ಸದಾಶಿವನಗರ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು. ಇಲ್ಲಿರೋದು ಹೆಚ್ಚಿನದಾಗಿ ಕೋಟ್ಯಧಿಪತಿಗಳು. ರಾಜಕಾರಣಿಗಳು. ಸಿನಿಮಾದವರು. ಉದ್ಯಮಿಗಳು. ಸೆಲಬ್ರಿಟಿಗಳು.. ಇತ್ಯಾದಿ ಇತ್ಯಾದಿ.. ಒಂದೊಂದು ಮನೆಯ ಬೆಲೆಯೂ ಎರಡಂಕಿಯ ಕೋಟಿಗಳಲ್ಲಿ ಬಾಳುತ್ತದೆ. ಅಲ್ಲಿಗೀಗ ಉಪೇಂದ್ರ ಹೊಸ ಮನೆ ಮಾಡಿಕೊಂಡು ಬಂದಿದ್ದಾರೆ.
ಉಪೇಂದ್ರ ಮನೆ ಎಲ್ಲಿ ಎನ್ನುವುದು ಅಭಿಮಾನಿಗಳಿಗೆ ಗೊತ್ತಿಲ್ಲದ ವಿಷಯವೇನಲ್ಲ. ಕತ್ರಿಗುಪ್ಪೆಯ ಸುಮ್ಮನೆ ಉಪ್ಪಿ ಕನಸಿನ ಮನೆ. ಆ ಮನೆಯಲ್ಲಿಯೇ ಹಲವು ವರ್ಷಗಳಿಂದ ವಾಸವಿದ್ದ ಉಪೇಂದ್ರ, ಈಗ ಸದಾಶಿವನಗದಲ್ಲಿ ಮನೆ ಮಾಡಿದ್ದಾರೆ. ಹೊಸ ಮನೆ. ಗೃಹಪ್ರವೇಶವೂ ನಡೆದಿದೆ.
ಏಪ್ರಿಲ್ 15 ರಂದು ಉಪೇಂದ್ರ ಹಾಗೂ ಪ್ರಿಯಾಂಕಾ ದಂಪತಿ ಹೊಸ ಮನೆಯ ಗೃಹಪ್ರವೇಶ ಪೂಜೆ ನೆರವೇರಿಸಿದ್ದಾರೆ. ಉಪೇಂದ್ರ – ಪ್ರಿಯಾಂಕಾ ದಂಪತಿಯ ಹೊಸ ಮನೆಯ ಗೃಹಪ್ರವೇಶ ಸಮಾರಂಭ ಸದಾಶಿವನಗರದ ಖ್ಯಾತಿಗೆ ಹೋಲಿಸಿದರೆ ಸರಳವಾಗಿ ನೆರವೇರಿದೆ.
ಅಂದಹಾಗೆ ಈ ಮನೆಯನ್ನ ಫೈನಲ್ ಮಾಡಿದ್ದು ಪ್ರಿಯಾಂಕಾ ಉಪೇಂದ್ರ. ಈ ಮನೆ ನನಗೆ ಇಷ್ಟವಾಯಿತು. ವಾಸ್ತು ಪ್ರಕಾರ ಎಲ್ಲವೂ ಸರಿ ಇದೆ. ಕಾರ್ನರ್ ಸೈಟ್‍ನಲ್ಲಿರೋ ಮನೆ. ಸ್ಯಾಂಕಿ ಟ್ಯಾಂಕ್ ಹತ್ತಿರ ಇದೆ. ಸುತ್ತಮುತ್ತ ಗಿಡಮರ. ಬೆಳಗ್ಗೆ ಎದ್ದರೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತೆ. ಮಕ್ಕಳ ಕಾಲೇಜಿಗೂ ಹತ್ತಿರ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ. ಗೃಹ ಪ್ರವೇಶ ನೆರವೇರಿದ್ದು, ಶೀಘ್ರದಲ್ಲೇ ಇಡೀ ಕುಟುಂಬ ಸದಾಶಿವನಗರಕ್ಕೆ ಶಿಫ್ಟ್ ಆಗಲಿದೆ.
ಅಂದಹಾಗೆ ವಾಸ್ತು ಪ್ರಕಾರ ನೋಡಿಯೇ ಫೈನಲ್ ಮಾಡಿದ್ರಂತೆ ಪ್ರಿಯಾಂಕಾ ಉಪೇಂದ್ರ. ಈ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ವಾಸ್ತು, ಜ್ಯೋತಿಷ್ಯಗಳನ್ನು ನಂಬಬೇಡಿ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ತಮ್ಮ ಮನೆಯಲ್ಲೇ ವಾಸ್ತುಪ್ರಕಾರ ಮನೆ ನೋಡುವವ ಪದ್ಧತಿಯನ್ನು ಬಿಡಿಸೋಕೆ ಉಪೇಂದ್ರ ಅವರಿಗೆ ಆಗಿಲ್ಲ. ಬಿಡಿ, ಅದು ಅವರವರ ಇಷ್ಟ. ಶಾಸ್ತ್ರ ಹೇಳೋದೇ ಬೇರೆ.. ಪಾಲನೆ ಮಾಡೋದೇ ಬೇರೆ..



