಿ ಕೊಡಿಸುವ ಬಗ್ಗೆ ಯೋಚನೆಯಲ್ಲಿದ್ದರು. ಅದಕ್ಕಾಗಿ ಯುವ ರಾಜ್ ಕುಮಾರ್ ಅವರಿಗೆ ತರಬೇತಿಯನ್ನೂ ಕೊಡಿಸಿದ್ದರು. ತಮ್ಮ ನಟ ಸಾರ್ವಭೌಮ ಚಿತ್ರದ ಈವೆಂಟ್`ನಲ್ಲಿ ವೇದಿಕೆ ಹತ್ತಿಸಿದ್ದರು. ಜೊತೆಯಲ್ಲಿ ಹೆಜ್ಜೆ ಹಾಕಿದ್ದರು. ಹೀಗಾಗಿಯೇ.. ಅಪ್ಪು ಹುಟ್ಟುಹಬ್ಬವನ್ನು ಚಿತ್ರದ ಕುರಿತ ಅಧಿಕೃತ ಪ್ರಕಟಣೆಯ ಮುಹೂರ್ತವನ್ನಾಗಿ ಇಟ್ಟುಕೊಳ್ಳಲಾಗಿದೆ.
ಮಾರ್ಚ್ 17ಕ್ಕೆ ಒಂದೆಡೆ ಉಪೇಂದ್ರ-ಸುದೀಪ್ ಅಭಿನಯದ ಕಬ್ಜ ಹಾಗೂ ಗಣೇಶ್ ಅಭಿನಯದ ಬಾನದಾರಿಯಲ್ಲಿ ಚಿತ್ರಗಳು ಬಿಡುಗಡೆಯಾಗಲಿವೆ. ಇವುಗಳ ಜೊತೆಗೆ ಹೊಂಬಾಳೆಯವರು ಹೊಸ ಚಿತ್ರದ ಬಗ್ಗೆ ಬಿಗ್ ಅಪ್‍ಡೇಟ್ ನೀಡಲಿದ್ದಾರೆ.


ಇದರ ಮಧ್ಯೆ ಸಪ್ತಸಾಗರದಾಚೆ ಎಲ್ಲೋ ಹಾಗೂ ಬಾನದಾರಿಯಲ್ಲಿ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಹೀರೋಯಿನ್ ಆಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ರುಕ್ಮಿಣಿ ವಸಂತ್ ಈಗಾಗಲೇ ಹೊಂಬಾಳೆಯವರ ಜೊತೆ ಬಘೀರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಮುರಳಿ ಎದುರು ರುಕ್ಮಿಣಿ ನಾಯಕಿ. ಈ ಸುದ್ದಿಯನ್ನು ಸ್ವತಃ ರುಕ್ಮಿಣಿ ನಿರಾಕರಿಸಿದ್ದಾರೆ. ಇದುವರೆಗೆ ಅಂತಹ ಯಾವುದೇ ಮಾತುಕತೆ ನಡೆದಿಲ್ಲ. ಸದ್ಯಕೆ ಬಾನದಾರಿಯಲ್ಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದೇನೆ. ಬಘೀರ ಚಿತ್ರದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಂಡಿದೆ. ಶ್ರೀಮುರಳಿ ಗುಣಮುಖರಾಗಿ ಬಂದ ನಂತರ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ರುಕ್ಮಿಣಿ ವಸಂತ್.





