ನಿಮ್ ಲವ್ ಸ್ಟೋರಿ ಹೇಳ್ರೀ.. ಅಂತಾ ಕೇಳಿದ್ರೆ ಲವ್ ಮಾಡಿದವರ ಹೇಳೋ ಕಥೆಗಳೆಲ್ಲ ಸಖತ್ ರೊಮ್ಯಾಂಟಿಕ್ ಆಗಿರ್ತವೆ. ಮೊದಲ ಬಾರಿಗೆ ನೋಡಿದಾಗಿನಿಂದ ಹಿಡಿದು ತಾಳಿ ಕಟ್ಟುವವರೆಗೆ ಲವ್ ಸ್ಟೋರಿ ಸಾಗುತ್ತೆ. ತಾಳಿ ಕಟ್ಟಿದ್ಮೇಲೆ ಇನ್ನೇನಿದೆ.. ಆಯ್ತಲ್ಲ ಎಂದು ಕೆಲವರು ಅದಕ್ಕೆ ಎಂಡ್ ಕೂಡಾ ಇಡ್ತಾರೆ.. ಪ್ರೀತಿ ಎಲ್ಲೆಲ್ಲೋ ಹುಟ್ಟುತ್ತೆ. ಕಣ್ಣಿನಲ್ಲಿ.. ಮಾತಿನಲ್ಲಿ.. ನೋಟದಲ್ಲಿ.. ಸಹಾಯ ನೀಡುವಾಗ.. ಸಹಾಯ ಕೇಳುವಾಗ.. ಆದರೆ ಮಂಡ್ಯ ರಮೇಶ್ ಅವರ ಲವ್ ಸ್ಟೋರಿ ಶುರುವಾಗಿದ್ದು ಆಕ್ಸಿಡೆಂಟಿನಲ್ಲಿ. ಮಂಡ್ಯ ರಮೇಶ್ ಮದುವೆಯಾಗಿರುವುದು ಸರೋಜ ಅವರನ್ನು. ಮುದ್ದಾದ ಮಗಳು ದಿಶಾ ರಮೇಶ್-ಸರೋಜಾ ಪ್ರೀತಿಯ ಸಾಕ್ಷಿಯಾಗಿದ್ದಾರೆ. ಸರೋಜಾ ಕೂಡಾ ರಂಗಭೂಮಿಯವರೇ. ಆದರೆ ಇವರ ಲವ್ ಸ್ಟೋರಿಯೇ ವಿಚಿತ್ರ..
ರಮೇಶ್ ಅವರು ನೀನಾಸಂನಲ್ಲಿದ್ದಾಗಲೇ ಸರೋಜಾ ಕೂಡಾ ಇದ್ದರು. ನೀನಾಸಂನಲ್ಲಿ ಶಿಸ್ತಿಗೆ ತುಂಬಾ ಮಹತ್ವ ಕೊಡುತ್ತಾರೆ. ಹಾಗಿದ್ಧಾಗ ನೀನಾಸಂನ ಶಿಸ್ತು ಸಮಿತಿಯ ಲೀಡರ್ ಆಗಿದ್ದ ಮಂಡ್ಯ ರಮೇಶ್, ಸರೋಜಾ ಅವರಿಗೆ ಶಿಸ್ತಿನ ಪಾಠ ಮಾಡಿದ್ದರು. ರಂಗಭೂಮಿಯಲ್ಲಿ ಇವತ್ತಿಗೂ ಆ ಶಿಸ್ತು ಇದೆ. ಅದಾದ ಮೇಲೆ ರಮೇಶ್ ಅವರಿಗೆ ಆಕ್ಸಿಡೆಂಟ್ ಆಯ್ತಂತೆ. ಮಂಡ್ಯ ರಮೇಶ್ ಅವರು ಇದ್ದಕ್ಕಿದ್ದಂತೆ ಎದ್ದೇಳುವುದು.. ಎಚ್ಚರ ತಪ್ಪುವುದು ಮಾಡ್ತಾ ಇದ್ರಂತೆ. ಆಗ ಆಸ್ಪತ್ರೆಯಲ್ಲಿ ರಮೇಶ್ ಅವರನ್ನು ನೋಡಿಕೊಂಡವರು ಸರೋಜಾ.
ವಿಚಿತ್ರ ಏಕೆಂದರೆ ಆಗ ಕೂಡಾ ತಾನು ಸರೋಜಾ ಅವರನ್ನು ಲವ್ ಮಾಡುತ್ತಿದ್ದೇನೆ ಅನ್ನೋದು ಸ್ವತಃ ರಮೇಶ್ ಅವರಿಗೂ ಗೊತ್ತಿರಲಿಲ್ಲವಂತೆ. ಆಗ ಆಸ್ಪತ್ರೆಯಲ್ಲೇ ಇದ್ದ ರಮೇಶ್ ಅವರ ಅಕ್ಕ ನಾವೆಲ್ಲ ಇರೋವಾಗ ಇವಳ್ಯಾಕೆ ನಿನ್ನ ಟ್ರೀಟ್‍ಮೆಂಟ್ ಮಾಡ್ತಿದ್ದಾಳೆ ಅನ್ನೋ ಪ್ರಶ್ನೆ ಕೇಳದ್ರಂತೆ. ಇನ್ನೂ ವಿಚಿತ್ರ ಅಂದ್ರೆ ಆಗ ಸರೋಜಾ ಅವರಿಗೂ ತಾನು ರಮೇಶ್ ಅವರನ್ನ ಲವ್ ಮಾಡ್ತಿದ್ದೇನೆ ಅನ್ನೋದು ಗೊತ್ತಿರಲಿಲ್ಲ. ಇಷ್ಟೆಲ್ಲ ಆದ ಮೇಲೆ ಹಳೆಯದನ್ನೆಲ್ಲ ನೆನಪಿಸಿಕೊಂಡು.. ನಡೆದ ಘಟನೆಗಳಿಗೆಲ್ಲ ಪ್ರೇಮ ಪ್ರಸಂಗದ ಲಿಂಕ್ ಆಗಿ.. ನಂತರ ಮದುವೆಯೂ ಆಗಿ ದಿಶಾ ಹುಟ್ಟಿದಳು ಎನ್ನುವಾಗ.. ರಮೇಶ್ ಮತ್ತು ಸರೋಜಾ ಅವರ ಮುಖದಲ್ಲಿ ನಗುವಿತ್ತು.
ಇದೆಲ್ಲವನ್ನೂ ರಮೇಶ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.



