ರಿಷಬ್ ಶೆಟ್ಟಿ ಎಡಪಂಥದವರೋ.. ಬಲಪಂಥದವರೋ.. ಗೊತ್ತಿಲ್ಲ. ಆದರೆ ಕಾಂತಾರದ ನಂತರ ಬಲಪಂಥೀಯರು ಸ್ವಲ್ಪ ಜಾಸ್ತಿಯೇ ಲವ್ ಮಾಡ್ತಿದ್ದಾರೆ. ಅದರ ಜೊತೆಗೆ ರಿಷಬ್ ಶೆಟ್ಟಿ, ಸುವರ್ಣ ನ್ಯೂಸ್ ಸಂದರ್ಶನದಲ್ಲಿ ರಾಹುಲ್ ಗಾಂಧಿ ವಿಚಾರಕ್ಕೆ ಹೇಳಿದ್ದ ನೋ ಕಮೆಂಟ್ಸ್ ಉತ್ತರವಂತೂ ವೈರಲ್ ಆಗಿ ಹೋಗಿತ್ತು. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ರಿಷಬ್ ಜೊತೆಯಲ್ಲಿರುವ ಬಹುತೇಕರು ಎಡಪಂಥದವರೇ. ಅವರೆಲ್ಲರ ಜೊತೆ ಅದ್ಭುತ ಸ್ನೇಹ ಚಾಲ್ತಿಯಲ್ಲಿಟ್ಟುಕೊಂಡಿರುವ ರಿಷಬ್ ಶೆಟ್ಟಿ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್.. ಹೀಗೆ ಮೂರೂ ಪಕ್ಷಗಳ ರಾಜಕೀಯ ನಾಯಕರ ಜೊತೆ ಸಂಬಂಧ ಚೆನ್ನಾಗಿಟ್ಟುಕೊಂಡಿದ್ದಾರೆ.
ಇದರ ಮಧ್ಯೆಯೇ ರಿಷಬ್ ಶೆಟ್ಟಿಯವರಿಗೆ ಈ ಪ್ರಶ್ನೆ ಎದುರಾಗಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಇವೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಚಿತ್ರದ ಸಕ್ಸಸ್ ಬಳಿಕ ರಿಷಭ್ ಶೆಟ್ಟಿ ರಾಜಕೀಯ ರಂಗಕ್ಕೆ ಪ್ರವೇಶ ಪಡೆಯುತ್ತಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ವಿಶೇಷವೆಂದರೆ ಈ ಚರ್ಚೆಗೆ ನಟ ರಕ್ಷಿತ್ ಶೆಟ್ಟಿ ಕೂಡ ಜೊತೆಯಾಗಿದ್ದಾರೆ. ಹಾಗಾದರೆ ಯಾವ ಪಕ್ಷ ಸೇರ್ತಾರೆ? ಮಹಿಳೆಯೊಬ್ಬರು ಟ್ವಿಟ್ಟರ್ ನಲ್ಲಿ ರಿಷಭ್ ಶೆಟ್ಟಿ ರಾಜಕೀಯಕ್ಕೆ ಸೇರುತ್ತಾರಾ? ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರ ಕೊಟ್ಟ ರಿಷಬ್ ಶೆಟ್ಟಿ ಸುಮ್ನೆ ಇರಿ ಮರ್ರೆ.. ಸುಳ್ ಸುದ್ದಿ. ಏಪ್ರಿಲ್ ಫೂಲ್ ಅಂತಾ ಹೇಳಿ..ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ ಎಂದಿದ್ದಾರೆ. ಮತ್ತೊಂದು ಕಮೆಂಟ್ ನಲ್ಲಿ ಬನ್ನಿ ಶೆಟ್ರೆ ನಮ್ಮ ಫುಲ್ ಸಪೂರ್ಟ್ ನಿಮಗೆ ಎಂದು ರಕ್ಷಿತ್ ಮತ್ತು ರಿಷಭ್ ಗೆ ಟ್ಯಾಗ್ ಮಾಡಲಾಗಿದೆ. ಇದಕ್ಕ ಉತ್ತರಿಸಿರುವ ರಿಷಭ್ ಶೆಟ್ಟಿ ಬೇಡ ದೇವ್ರು, ಬೇಡ ದೇವ್ರು, ನನ್ನ ಸಿನಿಮಾಗೆ ನಿಮ್ಮ ಸಪೋರ್ಟ್ ಇದ್ರೆ ಸಾಕು ಎಂದಿದ್ದಾರೆ.
ಇವುಗಳಿಗೆಲ್ಲ ಉತ್ತರ ಕೊಡುವಾಗ ರಕ್ಷಿತ್ ಶೆಟ್ಟಿ ಎಂಟ್ರಿ ಕೊಟ್ಟು ರಿಷಬ್ ಎಂದೂ ರಾಜಕೀಯಕ್ಕೆ ಹೋಗಲ್ಲ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ರಿಷಬ್ ಶೆಟ್ಟಿ ನಾವು ಕ್ಷೇತ್ರ ಬಿಟ್ಟು ಹೋಗಬಾರದು. ಸಿನಿಮಾ ಕ್ಷೇತ್ರವೇ ನಮಗೆ ಸಾಕು ಮಗಾ.. ಜನ ಆಶೀರ್ವಾದ ಮಾಡಿದ್ದಾರೆ ಎಂದಿದ್ದರೆ, ಅದಕ್ಕೆ ಫೈನಲ್ ಟಚ್ ಕೊಟ್ಟಿರೋ ರಕ್ಷಿತ್ ಶೆಟ್ಟಿ ಸೂಪರ್ ಮಗಾ.. ಲವ್ ಯೂ.. ಹೋಗಿ ಬರೀ ಇವಾಗ ಎಂದಿದ್ದಾರೆ.



