ಅಮೇಜಾನ್ ಪ್ರೈಂ, ಹಾಟ್ ಸ್ಟಾರ್, ಝೀ5, ನೆಟ್ ಫ್ಲಿಕ್ಸ್, ಸನ್ ನೆಕ್ಸ್ಟ್, ವೂಟ್, ಸೋನಿ ಎಲ್`ಐವಿ, ಜಿಯೋ ಸಿನಿಮಾಸ್, ಎಂಎಕ್ಸ್ ಪ್ಲೇಯರ್ಸ್, ಬಿಗ್ ಫ್ಲಿಕ್ಸ್, ಅಲ್ಟ್ ಬಾಲಾಜಿ, ಏರ್ ಟೆಲ್ ಎಕ್ಸ್‍ಟ್ರೀಮ್, ಉಲ್ಲೂ, ಕೂಕು, ಮುಭಿ, ಅಡ್ಡಾ ಟೈಮ್ಸ್, ಯುಪ್ಪ್ ಟಿವಿ, ಎರೋಸ್ ನೌ, ಹೊಯ್`ಚಾಯ್, ಶೆಮಾರೂ, ಆಹಾ.. ಒಂದಾ ಎರಡಾ.. ಪ್ರತಿ ಒಟಿಟಿ ಪ್ಲಾಟ್ ಫಾರ್ಮಿನಲ್ಲೂ ದಿನಕ್ಕೆ ಐದೈದು ಸಿನಿಮಾ ರಿಲೀಸ್. ಜನರಿಗೆ ಅಂಗೈಯಲ್ಲೇ ಸಿನಿಮಾಗಳಿವೆ. ಆ ಒಟಿಟಿಗಳೇ ಯಶ್-ನರ್ತನ್ ಜೋಡಿಯ ಚಿತ್ರಕ್ಕೆ ಬ್ರೇಕ್ ಹಾಕಿವೆ ಅನ್ನೋದು ಈಗ ಗೊತ್ತಾಗಿರೋ ಮಾಹಿತಿ.
ಕೆಜಿಎಫ್ ಮುಗಿದ ನಂತರ ಯಶ್ ಅವರು ನರ್ತನ್ ಜೊತೆ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಚಾಲ್ತಿಯಲ್ಲಿತ್ತು. ಕೆಜಿಎಫ್ ಚಿತ್ರದ ಸಕ್ಸಸ್ ಯಶ್ ಅವರ ಗ್ರಾಫ್, ಪ್ಲಾನ್ ಎಲ್ಲವನ್ನೂ ಬದಲಿಸಿತ್ತು. ಅದೇ ಕಾರಣಕ್ಕೆ ಕಿರಾತಕ 2 ಚಿತ್ರವನ್ನೂ ಯಶ್ ಸ್ಟಾಪ್ ಮಾಡಿದ್ದರು. ಆ ಚಿತ್ರಕ್ಕೆ ಒಂದಿಷ್ಟು ಚಿತ್ರೀಕರಣವೂ ಆಗಿತ್ತು. ಆ ನಷ್ಟವನ್ನೆಲ್ಲವನ್ನೂ ಬಡ್ಡಿ ಸಮೇತ ನಿರ್ಮಾಪಕ ಜಯಣ್ಣ ಅವರಿಗೆ ವಾಪಸ್ ಕೊಟ್ಟಿದ್ದರು. ಅದಾದ ಮೇಲೆ ಸ್ನೇಹವನ್ನೂ ಹಾಗೆಯೇ ಉಳಿಸಿಕೊಂಡಿದ್ದರು. ಆ ಜಯಣ್ಣ ಅವರಿಗೆ ಮಫ್ತಿ ಅನ್ನೋ ಚಿತ್ರ ಕೊಟ್ಟಿದ್ದ ನರ್ತನ್ ಅವರಿಗೆ ಸ್ಕ್ರಿಪ್ಟ್ ವರ್ಕ್ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೂಡಾ ಕೊಟ್ಟಿದ್ದರು. ಆದರೆ ಆ ಚಿತ್ರಕ್ಕೆ ಕಾಲ ಕೂಡಿ ಬರಲಿಲ್ಲ.
ಈಗ ಅದೇ ಮಫ್ತಿ ನರ್ತನ್ ಭೈರತಿ ರಣಗಲ್ ಸಿನಿಮಾ ಮಾಡುತ್ತಿದ್ದಾರೆ. ಮಫ್ತಿ ಚಿತ್ರದ ಪ್ರೀಕ್ವೆಲ್ ಅದು.
