ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಸಿಗುವುದು ಕಲಾವಿದರಿಗೇ ಆದರೂ, ಅದು ಸ್ಟಾರ್ ಕಲಾವಿದರಿಗೆ ಮಾತ್ರ. ಇವತ್ತಿಗೂ ಎಷ್ಟೋ ಜನ ಕೇವಲ ಅವಕಾಶಕ್ಕಾಗಿ ಸ್ವಂತ ಕಾಸು ಖರ್ಚು ಮಾಡಿಕೊಂಡು ನಟಿಸುವವರೂ ಇದ್ಧಾರೆ. ಅದು ರಿಯಾಲಿಟಿ. ಚಾನ್ಸ್ ಕೊಟ್ಟಿದ್ದೇ ಹೆಚ್ಚು ಎನ್ನುವ ಧೋರಣೆಯವರೇ ಇಂಡಸ್ಟ್ರಿಯಲ್ಲಿ ತುಂಬಿದ್ದಾರೆ. ಕನಿಷ್ಠ ಊಟ, ಓಡಾಟದ ಖರ್ಚು ಕೂಡಾ ಕೊಡದವರಿಗೂ ಕೊರತೆಯಿಲ್ಲ. ಇಂತಹವರ ನಡುವೆ ಒಂದು ನಾಯಿ ದುಬಾರಿ ಸಂಭಾವನೆ ಪಡೆಯುತ್ತಿದೆ. ಅದೂ ಕಡಿಮೆಯಲ್ಲ, ದಿನಕ್ಕೆ 10 ಲಕ್ಷ ರೂ. ಸಂಭಾವನೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ವಿಶ್ವದ ಅತಿ ದುಬಾರಿ ನಾಯಿ ಎಂದೊಂದು ಸುದ್ದಿಯಾಗಿತ್ತು, ನೆನಪಿದೆ ತಾನೇ.. ಆ ನಾಯಿ ಈಗ ರವಿಚಂದ್ರನ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದೆ.
ಬೆಂಗಳೂರಿನ ಸತೀಶ್ ಎಂಬುವವರಿಗೆ ಸೇರಿದ್ದ ನಾಯಿಯ ಮೌಲ್ಯ 20 ಕೋಟಿಯಂತೆ. ಕಕೇಶಿಯಸ್ ಶೆಫರ್ಡ್ ಜಾತಿಗೆ ಸೇರಿದ ನಾಯಿಯದು. ಆ ನಾಯಿ ಈಗ ಗೌರಿಶಂಕರ ಚಿತ್ರದಲ್ಲಿ ನಟಿಸುತ್ತಿದೆ. ಆ ನಾಯಿ ಅದೆಷ್ಟು ದುಬಾರಿಯೆಂದರೆ ಆ ನಾಯಿಗೆ ನಿರ್ಮಾಪಕರು ಪ್ರತಿ ದಿನ 10 ಲಕ್ಷ ರೂ. ಸಂಭಾವನೆ ನೀಡುತ್ತಿದ್ದಾರೆ.


ತಮಿಳಿನ ಅನೀಸ್ ನಿರ್ದೇಶಿಸುತ್ತಿರುವ ಚಿತ್ರವಿದು. ಈ ಚಿತ್ರದಲ್ಲಿ ರವಿಚಂದ್ರನ್, ಈ ಹಿಂದೆ ಎಲ್ಲಿಯೂ ಕಾಣಿಸದಂತ ವಿಶೇಷ ಲುಕ್`ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಪೂರ್ವ, ರವಿಚಂದ್ರನ್ ಅವರಿಗೆ ಪತ್ನಿಯಾಗಿ ನಟಿಸುತ್ತಿದ್ದು, ರವಿಚಂದ್ರನ್, ಪತ್ನಿ ಅಪೂರ್ವ, ಅವರ ಮಗು ಹಾಗೂ ನಾಯಿಯೇ ಚಿತ್ರದ ಪ್ರಧಾನ ಪಾತ್ರಗಳು.


ರವಿಚಂದ್ರನ್ ನಟಿಸಿರುವ ಚಿತ್ರಗಳ ಸಂಖ್ಯೆಯೂ ನೂರರ ಆಸುಪಾಸಿನಲ್ಲಿದೆ. ಕುಂಚ ಹಿಡಿಯುವ ಕಲಾವಿದನ ಪಾತ್ರವನ್ನು ಕಲಾವಿದ ಚಿತ್ರದಲ್ಲಷ್ಟೇ ಅಲ್ಲ, ತಮ್ಮ ನಿರ್ದೇಶನದ ಪ್ರತಿ ಚಿತ್ರದಲ್ಲೂ ಕುಂಚ ಹಿಡಿಯುತ್ತಾರೆ ರವಿಚಂದ್ರನ್. ಅಭಿಮಾನಿಗಳ ಪ್ರಕಾರ ಕಲಾವಿದನ ಪಾತ್ರವನ್ನು ರವಿಚಂದ್ರನ್ ನಟಿಸುವುದಿಲ್ಲ, ರವಿಚಂದ್ರನ್ ಎಂದರೇನೇ ಕಲಾವಿದ. ಅಂದಹಾಗೆ ಅಪೂರ್ವ, ರವಿಚಂದ್ರನ್ ಅವರೇ ಚಿತ್ರರಂಗಕ್ಕೆ ಪರಿಚಯಿಸಿದ ಪ್ರತಿಭೆ. ಈಗ ಮತ್ತೊಮ್ಮೆ.. ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ಅಪೂರ್ವ, ರವಿಚಂದ್ರನ್ ಅವರಿಗೆ ಪತ್ನಿಯಾಗಿ ಹಾಗೂ ಒಂದು ಮಗುವಿನ ತಾಯಿಯಾಗಿ ನಟಿಸುತ್ತಿದ್ದಾರೆ ಎನ್ನುವುದೇ ವಿಶೇಷ.



