ಒಂದು ಟಗರು. ಆ ಟಗರಿಗೆ ಲಕ್ಷ ಲಕ್ಷ ಅಭಿಮಾನಿಗಳು. ಫ್ಯಾನ್ಸ್ ಗ್ರೂಪ್`ಗಳು. ಹೋದಲ್ಲಿ.. ಬಂದಲ್ಲಿ.. ಸ್ಟಾರ್ ಕಲಾವಿದರಿಗೆ ಸಿಗುವಂತಹ ಸ್ವಾಗತ.. ಸನ್ಮಾನ.. ಈ ಟಗರುಗೆ ಅಭಿಮಾನಿಗಳೇ ಕೊಟ್ಟ ಹೆಸರು 7 ಸ್ಟಾರ್ ಸುಲ್ತಾನ್. ಊರು ಬಾಗಲಕೋಟೆ. ಇನ್ನೇನು ಈ ಬಕ್ರೀದ್`ನಲ್ಲಿ ಮಟನ್ ಆಗಬೇಕಿದ್ದ 7 ಸ್ಟಾರ್ ಸುಲ್ತಾನ್`ನನ್ನು ಅಭಿಮಾನಿಗಳೇ ಬದುಕಿಸಿದ್ದಾರೆ. ಈ 7 ಸ್ಟಾರ್ ಸುಲ್ತಾನ್`ಗೆ ಟಗರುಪಲ್ಯ ಚಿತ್ರದಲ್ಲೊಂದು ಕ್ಯಾರೆಕ್ಟರ್ ಇದೆ.


ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ ಮೊಹಮ್ಮದ್ ಯುನೂಸ್ ಗಡೇದ ಇದರ ಮಾಲೀಕರು. ಎರಡೂವರೆ ವರ್ಷದ ಹಿಂದೆ ಬಕ್ರೀದ್ ಹಬ್ಬದಲ್ಲಿ ಕುರ್ಬಾನಿಗಾಗಿ ಈ ಟಗರನ್ನು 1.88 ಲಕ್ಷ ರೂ.ಗೆ ಖರೀದಿಸಲಾಗಿತ್ತು. ಆದರೆ ಕುರ್ಬಾನಿಗೂ ಮುನ್ನ ಟಗರು ಕಾಳಗದಲ್ಲಿ ಮೊದಲ ಬಹುಮಾನ ಗೆದ್ದಿತ್ತು. ಎರಡೂವರೆ ವರ್ಷದ ಅವಧಿಯಲ್ಲಿ 34 ಸ್ಪರ್ಧೆಗಳಲ್ಲಿ ಸುಲ್ತಾನ್ ಪ್ರಥಮ ಸ್ಥಾನ ಪಡೆದಿದೆ. ಈವರೆಗೆ 20 ಲಕ್ಷಕ್ಕೂ ಅಧಿಕ ಹಣ, ಬುಲೆಟ್, ಹೊಂಡಾ ಬೈಕ್, ಒಂದೂವರೆ ತೊಲ ಚಿನ್ನ ಗೆದ್ದಿದೆ. ಈ ಟಗರಿನ ಡಿಚ್ಚಿ ಹೇಗಿರುತ್ತದೆ ಎಂದರೆ ಒಂದೇ ಹೊಡೆತಕ್ಕೆ ಎದುರಾಳಿ ಹಿಂದೆ ಸರಿಯುತ್ತಿದೆ. ಉದ್ದ ಕೋಡಿನ ಬಿಳಿ ಬಣ್ಣದ ಟಗರಿನ ಖ್ಯಾತಿ ಎಲ್ಲೆಡೆ ಹಬ್ಬಿದೆ. ಇತ್ತೀಚೆಗೆ ಟಗರಿನ ಮಾಲೀಕ ಮಹಮ್ಮದ್ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ನೀಡುವುದಾಗಿ ಹೇಳಿಕೊಂಡಿದ್ದರು.


ಟಗರುಪಲ್ಯ ಸಿನಿಮಾ ರಿಲೀಸ್ ಆಗುವುದಕ್ಕೆ ಸಿದ್ಧವಾಗುತ್ತಿದೆ. ಡಾಲಿ ಧನಂಜಯ್ ನಿರ್ಮಾಪಕರಾಗಿರುವ ಚಿತ್ರವಿದು.