ಯಶ್ ಅವರ ಮುಂದಿನ ಸಿನಿಮಾ ಯಾವುದು? ನಿರ್ದೇಶಕ ಯಾರು? ಪ್ರೊಡಕ್ಷನ್ ಯಾರು? ಪ್ರೊಡ್ಯೂಸರ್ ಯಾರು? ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ನರ್ತನ್ ಚಿತ್ರವಂತೂ ಸದ್ಯಕ್ಕಿಲ್ಲ. ಹಾಗಾದರೆ ಯಶ್-ನರ್ತನ್ ಚಿತ್ರದ ಕಥೆ ಮುಗಿದಂತೆಯಾ..? ಹಾಗೇನಿಲ್ಲ ಎಂಬ ಉತ್ತರ ಸಿಕ್ಕಿದೆ ನರ್ತನ್ ಅವರ ಕಡೆಯಿಂದ.
ಯಶ್ ಅವರ ಜತೆಗೆ ಸಿನಿಮಾ ಮಾಡಬೇಕು ಅನ್ನೋ ಆಸೆ ನನಗೆ ಮಾತ್ರವಲ್ಲ, ಎಲ್ಲ ನಿರ್ದೇಶಕರಿಗೂ ಇರುತ್ತದೆ. ಅವರಿಗಾಗಿಯೇ ಎಲ್ಲರೂ ಕಾಯುತ್ತಿರುವುದು. ಯಶ್ ಅವರಿಗೆ ನಾವು ದೊಡ್ಡ ಕಥೆಯನ್ನು ಮಾಡಿಕೊಳ್ಳುತ್ತಿದ್ದೆವು. ಕಾರಣಾಂತರಗಳಿಂದ ಮುಂದೆ ಹೋಗಿದೆ. ಇವತ್ತಲ್ಲ, ನಾಳೆ ಅವರೊಂದಿಗೆ ನನ್ನ ಸಿನಿಮಾ ಆಗುತ್ತದೆ ಎಂದಿದ್ದಾರೆ ನರ್ತನ್.
ನರ್ತನ್ ಅವರ ಚಿತ್ರ ವಿಳಂಬವಾಗಿದ್ದಕ್ಕೆ ಕಾರಣ ಒಟಿಟಿಯಂತೆ. ದಿನ ಬೆಳಗಾದರೆ ಒಟಿಟಿಗಳಲ್ಲಿ ಐದೈದು ಸಿನಿಮಾಗಳು ರಿಲೀಸ್ ಆಗುತ್ತಿವೆ. ನಾವು ಅಂದುಕೊಂಡ ಕಂಟೆಂಟ್ ಯಾವ್ ಯಾವುದೋ ಸಿನಿಮಾಗಳಲ್ಲಿ ಬರ್ತಾ ಇದೆ. ಹೀಗೆ ನಮ್ಮ ಕಂಟೆಂಟ್ಗೆ ಬೇರೆ ಬೇರೆ ಸಿನಿಮಾಗಳು ಕನೆಕ್ಷನ್ ಆಗುತ್ತಿರುವುದರಿಂದ, ಬೇರೆಯದೇ ಕಥೆ ಮಾಡೋಣ ಅಂತ ಮುಂದಕ್ಕೆ ಹೋಗುತ್ತಿದ್ದೇವೆ ಅಷ್ಟೇ ಎಂದು ನರ್ತನ್ ಹೇಳಿದ್ದಾರೆ.
ಒಟ್ಟಿನಲ್ಲಿ ಒಟಿಟಿಗಳು ಥಿಯೇಟರುಗಳನ್ನಷ್ಟೇ ಕೊಲ್ಲುತ್ತಿಲ್ಲ. ಹೊಸ ಸಿನಿಮಾಗಳಿಗೆ ಜನ ಟಾಕೀಸುಗಳಿಗೆ ಬರುತ್ತಿಲ್ಲ. ವಿದ್ಯಾರ್ಥಿಗಳು ಅದರಲ್ಲೇ ಮುಳುಗಿಬಿಟ್ಟಿದ್ದಾರೆ. ಇದರ ನಡುವೆ ಸ್ಟಾರ್ ಹೀರೋ ಯಶ್ ಅವರ ಕನಸಿನ ಚಿತ್ರಕ್ಕೂ ಇದೇ ಒಟಿಟಿ ಬ್ರೇಕ್ ಹಾಕಿದೆ.



