ಜಯರಾಮ್ ಕಾರ್ತಿಕ್. ಹೆಚ್ಚು ನಟಿಸಿದ್ದು ಸುದೀಪ್ ಚಿತ್ರಗಳಲ್ಲಿಯೇ. ಕೆಂಪೇಗೌಡ, ಜೆಕೆ ಅಭಿನಯದ ಮೊದಲ ಸಿನಿಮಾ. ಅದಾದ ಮೇಲೆ ವಿಷ್ಣುವರ್ಧನ, ಈಗ, ವರದನಾಯಕ ಚಿತ್ರಗಳಲ್ಲಿ ನಟಿಸಿದ್ದ ಜೆಕೆ, ಹಿಂದಿಯಲ್ಲೂ ಕೆಲವು ಚಿತ್ರಗಳಲ್ಲಿ ನಟಿಸಿದ್ದವರು. ಹೀಗಿದ್ದರೂ ಜಯರಾಂ ಕಾರ್ತಿಕ್ ಎಂದರೆ ಯಾರು ಎನ್ನುವವರೇ ಹೆಚ್ಚು. ಏಕೆಂದರೆ ಈ ಕಲಾವಿದ ಕನ್ನಡಿಗರಿಗೆ ಜೆಕೆ ಎಂದೇ ಪರಿಚಿತ. ಈ ನಟ ಈಗ ಕನ್ನಡ ಚಿತ್ರರಂಗವನ್ನೇ ತೊರೆಯುತ್ತಿದ್ದಾರಂತೆ. ಜೆಕೆ ಹಾಗೆ ಕನ್ನಡ ಚಿತ್ರರಂಗವನ್ನು ತೊರೆಯುತ್ತಿರುವುದಕ್ಕೆ ಕಾರಣ ಕನ್ನಡದ ಇನ್ನೊಬ್ಬ ವ್ಯಕ್ತಿ. ಚಿತ್ರರಂಗದವನೇ. ಆತ ಕಲಾವಿದನೋ, ನಿರ್ದೇಶಕನೋ, ನಿರ್ಮಾಪಕನೋ.. ಜೆಕೆ ಹೇಳುವುದಿಲ್ಲ. ಜೆಕೆಗೆ ಕಾಟ ಕೊಡುತ್ತಿರುವ ಆ ವ್ಯಕ್ತಿ, ತನ್ನೆಲ್ಲ ಶಕ್ತಿ, ಸಾಮಥ್ರ್ಯ, ಪ್ರಭಾವ ಬಳಸಿ, ಜೆಕೆಗಿರುವ ಆಫರ್`ಗಳನ್ನು ತಪ್ಪಿಸುತ್ತಿದ್ದಾನಂತೆ.
ಹಿಂದಿ ಧಾರಾವಾಹಿ ಮಾಡುತ್ತಿದ್ದೆ ಒಳ್ಳೆಯ ಹೆಸರು ಗಳಿಸಿದ್ದೆ. ಹಿಂದಿ ಸಿನಿಮಾ ಒಂದರ ಅವಕಾಶ ಸಹ ನನಗೆ ದೊರಕಿತ್ತು ಇನ್ನೇನು ಚಿತ್ರೀಕರಣ ಪ್ರಾರಂಭವಾಗಬೇಕು ಎಂಬ ಸಮಯದಲ್ಲಿ ಅಲ್ಲಿಗೆ ಕರೆ ಮಾಡಿ ನನಗೆ ಸಿಕ್ಕ ಅವಕಾಶವನ್ನು ತಪ್ಪಿಸಲಾಯ್ತು. ಇಲ್ಲಿಯೂ ಸಹ ನನಗೆ ಬರಬೇಕಿದ್ದ ಅವಕಾಶವನ್ನು ತಪ್ಪಿಸಿದರು. ನನಗೇ ನೇರವಾಗಿ ಸವಾಲು ಹಾಕಿ 2022 ರ ವೇಳೆಗೆ ಇಂಡಸ್ಟ್ರಿ ಬಿಡುಸುತ್ತೇವೆ ಎಂದರು ಎನ್ನುವ ಜೆಕೆ, ಆತ ಯಾರು ಎನ್ನುವುದನ್ನು ಮಾತ್ರ ಹೇಳೋದಿಲ್ಲ. ಯಾರಿಗೆ ಎಂದು ಹೇಳಿದರೆ ವಿವಾದವಾಗುತ್ತದೆ, ಅದಕ್ಕೆ ಪೂರಕವಾದ ವಿಡಿಯೋ ಸಾಕ್ಷಿಗಳನ್ನೆಲ್ಲ ಒದಗಿಸಬೇಕಾಗುತ್ತದೆ ಅವೆಲ್ಲವೂ ನನ್ನ ಬಳಿ ಇಲ್ಲ. ಆದರೆ ನೇರವಾಗಿ ಹೇಳಿದ ವಿಚಾರಗಳಿಗೆ ನಾನು ಮಾತ್ರವೇ ಸಾಕ್ಷಿ. ಆ ವಿಷಯಗಳನ್ನೆಲ್ಲ ಹೇಳಲು ನಾನು ಬಯಸುವುದಿಲ್ಲ. ಆದರೆ ಚಿತ್ರರಂಗದಿಂದ ದೂರ ಹೋಗುವ ವಿಚಾರವನ್ನಂತೂ ಮಾಡಿದ್ದೇನೆ” ಎಂದಿದ್ದಾರೆ.
