ಶಿವಣ್ಣ ಮತ್ತು ಉಪೇಂದ್ರ ಮತ್ತೆ ಜೋಡಿಯಾಗಿರುವ ಸಿನಿಮಾ ರೋಸಿ 45. ಅರ್ಜುನ್ ಜನ್ಯ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದರೆ, ನಿರ್ಮಾಪಕರಾಗಿರುವುದು ರಮೇಶ್ ರೆಡ್ಡಿ. ರಮೇಶ್ ರೆಡ್ಡಿ ಈಗಾಗಲೇ ಕನ್ನಡಿಗರಿಗೆ ಪರಿಚಿತರಾಗಿರುವ ನಿರ್ಮಾಪಕ. ಪಡ್ಡೆಹುಲಿ, 100, ನಾತಿಚರಾಮಿ, ಗಾಳಿಪಟ 2 ಚಿತ್ರಗಳನ್ನು ನಿರ್ಮಾಣ ಮಾಡಿದವರು. ಈಗ ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುತ್ತಿರೋ ರೋಸಿ-45 ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಇದು ಹಳೆಯ ಸುದ್ದಿ.
ಇತ್ತೀಚೆಗೆ ಹೆಡ್ ಬುಷ್ ಖ್ಯಾತಿಯ ಶೂನ್ಯ ನಿರ್ದೇಶನದಲ್ಲಿ ಯೋಗಿಯ ಚಿತ್ರ ಸೆಟ್ಟೇರಿತ್ತು. ಅದು ಯೋಗಿಯ 50ನೇ ಸಿನಿಮಾ ಎಂಬ ಕಾರಣಕ್ಕೆ ಭರ್ಜರಿ ಸದ್ದನ್ನೂ ಮಾಡಿತ್ತು. ಆದರೆ ಇದೀಗ ಆ ಟೈಟಲ್ ವಿವಾದಕ್ಕೆ ಸಿಲುಕಿದೆ ಇದೀಗ ‘ಲೂಸ್ ಮಾದ’ ಯೋಗಿ ಟೀಮ್ ಕೂಡ ಅದೇ ಶೀರ್ಷಿಕೆ ಇಟ್ಟಿರುವುದಕ್ಕೆ ಸೂರಜ್ ಪ್ರೊಡಕ್ಷನ್ಸ್ನ ರಮೇಶ್ ರೆಡ್ಡಿ ಮತ್ತು ನಿರ್ದೇಶಕ ಅರ್ಜುನ್ ಜನ್ಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ ಶೀರ್ಷಿಕೆಯನ್ನು ನೊಂದಾಯಿಸಲಾಗಿತ್ತು. ಈಗ ಡಿ ವೈ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೊದಲು ಶೀರ್ಷಿಕೆ ನೊಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ಹೇಳಿದೆ. ಹಾಗಾಗಿ, ಸೂರಜ್ ಪ್ರೊಡಕ್ಷನ್ಸ್ಗೆ ‘ರೋಸಿ 45’ ಶೀರ್ಷಿಕೆ ಸೇರಿದೆ. ಇನ್ನು ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ‘ರೋಸಿ 45’ ಸಿನಿಮಾದ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.
ಈಗ ರೋಸಿ ಟೈಟಲ್`ನ್ನೇ ಬಳಸಿಕೊಳ್ಳೋಕೆ ಯೋಗಿ, ಶೂನ್ಯ ಹಠ ಹಿಡೀತಾರಾ ಅಥವಾ ಶಿವಣ್ಣ ಮತ್ತು ಉಪೇಂದ್ರ ಒಟ್ಟಿಗೇ ನಟಿಸುತ್ತಿರುವ ಚಿತ್ರದ ಟೈಟಲ್ ಬಿಟ್ಟು ಹೊಸ ಟೈಟಲ್ ಇಟ್ಟುಕೊಳ್ತಾರಾ ಎನ್ನುವುದೇ ಕುತೂಹಲ.



