ಭಕ್ತ ಕನಕದಾಸ ಚಿತ್ರವನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ. ಅದೊಂದು ಕ್ಲಾಸ್ ಸಿನಿಮಾ. ಅಣ್ಣಾವ್ರ ಭಕ್ತಿ ಭಾವಕ್ಕೆ ಇವತ್ತಿಗೂ ಕನ್ನಡಿಗರು ಕೈಮುಗಿಯುತ್ತಾರೆ. ನೆನಪಿರಲಿ, ಈ ಸಿನಿಮಾ ಬಂದಿದ್ದು 1960ರಲ್ಲಿ. ಆಗ ವೈ.ಆರ್.ಸ್ವಾಮಿ ನಿರ್ದೇಶನ ಮಾಡಿದ್ದರೆ, ಹುಣಸೂರು ಕೃಷ್ಣಮೂರ್ತಿ ಕಥೆ ಚಿತ್ರಕಥೆ ಬರೆದಿದ್ದರು. ಎಂ.ವೆಂಕಟರಾಜು ಎಂಬುವವರು ಸಂಗೀತ ನೀಡಿದ್ದರು. ಕನಕದಾಸರ ಕೀರ್ತನೆಗಳನ್ನೇ ಚಿತ್ರದಲ್ಲಿ ಹಾಡುಗಳಾಗಿ ಬಳಸಿಕೊಳ್ಳಲಾಗಿತ್ತು. ಉಡುಪಿಯಲ್ಲಿ ಶ್ರೀಕೃಷ್ಣ ಕನಕದಾಸರ ಭಕ್ತಿಗೆ ಮೆಚ್ಚಿ, ಹಿಂಬಾಗಿಲಲ್ಲಿ ದರ್ಶನ ಕೊಟ್ಟ ಕಥೆಯನ್ನು, ಇತಿಹಾಸವೇನೋ ಎಂದು ಜನ ಇವತ್ತಿಗೂ ನಂಬತ್ತಿದ್ದಾರೆ. ಅಷ್ಟರಮಟ್ಟಿಗೆ ಪ್ರಭಾವ ಬೀರಿದ್ದ ಚಿತ್ರವದು. ಈಗ ಆ ಕನಕದಾಸರ ಕಥೆಯೇ ಮತ್ತೊಮ್ಮೆ ಸಿನಿಮಾ ಆಗುತ್ತಿದೆ.
ಈ ಹೊಸ ಕನಕದಾಸರ ಕಥೆ ಹೇಳುವ ಮೊದಲು ಇನ್ನೊಂದು ಜೋಡಿಯ ಕಥೆಯನ್ನು ಹೇಳಬೇಕು..
ಎ ಚಿತ್ರವನ್ನು ಕನ್ನಡ ಚಿತ್ರರಂಗ ಮರೆಯುವಂತೆಯೇ ಇಲ್ಲ. ಅದು ರಿಯಲ್ ಸ್ಟಾರ್ ಹುಟ್ಟಿದ ಸಿನಿಮಾ. ಕನ್ನಡ ಚಿತ್ರರಂಗದ ದಿಕ್ಕು ದೆಸೆಯನ್ನೇ ಬದಲಿಸಿದ ಸಿನಿಮಾ. ಸಿನಿಮಾವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಸಿನಿಮಾ. ಆ ಚಿತ್ರಕ್ಕೆ ಹೀರೋ ಕಂ ಡೈರೆಕ್ಟರ್ ಉಪೇಂದ್ರ. ನಿರ್ಮಾಪಕರು ಬಿ.ಜಿ.ಮಂಜುನಾಥ್. ರಾಜು ಜಗನ್ನಾಥ್ ಮತ್ತು ಅಜಯ್. ಈ ಮೂವರೂ ಈಗ ಮತ್ತೊಮ್ಮೆ ಒಂದಾಗುತ್ತಿದ್ದು, ಆ ಚಿತ್ರಕ್ಕೆ ಹೀರೋ ಆಗಿರುವುದು ಉಪೇಂದ್ರ. ಎ ಜೋಡಿಯ ಪುನರ್ಮಿಲನದ ಚಿತ್ರವಿದು.
25 ವರ್ಷಗಳ ನಂತರ ಎ ಜೋಡಿ ಒಂದಾಗುತ್ತಿದೆ. ವಿಶೇಷವೆಂದರೆ ಇದು ಭಕ್ತಿಪ್ರಧಾನ ಸಿನಿಮಾ. ಕಥೆ ಬರೆಯುತ್ತಿರುವುದು ಜೆಕೆ ಭಾರವಿ. ಅನ್ನಮಯ್ಯ, ಶ್ರೀರಾಮದಾಸು ಹಾಗೂ ಕನ್ನಡದಲ್ಲಿ ಹಬ್ಬ, ಶ್ರೀಮಂಜುನಾಥ, ಮುನಿರತ್ನ ಕುರುಕ್ಷೇತ್ರ ಚಿತ್ರಗಳಿಗೆ ಕಥೆ ಬರೆದಿದ್ದ ಭಾರವಿ, ಈ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರಂತೆ. ಭಕ್ತ ಕನಕದಾಸರ ಜೀವನ ಚರಿತ್ರೆಯನ್ನು ಆಧರಿಸಿದ ಕಥೆಯಂತೆ. ನೇರವಾಗಿ ಕನಕದಾಸರ ಕಥೆಯೇ.. ಈ ಚಿತ್ರಕ್ಕೆ ನಾಗಣ್ಣ ನಿರ್ದೇಶಕರಾಗಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಭಕ್ತ ಕನಕದಾಸ ಚಿತ್ರ ಐತಿಹಾಸಿಕ ಕ್ಲಾಸಿಕ್ ಎಂದೇ ಕರೆಸಿಕೊಂಡಿದೆ. ಡಾ.ರಾಜ್ ಕುಮಾರ್ ಅವರನ್ನು ಭಕ್ತರು ಕನಕದಾಸರೆಂದೇ ಭಾವಿಸುವಷ್ಟರಮಟ್ಟಿಗೆ ಆ ಚಿತ್ರ ಯಶಸ್ಸು ಕಂಡಿತ್ತು. ಈಗ ಆ ಕಥೆಯಲ್ಲಿ ಉಪೇಂದ್ರ ನಟಿಸಲಿದ್ದಾರೆ. ಹಂಸಲೇಖ ಸಾಹಿತ್ಯ-ಸಂಗೀತ ಇರಲಿದೆ.
1960ರ ಕಾಲದ ಚಿತ್ರವಾದರೂ, ಇವತ್ತಿಗೂ ಕನ್ನಡಿಗರು ಭಕ್ತಿಯಿಂದ ನೆನಪಿಸಿಕೊಳ್ಳುವ ಸಿನಿಮಾ ಭಕ್ತ ಕನಕದಾಸ. ಡಾ.ರಾಜ್ ಅಭಿನಯದ ಲೆವೆಲ್ಲಿಗೆ ಉಪೇಂದ್ರ, ಆ ಪಾತ್ರವನ್ನು ನಿಭಾಯಿಸುತ್ತಾರಾ.. ಅದೇ ಕುತೂಹಲ.



