ಉರಿಗೌಡ ನಂಗೇಗೌಡ ಅನ್ನೋ ಹೆಸರಿನ ಸಿನಿಮಾ ಮಾಡುತ್ತೇನೆ ಎಂದು ಸಚಿವ, ಚಿತ್ರ ನಿರ್ಮಾಪಕರೂ ಆಗಿರೋ ಘೋಷಿಸಿದಾಗಲೇ ಇದೊಂದು ಪ್ರಚಾರದ ಗಿಮಿಕ್ ಅನ್ನೋದು ಎಲ್ಲರಿಗೂ ಅರ್ಥವಾಗಿತ್ತು. ಏಕೆಂದರೆ ಮುನಿರತ್ನ ಸಿನಿಮಾ ಮಾಡಿರಬಹುದು, ಚಿತ್ರರಂಗದಲ್ಲಿ ಇದ್ದವರೂ ಆಗಿರಬಹುದು, ಆದರೆ ಒಂದು ಸಿನಿಮಾ ನಿರ್ಮಾಣಕ್ಕೆ ಬೇಕಾದ ಸಿದ್ಧತೆಯೇ ಅವರಲ್ಲಿ ಇರಲಿಲ್ಲ.ಇತಿಹಾಸದ ಪ್ರಕಾರ ಅದು ನಿಜವೋ ಸುಳ್ಳೋ ಎನ್ನುವ ವಿಷಯವನ್ನು ಪಕ್ಕಕ್ಕಿಟ್ಟು ನೋಡಿದವರಿಗೂ ಅದು ಗಿಮಿಕ್ ಎಂದು ಅರ್ಥವಾಗುವಂತಿತ್ತು.


ಆರ್.ಅಶೋಕ್ ಮತ್ತು ಸಿಟಿ ರವಿ ಅರ್ಪಿಸಲಿರುವ ಉರಿಗೌಡ ನಂಗೇಗೌಡ ಸಿನಿಮಾ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಎಂಬ ಜಾಹೀರಾತು ಕೂಡಾ ಬಂತು. ಸೋಮವಾರ ಬೆಳಗ್ಗೆ 10 ಗಂಟೆಗೆ ಮುಹೂರ್ತ ಎಂದಿತ್ತಾದರೂ, ಸ್ಟುಡಿಯೋ ಆವರಣದಲ್ಲಿ ಯಾವ ಸಿದ್ಧತೆಯೂ ಇರಲಿಲ್ಲ. ಆಗಲೇ ಈ ಸಿನಿಮಾ ಮಾಡುವ ಉದ್ದೇಶವೇ ಮುನಿರತ್ನ ಅವರಿಗೆ ಇರಲಿಲ್ಲ ಎಂಬ ಅನುಮಾನದ ಸೆಳೆಯೊಂದು ಸುಳಿದು ಹೋಗಿತ್ತು. ಆ ವೇಳೆಗೆ ಸರಿಯಾಗಿ ಎಂಟ್ರಿ ಕೊಟ್ಟವರೇ ಆದಿಚುಂಚನಗಿರಿ ಪೀಠದ ನಿರ್ಮಲಾನಂದ ಸ್ವಾಮಿಗಳು. ಅದಕ್ಕೆ ತಕ್ಕಂತೆ ಅಶ್ವತ್ಥ್ ನಾರಾಯಣ್ ಚಿತ್ರಕಥೆಗೂ ನನಗೂ ಸಂಬಂಧ ಇಲ್ಲ ಎಂದು ಒಂದು ದಿನ ಮೊದಲೇ ಹೇಳಿಕೆ ಕೊಟ್ಟುಬಿಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಉರಿಗೌಡ- ನಂಜೇಗೌಡ ವಿಚಾರಕ್ಕೆ ಸ್ವತಃ ನಿರ್ಮಲಾನಂದನಾಥ ಸ್ವಾಮೀಜಿಗಳೇ ಮಧ್ಯಸ್ಥಿಕೆವಹಿಸಿ ಎಲ್ಲದಕ್ಕೂ ಬ್ರೇಕ್ ಹಾಕಿಬಿಟ್ಟರು. ಸಚಿವ ಮುನಿರತ್ನ ಅವರನ್ನು ಕರೆಸಿಕೊಂಡು ಸಿನಿಮಾ ನಿರ್ಮಾಣ ಕೈಬಿಡುವಂತೆ ಸ್ವಾಮೀಜಿ ಸೂಚನೆ ನೀಡಿದರು. ಇದರ ಬೆನ್ನಲ್ಲೇ ಸಿನಿಮಾ ನಿರ್ಮಾಣ ಕೈಬಿಟ್ಟಿರುವುದಾಗಿ ಮುನಿರತ್ನ ಹೇಳಿದರು. ಇದರ ನಂತರ, ರಾಜ್ಯ ಒಕ್ಕಲಿಗ ಬಿಜೆಪಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕೆ. ಗೋಪಾಲಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಈ ವಿಚಾರ ಚರ್ಚೆ ಮಾಡದಂತೆ ಖಡಕ್ ಎಚ್ಚರಿಕೆ ರವಾನಿಸಿದರು.


ಇದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ ಎಂಬ ಸಂದೇಶ ರವಾನಿಸಿದರು.
ಅದಾದ ನಂತರ ಬಿಜೆಪಿ ನಾಯಕರು ಉರಿಗೌಡ ನಂಜೇಗೌಡ ವಿಚಾರದಲ್ಲಿ ಅಂತರ ಕಾಯ್ದುಕೊಂಡರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮುನಿರತ್ನ ಮೇಲೆ ಮುರಕೊಂಡು ಬಿದ್ದರು. ಆದರೆ ಒಂದಿಡೀ ವಾರ ಮುನಿರತ್ನ ಸುದ್ದಿಯಲ್ಲಿದ್ದರು. ಉರಿಗೌಡ ನಂಜೇಗೌಡ ಸಿನಿಮಾ ಸಾಧಿಸಿದ್ದು ಇಷ್ಟೆ.



