ಹೊಯ್ಲಳ. ಡಾಲಿ ಧನಂಜಯ ಅಭಿನಯದ ಸಿನಿಮಾದ ಟೈಟಲ್ ಇದೀಗ ಬದಲಾಗಿದೆ. ಚಿತ್ರ ಶುರುವಾದಾಗಿನಿಂದ ತೀರಾ ಇತ್ತೀಚೆಗೆ ಹಾಡುಗಳ ರಿಲೀಸ್ ವರೆಗೆ ಇದ್ದ ಟೈಟಲ್ ಹೊಯ್ಸಳ. ಇದೀಗ ಸೆನ್ಸಾರ್ ಆಗಿ ರಿಲೀಸ್ ಮಾಡುವ ಸಮಯಕ್ಕೆ ಟೈಲಟ್ ಬದಲಾಗಿದೆ. ಗುರುದೇವ್ ಹೊಯ್ಸಳ ಆಗಿದೆ. ಏಕೆ..?
ಕನ್ನಡ ಚಿತ್ರರಂಗದಲ್ಲಿ ಟೈಟಲ್ ಸಮಸ್ಯೆ ಹೊಸದಲ್ಲ. ಯಾರೋ ಟೈಟಲ್ ಇಟ್ಟುಕೊಂಡು ಪ್ರಚಾರ ಮಾಡಿ ಸಿನಿಮಾ ಮಾಡಿ ಮುಗಿಸಿಯೂ ಬಿಡ್ತಾರೆ. ಆದರೆ ಇನ್ನೇನು ಸಿನಿಮಾ ರಿಲೀಸ್ ಆಗಬೇಕು.. ಆ ಹೊತ್ತಿಗೆ ಅದೇ ಟೈಟಲ್ಲಿನಲ್ಲಿ ಇನ್ಯಾರೋ ಸಿನಿಮಾ ರೆಡಿ ಮಾಡಿ ಸೆನ್ಸಾರ್ ಕೂಡಾ ಮಾಡಿಸಿಬಿಡ್ತಾರೆ. ಆಗ ರಿಲೀಸ್ ಆಗುವುದಕ್ಕೆ ರೆಡಿಯಾಗಿರುವ ಸ್ಟಾರ್ ಚಿತ್ರಗಳಿಗೆ ಪ್ರಾಬ್ಲಂ. ಇದೀಗ ಆ ಪ್ರಾಬ್ಲಂ ಹೊಯ್ಸಳ ಚಿತ್ರಕ್ಕೂ ಕಾಡಿ ಈಗ ಚಿತ್ರದ ಟೈಟಲ್ ಗುರುದೇವ್ ಹೊಯ್ಸಳ ಆಗಿ ಚೇಂಜ್ ಆಗಿದೆ.
ಇಷ್ಟಕ್ಕೂ ಆಗಿದ್ದಿಷ್ಟೇ, ಸಿನಿಮಾ ರೆಡಿ ಮಾಡಿ ಸೆನ್ಸಾರ್‍ಗೆ ಹೋದಾಗ ಈಗಾಗಲೇ ಇನ್ನೊಂದು ಸಿನಿಮಾ ಹೊಯ್ಸಳ ಹೆಸರಲ್ಲಿ ಸೆನ್ಸಾರ್ ಆಗಿದೆ ಅನ್ನೋದು ಗೊತ್ತಾಗಿದೆ. ಫಿಲಂ ಚೇಂಬರಿನಲ್ಲಿ ರಿಜಿಸ್ಟರ್ ಮಾಡಿಸುವುದೇ ಬೇರೆ. ಸೆನ್ಸಾರ್ ಬೋರ್ಡಿನಲ್ಲಿ ಮಾಡಿಸುವುದೇ ಬೇರೆ. ಯಾವ ಸಿನಿಮಾ ಮೊದಲು ಸೆನ್ಸಾರ್ ಆಗಿರುತ್ತದೆಯೋ.. ಅವರಿಗೆ ಆ ಟೈಟಲ್ ಫೈನಲ್ ಆಗುತ್ತದೆ. ಇದು ರೂಲ್ಸ್ ವಿಚಾರ. ಹೊಯ್ಸಳ ಅನ್ನೋ ಟೈಟಲ್ ರಾಮು ಅವರ ಬಳಿ ಇತ್ತು. ನಂತರ ನಾವು ಮಾಲಾಶ್ರೀ ಮೇಡಂ ಜೊತೆ ಮಾತನಾಡಿ ಟೈಟಲ್ ತೆಗೆದುಕೊಂಡೆವು. ಶೂಟಿಂಗ್ ಆಗಿ ಸೆನ್ಸಾರ್`ಗೆ ಹೋಗುವ ವೇಳೆಗೆ ಹೊಯ್ಸಳ ಅನ್ನೋ ಹೆಸರಿನಲ್ಲಿ ಇನ್ನೊಂದು ಚಿತ್ರ ಸಿದ್ಧವಾಗಿ ಸೆನ್ಸಾರ್ ಕೂಡಾ ಆಗಿರುವುದು ಗೊತ್ತಾಯ್ತು. ಅವರು ಬಿಸಿನೆಸ್ ಮಾತನಾಡೋಣ ಎಂಬಂತೆ ಮಾತನಾಡಿದಾಗ ದುಡ್ಡು ಕೊಟ್ಟು ಬಗೆಹರಿಸಿ ಕೊಳ್ಳುವುದಕ್ಕೆ ಇಷ್ಟವಾಗಲಿಲ್ಲ. ಹೀಗಾಗಿ ಚಿತ್ರದ ಹೀರೋ ಹೆಸರು ಗುರುದೇವ್. ಅದನ್ನೇ ಚಿತ್ರದ ಟೈಟಲ್ಲಿಗೆ ಸೇರಿಸಿ ಸಿನಿಮಾ ಸೆನ್ಸಾರ್ ಮಾಡಿಸಿದ್ದೇವೆ ಎನ್ನುತ್ತದೆ ಚಿತ್ರತಂಡ.


ಇಷ್ಟಕ್ಕೂ ಹೀಗೆ ಮಾಡುವವರು ಆ ಸಿನಿಮಾ ರಿಲೀಸ್ ಮಾಡ್ತಾರಾ? ನೋ ಚಾನ್ಸ್. ಈಗಾಗಲೇ ಸೆನ್ಸಾರ್ ಆಗಿದೆ ಎನ್ನುತ್ತಿರುವ ಆ ಹೊಯ್ಸಳ ಚಿತ್ರದ ಕಥೆ, ನಿರ್ದೇಶನ, ಹೀರೋ, ಕಲಾವಿದರ ವಿವರ ಎಲ್ಲಿಯೂ ಗೊತ್ತಿಲ್ಲ. ಆದರೆ ದಾಖಲೆಗಳಲ್ಲಿ ಇರುತ್ತೆ. ಸಿನಿಮಾ ಸೆನ್ಸಾರ್ ಆಗಿರುತ್ತೆ. ಚಿತ್ರದ ಕ್ವಾಲಿಟಿ ಚೆನ್ನಾಗಿಲ್ಲದಿದ್ದರೆ ಸೆನ್ಸಾರ್ ಮಾಡಲ್ಲ ಎನ್ನುವ ಅಧಿಕಾರ ಸೆನ್ಸಾರ್ ಮಂಡಳಿಗೂ ಇಲ್ಲ. ಸೆನ್ಸಾರ್ ಆಗಿ ಇಷ್ಟೇ ದಿನಕ್ಕೆ ರಿಲೀಸ್ ಮಾಡಬೇಕು ಎನ್ನುವಂತೆಯೂ ಇಲ್ಲ. ಸೆನ್ಸಾರ್ ಮಾಡಿಸುವುದಕ್ಕೆ ಕೊಡುವ ಶುಲ್ಕ ಸಾವಿರಗಳಲ್ಲಿರುತ್ತೆ. ಆದರೆ ಅದೇ ಟೈಟಲ್ಲಿನ ಸ್ಟಾರ್ ಸಿನಿಮಾ ರಿಲೀಸ್ ಆಗುವ ಸಮಯಕ್ಕೆ ಸರಿಯಾಗಿ, ಅದೇ ಟೈಟಲ್ಲಿನಲ್ಲಿ ಸೆನ್ಸಾರ್ ಮಾಡಿಸಿದ್ದವರಿಗೆ ಏನಾಗುತ್ತೆ..? ಕೆಲವರು ಅನಿವಾರ್ಯವಾಗಿ ದುಡ್ಡು ಕೊಟ್ಟು ಅವರಿಂದ ಎನ್‍ಒಸಿ ತೆಗೆದುಕೊಂಡೋ.. ಅವರಿಂದಲೇ ಅದೇ ಚಿತ್ರದ ಟೈಟಲ್ ಬದಲಿಸಿಯೋ.. ಏನೋ ಒಂದು ಮಾಡುತ್ತಾರೆ. ಆಗ ಆ ಕಿರಿಕ್ ನಿರ್ಮಾಪಕನಿಗೆ ಏನೂ ಮಾಡದೆಯೇ ಲಕ್ಷ ಲಕ್ಷ ಲಾಭ ಸಿಗುತ್ತೆ. ಬಿಸಿನೆಸ್ ನಡೆಯುವುದರ ಮರ್ಮ ಇದು.