ಬೇರೆ ಉದ್ಯೋಗದಲ್ಲಿದ್ದೆ. ನಡುನಡುವೆ ನಟಿಸುತ್ತಿದ್ದೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ನಂತರ ಎರಡು ಕಡೆ ಪಯಣ ಒಳ್ಳೆಯದಲ್ಲ ಎನ್ನಿಸಿತು. ಹೀಗಾಗಿ ನಟನೆಯನ್ನೇ ಪೂರ್ಣ ಉದ್ಯೋಗ ಮಾಡಿಕೊಂಡೆ ಎನ್ನುವ ಜೆಕೆ, ಅಶ್ವಿನಿ ನಕ್ಷತ್ರ ಧಾರಾವಾಹಿಯ ಹೆಂಡ್ತಿ ಡೈಲಾಗ್ ಮೂಲಕ ಫೇಮಸ್ ಆದವರು. ಸೀಯಾರಾಮ್ ಧಾರಾವಾಹಿಯ ರಾವಣನ ಪಾತ್ರ, ಜೆಕೆಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸುದೀಪ್ ಅವರ ಆಪ್ತಬಳಗದಲ್ಲಿದ್ದ ಜೆಕೆ, ಸುದೀಪ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದವರು.
ಅಶ್ವಿನಿ ನಕ್ಷತ್ರ, ಅಗ್ನಿಸಾಕ್ಷಿ, ನಾಗಿಣಿ 2 ಸೀರಿಯಲ್`ಗಳಲ್ಲಿಯೂ ನಟಿಸಿದ್ದ ಜೆಕೆ, ಈಗ ಯಾರೋ ಒಬ್ಬನಿಗಾಗಿ ಹೆದರಿ ಚಿತ್ರರಂಗ ತೊರೆಯುವಂತಾಗಿದೆ. ಇಷ್ಟಕ್ಕೂ ಯಾರವನು? ಜೆಕೆ ಹೇಳೋದಿಲ್ಲ.
ಅಫ್`ಕೋರ್ಸ್ ಜೆಕೆ ಆತಂಕಕ್ಕೂ ಕಾರಣ ಇದೆ. ಅವರ ಹೇಳೋ ಪ್ರಕಾರ ಜೆಕೆ ಬಳಿ ಸಾಕ್ಷಿಗಳಿಲ್ಲ. ವಿಶೇಷವಾಗಿ ವಿಡಿಯೋ ಸಾಕ್ಷ್ಯಗಳಿಲ್ಲ. ಸಾಕ್ಷಿಗಳಿಲ್ಲದೇ ಹೋದಾಗ ಆತನ ಹೆಸರು ಹೇಳಿಬಿಟ್ಟರೆ ಆಗುವ ಅನಾಹುತದ ಅರಿವು ಜೆಕೆಗೆ ಇದೆ. ಕನ್ನಡದಲ್ಲಷ್ಟೇ ಅಲ್ಲ, ಹಿಂದಿಯಲ್ಲೂ ಅವಕಾಶ ತಪ್ಪಿಸುವಷ್ಟು ಪ್ರಭಾವ ಹೊಂದಿರುವ ಆ ವ್ಯಕ್ತಿ, ಸಾಕ್ಷಿಗಳಿಲ್ಲದೇ ಇರುವಾಗ ಆರೋಪ ಮಾಡಿದರೆ ಸುಮ್ಮನೆ ಬಿಡುತ್ತಾನೆಯೇ.. ಜೆಕೆ ಆತಂಕಕ್ಕೆ ಅರ್ಥವಿದೆ.



