ಒಲವೆ ಜೀವನ ಸಾಕ್ಷಾತ್ಕಾರ..
ಒಲವೇ ಮರೆಯದ ಮಮಕಾರ..
ಒಲವೇ… ಮರೆಯದ ಮಮಕಾರ..
ಈ ಹಾಡಿನೊಂದಿಗೇ ಕನ್ನಡ ಚಿತ್ರ ರಸಿಕರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದ ನಟಿ ಜಮುನಾ ಇನ್ನಿಲ್ಲ. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 86 ವರ್ಷ ವಯಸ್ಸಿನ ಜಮುನಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೈದರಾಬಾದ್ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಮುನಾ ಅವರ ಹುಟ್ಟೂರು ಹಂಪಿ. 1936 ಆಗಸ್ಟ್ 30 ರಂದು ಜನಿಸಿದ್ದ ಜಮುನಾ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು, ತಮಿಳಿನಲ್ಲಿಯೇ ಖ್ಯಾತಿ ಗಳಿಸಿದ್ದರು. ಹಿಂದಿಯಲ್ಲೂ ನಟಿಸಿದ್ದ ಜಮುನಾ ಕಾಂಗ್ರೆಸ್ ಪಕ್ಷದಿಂದ ಸಂಸದೆಯೂ ಆಗಿದ್ದವರು. ವಾಜಪೇಯಿ ಅವಧಿಯಲ್ಲಿ ಬಿಜೆಪಿ ಸೇರಿದ್ದರು.


ಜನ್ಮ ಜನ್ಮದ ಅನುಬಂಧ..ಹೃದಯ ಹೃದಯಗಳ ಪ್ರೇಮಾನುಬಂಧ
ಫಲಿಸಿತು ಒಲವಿನ ಪೂಜಾಫಲ.. ನನಗಿಂದು ಕೂಡಿ ಬಂತು ಕಂಕಣ ಬಲ
ಕಾದಿರುವಳೋ ಶಬರಿ..ರಾಧೆ.. ಬೃಂದಾವನದ ಅಂಗಳದಲ್ಲಿ..
ಹಾಡುಗಳು ಇವತ್ತಿಗೂ ಅಭಿಮಾನಿಗಳ ಹೃದಯದಲ್ಲಿವೆ. ಪೃಥ್ವಿರಾಜ್ ಕಪೂರ್ ಅಭಿನಯಿಸಿದ್ದ ಏಕೈಕ ಕನ್ನಡ ಚಿತ್ರ ಸಾಕ್ಷಾತ್ಕಾರ. ಜಾತಕದ ಬಗ್ಗೆ ಇರುವ ಮೂಢನಂಬಿಕೆಗಳನ್ನು ಜನ ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದ ಸಿನಿಮಾ ಸಾಕ್ಷಾತ್ಕಾರ.


1952ರಲ್ಲಿ ತೆಲುಗಿನ ಪುಟ್ಟಿಲು ಸಿನಿಮಾ ಅವರ ಮೊದಲ ಸಿನಿಮಾ. 1954ರಲ್ಲಿ ತೆರೆ ಕಂಡ ಆದರ್ಶ ಸತಿ ಕನ್ಡನದಲ್ಲಿ ಮೊದಲ ಸಿನಿಮಾ. ಜಮುನಾ ಅವರು 1965ರಲ್ಲಿ ಪ್ರೊಫೆಸರ್ ಜುಲುರಿ ರಮಣ ರಾವ್ ಅವರನ್ನು ಮದುವೆ ಆಗಿದ್ದರು. 2014ರಲ್ಲಿ ಪತಿ ಮೃತಪಟ್ಟ ನಂತರ ಮಕ್ಕಳ ಜೊತೆ ನೆಲೆಸಿದ್ದರು.