ಅಂದಹಾಗೆ ಇದು ಡಾಲಿ ಧನಂಜಯ್ ಅವರ 25ನೇ ಸಿನಿಮಾ. ಡಾಲಿ ಮತ್ತು ಅಮೃತಾ ಅಯ್ಯಂಗಾರ್ ಬಡವ ರಾಸ್ಕಲ್ ನಂತರ ಮತ್ತೊಮ್ಮೆ ಒಟ್ಟಾಗಿ ನಟಿಸುತ್ತಿರುವ ಸಿನಿಮಾ. ಡಾಲಿ ಅಮೃತಾ ಜೋಡಿಯ 3ನೇ ಸಿನಿಮಾ. ಹೀಗಾಗಿ ಅದೃಷ್ಟ ಪರೀಕ್ಷೆಯೂ ಇದೆ. ನಿರ್ದೇಶಕ ವಿಜಯ್ ಎನ್ ಅವರಿಗೆ ಇದು ಅಗ್ನಿಪರೀಕ್ಷೆ. ಅವರು ಗೆಲುವಿಗಾಗಿ ಕಾಯುತ್ತಿದ್ದಾರೆ.
ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ನಿರ್ಮಿಸಿರುವ ಹೊಯ್ಸಳ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 30ರಂದು ಬಿಡುಗಡೆಯಾಗಲಿದೆ.
ಸ್ಟಾರ್ ನಟರನ್ನೂ ಬಿಟ್ಟಿಲ್ಲ ಟೈಟಲ್ ಪ್ರಾಬ್ಲಂ
ಪುನೀತ್ ರಾಜಕುಮಾರ್ ಅವರ ಬಸವ ಚಿತ್ರ ನಮ್ಮ ಬಸವ ಆಗಿದ್ದು, ಸುದೀಪ್ ಅವರ ಮದಕರಿ ಸಿನಿಮಾ ವೀರ ಮದಕರಿ ಆಗಿದ್ದು, ಮಾಲಾಶ್ರೀ ಅವರ ಕಿರಣ್ ಬೇಡಿ ಸಿನಿಮಾ ಟೈಟಲ್ ಚೇಂಜ್ ಅಗಿದ್ದು, ಶಿವಣ್ಣ, ಜಗ್ಗೇಶ್, ರವಿಚಂದ್ರನ್.. ಹೀಗೆ ಹಲವರು ಈ ಸಮಸ್ಯೆ ಎದುರಿಸಿದ್ದಾರೆ. ಕೆಲವರು ಹಣ ಕೊಟ್ಟು ಪ್ರಾಬ್ಲಂ ಬಗೆಹರಿಸಿಕೊಂಡೂ ಇದ್ದಾರೆ. ಸುದ್ದಿ ಕೂಡಾ ಆಗದಂತೆ ನೋಡಿಕೊಂಡಿದ್ದಾರೆ. ಕೆಲವರು ಟೈಟಲ್ ಬದಲಿಸಿ ಸಿನಿಮಾ ರಿಲೀಸ್ ಮಾಡಿ ಗೆದ್ದೂ ಇದ್ದಾರೆ.



