ಹೆಸರು ರಮೇಶ್ ಕಿಟ್ಟಿ. 2004ರಲ್ಲಿ ಸ್ಟಾರ್ ನಟನೊಬ್ಬನ ಚಿತ್ರಕ್ಕೆ ನಿರ್ದೇಶಕನಾಗಿದ್ದ. ಅದಾದ ಮೇಲೆ ಆ ಸ್ಟಾರ್ ನಟನ ಜೊತೆ ಸಂಬಂಧ ಹಳಸಿತ್ತು ಎಂಬ ಮಾತಿದೆ. ಏಕೆಂದರೆ ಆ ಚಿತ್ರ ಅಟ್ಟರ್ ಫ್ಲಾಪ್ ಆಗಿತ್ತು. ಅದಾದ ಮೇಲೆ ಈ ರಮೇಶ್ ಕಿಟ್ಟಿ ಸುದೀಪ್ ಸಂಪರ್ಕಕ್ಕೆ ಬಂದಿದ್ದ. ಈಗ ಅರೆಸ್ಟ್ ಆಗಿರುವುದು ಈತನೇ. ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯೂ ಆಗಿದ್ದಾನೆ. ಈತ ಯಾರು ಎಂದು ಗೊತ್ತಾದ ನಂತರ ಪೊಲೀಸರೂ ಅಚ್ಚರಿಗೊಂಡಿದ್ದಾರೆ.
ಸಿಸಿಬಿ ಪೊಲೀಸರಿಂದ ಡೈರೆಕ್ಟರ್ ರಮೇಶ್ ಕಿಟ್ಟಿ ಎಂಬಾತನ ಬಂಧನವಾಗಿದ್ದು, ಈತ ಸುದೀಪ್ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿದ್ದ. ಸುದೀಪ್ ಅವರ ಆಪ್ತನಾಗಿದ್ದ. ಈ ಹಿಂದೆ ಹಲವು ಸಿನಿಮಾಗಳನ್ನ ಡೈರೆಕ್ಟ್ ಮಾಡಿದ್ದನಂತೆ. ಸುದೀಪ್ ಮತ್ತು ರಮೇಶ್ ನಡುವೆ ಚಾರಿಟಿ ಹಣದ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು.
ಚಾರಿಟಿಯಲ್ಲಿ ಸುದೀಪ್ ಮೇಲೆ ನಂಬಿಕೆ ಇಟ್ಟು ಎರಡು ಕೋಟಿ ಹಣ ಇನ್ವೆಸ್ಟ್ ಮಾಡಿದ್ದೆ. ಆದ್ರೆ ಸುದೀಪ್ ಹಣ ಕೊಡದೆ ಮೋಸ ಮಾಡಿದ್ರು. ಈ ಕೋಪಕ್ಕೆ ಈ ರೀತಿಯ ಬೆದರಿಕೆ ಪತ್ರ ಬರೆದಿದ್ದೆ ಎಂದು ಸಿಸಿಬಿ ವಿಚಾರಣೆಯಲ್ಲಿ ರಮೇಶ್ ಬಾಯ್ಬಿಟ್ಟಿದ್ದಾನಂತೆ.
ಆದರೆ ಚಾರಿಟಬಲ್ ಟ್ರಸ್ಟ್ನಲ್ಲಿ ಹೂಡಿಕೆ ಹೇಗೆ ಅನ್ನೋದೆ ಅರ್ಥವಾಗಿಲ್ಲ. ಏಕೆಂದರೆ ಸಾಮಾಜಿಕ ಸೇವೆ ಮೊದಲಾದವುಗಳಲ್ಲಿ ನಡೆಯವುದು ಬಿಸಿನೆಸ್ ಅಲ್ಲ. ಸೇವೆ ಮಾತ್ರ. ಅಂಥಾದ್ದರಲ್ಲಿ ಚಾರಿಟಬಲ್ ಟ್ರಸ್ಟ್ನಲ್ಲಿ ಇನ್ವೆಸ್ಟ್ಮೆಂಟ್ ಹೇಗೆ..? ಈ ಪ್ರಕರಣ ಇಷ್ಟಕ್ಕೇ ಮುಗಿದಿಲ್ಲ. ಈತನ ಹಿಂದೆ ಇನ್ನೂ ಕೆಲವರಿದ್ದಾರೆ ಎಂಬ ಶಂಕೆ ಪೊಲೀಸರಿಗೆ ಇದೆ. ಹೀಗಾಗಿ ಕಾನೂನು ಪ್ರಕಾರ ಸ್ಟೇಷನ್ ಬೇಲ್ ನೀಡಿದ್ದರೂ ವಿಚಾರಣೆ ನಿಂತಿಲ್ಲ.
ಜೆ.ಪಿ.ನಗರದಲ್ಲಿ ಸುದೀಪ್ ಅವರ ಮನೆಗೆ ಕಳೆದ ಮಾ.29 ರಂದು ಅನಾಮಧೇಯ ವ್ಯಕ್ತಿಯಿಂದ ಅಂಚೆ ಮೂಲಕ ಈ ಬೆದರಿಕೆ ಪತ್ರಗಳು ಬಂದಿದ್ದು, ಸುದೀಪ್ ಅವರ ಮ್ಯಾನೇಜರ್ ಹಾಗೂ ನಿರ್ಮಾಪಕ ಮಂಜುನಾಥ್ ಅಲಿಯಾಸ್ ಜಾಕ್ ಮಂಜು ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿತ್ತು. ಜೆ.ಪಿ.ನಗರದ 6ನೇ ಹಂತದ ಕೆ.ಆರ್. ಲೇಔಟ್ 17ನೇ ಕ್ರಾಸ್‌ನಲ್ಲಿ ತಮ್ಮ ಪೋಷಕರ ಜತೆ ಸುದೀಪ್ ನೆಲೆಸಿದ್ದಾರೆ. ಮಾ.29ಕ್ಕೆ ಸುದೀಪ್ ಅವರ ವಿಳಾಸಕ್ಕೆ ಅಂಚೆ ಮೂಲಕ ಎರಡು ಪತ್ರಗಳು ಬಂದಿದ್ದವು. ಇವುಗಳನ್ನು ಸ್ವೀಕರಿಸಿದ ಸುದೀಪ್ ಕುಟುಂಬದವರು, ಅವುಗಳನ್ನು ತೆರೆದು ಓದಿದಾಗ ಅವಾಚ್ಯ ಶಬ್ದಗಳ ನಿಂದನೆ ಮತ್ತು ಬೆದರಿಕೆ ಇದ್ದದ್ದು ನೋಡಿ ಆತಂಕಗೊಂಡಿದ್ದರು. ಸುದೀಪ್ ಸೂಚನೆ ಮೇರೆಗೆ ಪುಟ್ಟೇನಹಳ್ಳಿ ಠಾಣೆಗೆ ಅವರ ಮ್ಯಾನೇಜರ್ ದೂರು ನೀಡಿದ್ದರು.
ಆದರೆ ರಮೇಶ್ ಕಿಟ್ಟಿಯ ಹಿಂದೆ ಇನ್ಯಾರೋ ಇದ್ದಾರೆ ಎಂದು ಗೊತ್ತಾಗಿದೆ. ಆತ ಯಾರು ಎಂದು ಹುಡುಕಾಟ ನಡೆಯುತ್ತಿದೆ. ಗೊತ್ತಾದ ನಂತರ.. ರಿಯಲ್ ರಹಸ್ಯ ಹೊರಬೀಳಲಿದೆ.



